ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಿಂದ ಸಾಮಾಜಿಕ, ಆರ್ಥಿಕ ಸಮಸ್ಯೆ: ಜಿ.ಪಂ ಸಿಇಒ ದಿವ್ಯಾಪ್ರಭು

ಮಕ್ಕಳ ಸಹಾಯವಾಣಿ ಸಪ್ತಾಹ– ಸಮಾಲೋಚನಾ ಸಭೆ
Last Updated 15 ನವೆಂಬರ್ 2021, 13:56 IST
ಅಕ್ಷರ ಗಾತ್ರ

ಮಂಡ್ಯ: ‘ಕೋವಿಡ್‌ ಕೇವಲ ಒಂದು ರೋಗವಲ್ಲ, ಅದು ಸಮಾಜದ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಯಾಗಿದೆ. ಸದ್ಯ ಸೃಷ್ಟಿಯಾಗಿರುವ ಸಾಮಾಜಿಕ ಸಮಸ್ಯೆ ನಡುವೆ ಮಕ್ಕಳನ್ನು ಸಂರಕ್ಷಣೆ ಮಾಡುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ದಿವ್ಯಾ ಪ್ರಭು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಹಾಯವಾಣಿ ವತಿಯಿಂದ ನಗರದ ಬಾಲಭವನದಲ್ಲಿ ಸೋಮವಾರ ‘ಮಕ್ಕಳ ಸಹಾಯವಾಣಿ ಸಪ್ತಾಹ’ ಅಂಗವಾಗಿ ನಡೆದ ಸಮಾಲೋಚನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಕೋವಿಡ್‌ ಬಂದ ನಂತರ ಸಮಾಜದಲ್ಲಿ ಹಲವು ಬದಲಾವಣೆಗಳು ಆಗಿವೆ. ಅಸಂಖ್ಯಾತ ಜನರು ಕೆಲಸ ಕಳೆದುಕೊಂಡಿದ್ದಾರೆ, ಆರ್ಥಿಕವಾಗಿ ಅಪಾರ ನಷ್ಟ ಅನುಭವಿಸಿದ್ದಾರೆ. ಇಂತಹ ಸಂದರ್ಭಗಳ ಪರಿಣಾಮ ಮಕ್ಕಳ ಮೇಲೂ ಬೀರಲಿದೆ. ಇಂತಹ ಸಂದರ್ಭದಲ್ಲಿ ಮಕ್ಕಳ ರಕ್ಷಣೆ ಎಂಬುದು ಬಹಳ ಮುಖ್ಯವಾಗಬೇಕು. ಮಕ್ಕಳ ರಕ್ಷಣೆ ಕೇವಲ ಒಬ್ಬರಿಂದ ಆಗುವುದಿಲ್ಲ. ಎಲ್ಲರೂ ಕೈಜೋಡಿಸಿ ಸಮಸ್ಯೆಗಳಿಂದ ಮಕ್ಕಳನ್ನು ರಕ್ಷಣೆ ಮಾಡಬೇಕು’ ಎಂದರು.

‘ಮಕ್ಕಳ ರಕ್ಷಣೆ ಮನೆಯಿಂದ ಆರಂಭವಾಗಿ ನಂತರ ಅಂಗನವಾಡಿ, ಶಾಲೆಗಳ ಮೂಲಕ ಮುಂದುವರಿಯುತ್ತದೆ. ಈ ವಿಚಾರದಲ್ಲಿ ಎಲ್ಲರೂ ಕೈಜೋಡಿಸಿ ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡಬೇಕು. ಶಿಕ್ಷಣ ಎಂದರೆ ಕೇವಲ ಕಲಿಕೆ ಮಾತ್ರವಲ್ಲ, ಮನೆಯಲ್ಲೂ ಕಲಿಯಬಹುದು. ಶಿಸ್ತು, ಸಂಯಮ, ಬದುಕಿನ ಪಾಠ ಕಲಿಯುವುದಕ್ಕಾಗಿ ಶಾಲೆಗೆ ತೆರಳಬೇಕು. ಒಂದು ಉತ್ತಮ ವಾತಾವರಣದಲ್ಲಿ ಅವರು ಕಲಿಯುವಂತಾಗಬೇಕು’ ಎಂದು ಹೇಳಿದರು.

‘ಕೋವಿಡ್‌ ಸಂಕಷ್ಟದ ನಂತರ ಈಗಷ್ಟೇ ಶಾಲೆಗಳು ಆರಂಭವಾಗಿವೆ. ಅಂಗನವಾಡಿ, ಪೂರ್ವ ಪ್ರಾಥಮಿಕ ಶಾಲೆಗಳೂ ಆರಂಭವಾಗಿವೆ. ಮನೆಯಲ್ಲೇ ಇದ್ದ ಮಕ್ಕಳು ಶಾಲೆಗೆ ತೆರಳಿದ್ದಾರೆ. ಇಂತಹ ಸಂದರ್ಭದಲ್ಲಿ ಶಿಕ್ಷಕರು ಮಕ್ಕಳಿಗೆ ಒಂದು ಶಾಲಾ ವಾತಾವರಣವನ್ನು ಕಟ್ಟಿಕೊಡಬೇಕು. ಸುರಕ್ಷಿತಾ, ಸಂರಕ್ಷಣೆ, ಭದ್ರತಾ ಮನೋಭಾವ ಮಕ್ಕಳಲ್ಲಿ ಮೂಡುವಂತಾಗಬೇಕು’ ಎಂದು ಹೇಳಿದರು.

ಹಿರಿಯ ನ್ಯಾಯಾಧೀಶರಾದ ನಳಿನಾ ಕುಮಾರಿ ಮಾತನಾಡಿ ‘ಮಕ್ಕಳ ರಕ್ಷಣೆ ಎಂಬುದು ಒಂದು ದಿನದಲ್ಲಿ ನಡೆಯುವಂಥದ್ದಲ್ಲ, ಅದು ನಿರಂತರವಾಗಿ ನಡೆಯಬೇಕು. ಪ್ರತಿಯೊಬ್ಬ ನಾಗರಿಕ ಮಗುವಾಗಿಯೇ ಬೆಳೆದಿರುತ್ತಾರೆ, ಮಕ್ಕಳಾಗಿರುತ್ತಾರೆ. ಆದರೆ ಬೆಳೆದಂತೆಲ್ಲಾ ನಾವು ಮಗುವಿನ ಮುಗ್ಧತೆಯನ್ನು ಕಳೆದುಕೊಳ್ಳುತ್ತೇವೆ. ಮಕ್ಕಳು ಹುಟ್ಟುವಾಗ ಅವರಿಗೆ ಯಾವುದೇ ಭಯ ಇರುವುದಿಲ್ಲ. ಆದರೆ ನಾವೇ ಅವರಲ್ಲಿ ಭಯದ ಭಾವನೆ ಮೂಡಿಸುತ್ತೇವೆ’ ಎಂದರು.

‘ಮಕ್ಕಳನ್ನು ಭಯದಲ್ಲೇ ಬೆಳೆಸುತ್ತೇವೆ. ಮಕ್ಕಳು ಬಾಲ್ಯವನ್ನು ಸಂತಸದಲ್ಲಿ ಕಳೆಯಬೇಕು. ಪೋಷಕರು ಅವರ ಬಾಲ್ಯವನ್ನು ಸಂತಸದಿಂದ ಇಡಬೇಕು. ಮಕ್ಕಳ ಮನಸ್ಸನ್ನು ನಿಷ್ಕಲ್ಮಷವಾಗಿ ಇಡಬೇಕು. ಮಕ್ಕಳಲ್ಲಿರುವ ಮುಗ್ಧತೆಯನ್ನು ಪೋಷಕರು ಮುಂದುವರಿಸುವ ಕೆಲಸ ಮಾಡಬೇಕು. ಆ ಮೂಲಕ ಸಮಾಜದಲ್ಲಿ ಸುರಕ್ಷತಾ ಮನೋಭಾವ ಮೂಡಿಸಬೇಕು’ ಎಂದರು.

ಕಾರ್ಯಕ್ರಮದಲ್ಲಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಸ್‌.ರಾಜಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಂಗೇಗೌಡ, ಮಕ್ಕಳ ಸಹಾಯವಾಣಿಯ ವೆಂಕಟೇಶ್‌, ವಿಕಸನ ಸಂಸ್ಥೆಯ ಮಹೇಶಚಂದ್ರ ಗುರು, ಬಿಆರ್‌ಸಿ ನಾಗರಾಗ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT