ಸೋಮವಾರ, ಫೆಬ್ರವರಿ 17, 2020
24 °C
ಕೆ.ಆರ್.ಪೇಟೆ ತಾಲ್ಲೂಕಿನ ಹೇಮಗಿರಿಯಲ್ಲಿರುವ ದೇವಸ್ಥಾನ, ಸಾವಿರಾರು ಮಂದಿ ಭಾಗಿ

ಕೆ.ಆರ್.ಪೇಟೆ: ಸಂಭ್ರಮದ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆ.ಆರ್.ಪೇಟೆ: ತಾಲ್ಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಹೇಮಗಿರಿಯ ಕಲ್ಯಾಣ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ಭಾನುವಾರ ಸಂಭ್ರಮ, ಸಡಗರದಿಂದ ನಡೆಯಿತು.

ವೆಂಕಟರಮಣ ಸ್ವಾಮಿ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿದ ಬಳಿಕ ಪ್ರಧಾನ ಅರ್ಚಕ ರಾಮಭಟ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆಯಿತು.

ಉತ್ಸವ ಮೂರ್ತಿಗೆ ಶಾಸಕ ನಾರಾಯಣಗೌಡ, ಉಪವಿಭಾಗಾ ಧಿಕಾರಿ ವಿ.ಆರ್.ಶೈಲಜಾ, ತಹಶೀಲ್ದಾರ್ ಎಂ.ಶಿವಮೂರ್ತಿ, ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ವಿ.ಜೆ.ರವಿರೆಡ್ಡಿ ಅವರು ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾದಿಗಳು ರಥಕ್ಕೆ ಹಣ್ಣು-ಜವನ ಎಸೆದು ಕೃತಾರ್ಥರಾದರು. ಉಘೇ ಉಘೇ, ಉಘೇ ವೆಂಕಟರಮಣ, ನಮೋ ಗೋವಿಂದ ಎಂಬ ಜಯಘೋಷಗಳು ಮೊಳಗಿದವು.

ನಾರಾಯಣಗೌಡ ಮಾತನಾಡಿ, ‘ಹೇಮಗಿರಿ ದನಗಳ ಜಾತ್ರೆಯು ರಾಜ್ಯಕ್ಕೇ ಮಾದರಿಯಾಗಿದೆ. ಸಾವಿರಾರು ರಾಸುಗಳನ್ನು ಜಾತ್ರೆಗೆ ತರಲಾಗುತ್ತದೆ. ಆದರೆ, ರಥೋತ್ಸವಕ್ಕೂ ಮುನ್ನವೇ ದನಗಳ ಜಾತ್ರೆ ಮುಗಿಯುವುದರಿಂದ ಜಾತ್ರಾ ಮಾಳವೇ ಖಾಲಿಯಾಗುವುದು ರಥೋತ್ಸವದ ವೈಭವವನ್ನು ಕಡಿಮೆ ಮಾಡುತ್ತದೆ. ಮುಂದಿನ ವರ್ಷ ದನಗಳ ಜಾತ್ರೆಗೆ ರೈತರು ರಥೋತ್ಸವಕ್ಕೆ 3 ದಿನಗಳು ಮುಂಚಿತವಾಗಿ ಬಂದು ರಥೋತ್ಸವದಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಸ್.ಅಂಬರೀಶ್, ಸದಸ್ಯ ರಾಮದಾಸು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮೀ ಸ್ವಾಮಿನಾಯಕ, ಸದಸ್ಯ ನಿಂಗೇಗೌಡ, ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಕಬ್ಬು ವಿಭಾಗದ ವ್ಯವಸ್ಥಾಪಕ ಕೆ.ಬಾಬೂರಾಜ್, ದತ್ತಾತ್ರೇಯ, ಆದಿಚುಂಚನಗಿರಿ ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿ ಡಾ.ಜೆ.ಎನ್. ರಾಮಕೃಷ್ಣೇಗೌಡ, ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ಗೌರವಾಧ್ಯಕ್ಷ ಕೆ.ಜೆ.ಅಣ್ಣಯ್ಯ, ಸಿಪಿಐ ಕೆ.ಎನ್.ಸುಧಾಕರ್, ವಿ.ಸಿ ಫಾರಂನ ಕಬ್ಬು ತಳಿಯ ವಿಜ್ಞಾನಿ ಕೇಶವಯ್ಯ, ರಾಜಸ್ವ ನಿರೀಕ್ಷಕಿ ಚಂದ್ರಕಲಾ ಪ್ರಕಾಶ್ ಇದ್ದರು.

ಉತ್ತಮ ರಾಸುಗಳಿಗೆ ಪ್ರಶಸ್ತಿ

ಜಾತ್ರೆಯಲ್ಲಿ ಭಾಗವಹಿಸಿದ್ದ ಉತ್ತಮ ರಾಸುಗಳಿಗೆ ಕೋರಮಂಡಲ್ ಸಕ್ಕರೆ ಕಾರ್ಖಾನೆ ವತಿಯಿಂದ ಬಹುಮಾನ ವಿತರಿಸಲಾಯಿತು. 4 ವಿಭಾಗಗಳಲ್ಲಿ 90ಕ್ಕೂ ಹೆಚ್ಚು ಬಹುಮಾನಗಳನ್ನು ನೀಡಲಾಯಿತು. ಪ್ರಥಮ ಬಹುಮಾನ 5 ಗ್ರಾಂ ಚಿನ್ನದ ನಾಣ್ಯ, ದ್ವಿತೀಯ ಬಹುಮಾನ 100 ಗ್ರಾಂ ಬೆಳ್ಳಿಯ ನಾಣ್ಯ, ತೃತೀಯ ಬಹುಮಾನ 50 ಗ್ರಾಂ ಬೆಳ್ಳಿಯ ನಾಣ್ಯ ನೀಡಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು