ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಮರ್ಯಾದೆಗೇಡು ಹತ್ಯೆ: ನಿಷ್ಪಕ್ಷಪಾತ ತನಿಖೆಗೆ ಒತ್ತಾಯ

Last Updated 30 ಅಕ್ಟೋಬರ್ 2020, 13:38 IST
ಅಕ್ಷರ ಗಾತ್ರ

ಮಂಡ್ಯ: ‘ಪಾಂಡವಪುರ ತಾಲ್ಲೂಕು ತಿರುಮಲಾಪುರ ಗ್ರಾಮದಲ್ಲಿ ಮರ್ಯಾದೆಗೇಡು ಪ್ರಕರಣ ನಡೆದಿದೆ. ಪ್ರಕರಣದ ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸದೆ ಪೊಲೀಸರು ಕಾಲಹರಣ ಮಾಡುತ್ತಿದ್ದಾರೆ. ಸೂಕ್ತ ತನಿಖೆ ನಡೆಸದ ಪೊಲೀಸ್‌ ಅಧಿಕಾರಿಯನ್ನು ಅಮಾನತುಗೊಳಿಸಬೇಕು. ಸಮರ್ಥ ಅಧಿಕಾರಿಯನ್ನು ನೇಮಿಸಿ ಎಸ್‌ಪಿ ಅವರ ಕಣ್ಗಾವಲಿನಲ್ಲಿ ಶೀಘ್ರ, ನಿಷ್ಪಕ್ಷಪಾತ ತನಿಖೆ ನಡೆಸಬೇಕು’ ಎಂದು ದಸಂಸ ರಾಜ್ಯ ಘಟಕದ ಸಂಚಾಲಕ ಗುರುಪ್ರಸಾದ್‌ ಕೆರಗೋಡು ಆಗ್ರಹಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಮಳವಳ್ಳಿ ತಾಲ್ಲೂಕು ನಂಜೇಗೌಡನದೊಡ್ಡಿ ಗ್ರಾಮದ ಮಹದೇವಮ್ಮ ಅವರ ಮಗಳು ಅನ್ಯ ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದು, ಜಾತಿ ಕಾರಣಕ್ಕೆ ಕೊಲೆ ಮಾಡಿದ್ದಾರೆ. ಅನಾಥ ಶವ ಪತ್ತೆ ಪ್ರಕರಣವೊಂದರಲ್ಲಿ ಮಗಳನ್ನು ತಾಯಿ ಗುರುತು ಹಿಡಿದಿದ್ದು, ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಗಂಡನ ಮನೆಯವರನ್ನು ಬಂಧಿಸಿ ವಿಚಾರಣೆ ನಡೆಸಿ, ಸಾಂತ್ವನ ಹೇಳದೆ ಹುಡುಗಿಯ ತಾಯಿಯನ್ನೇ ಇನ್ನಿಲ್ಲದ ಪ್ರಶ್ನೆಗಳನ್ನು ಕೇಳಿ ಪೊಲೀಸರು ಮತ್ತಷ್ಟು ನೋವುಂಟು ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನೊಂದವರ ರಕ್ಷಣೆ ಮಾಡಿ, ನ್ಯಾಯ ಒದಗಿಸುವಲ್ಲಿ ಪೊಲೀಸರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಸಾಕ್ಷ್ಯಾಧಾರ ಇದ್ದರೂ ವಿಚಾರಣೆ ಮಾಡದೆ ಕಾಲ ದೂಡುತ್ತಿದ್ದಾರೆ. ಈಗಾಗಲೇ ಈ ಸಂಬಂಧ ಪಾಂಡಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಹತ್ತು ದಿನ ಕಳೆದರೂ ಗ್ರಾಮಕ್ಕೆ ಭೇಟಿ ನೀಡಿಲ್ಲ. ಪಾಂಡವಪುರ ತಾಲ್ಲೂಕಿನ ತಿರುಮಲಾಪುರದ ಯುವಕ ಟಿ.ಕೆ.ಸ್ವಾಮಿ ಮತ್ತು ಕುಟುಂಬವನ್ನು ಕೂಡಲೇ ಬಂಧಿಸಿ, ಪ್ರಕರಣದ ಸೂಕ್ತ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಪೊಲೀಸರ ನಿರ್ಲಕ್ಷ್ಯ ಖಂಡಿಸಿ ವಿವಿಧ ಸಂಘಟನೆಗಳ ಜೊತೆಗೂಡಿ ನ. 6ರಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಗುವುದು. ಆರೋಪಿಗಳನ್ನು ಬಂಧಿಸದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ರೂಪಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಯುವತಿಯ ತಾಯಿ ಮಹದೇವಮ್ಮ ಮಾತನಾಡಿ ‘ದೂರು ಕೊಡಲು ತೆರಳಿದಾಗ ಪೊಲೀಸರು ಇಲ್ಲಸಲ್ಲದ ಪ್ರಶ್ನೆ ಕೇಳಿದರು. ಮಗಳು ಮದುವೆಯಾಗಿರುವುದಕ್ಕೆ ಸಾಕ್ಷಿ ಏನು, ಆಕೆ ಸತ್ತಿದ್ದಾಳೆ ಎಂಬುದಕ್ಕೆ ಸಾಕ್ಷಿ ಏನು, ಈ ಸಂಬಂಧ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುವ ಸಂದರ್ಭದಲ್ಲಿ ಲಾಕಪ್‌ಡೆತ್‌ ಆದರೆ ನಾವು ಮನೆಗೆ ಹೋಗಬೇಕಾಗುತ್ತದೆ. ಐದು ವರ್ಷದಿಂದ ಏನು ಮಾಡುತ್ತಿದ್ದಿರಿ ಎಂಬ ಪ್ರಶ್ನೆಗಳನ್ನು ಕೇಳಿ ದಿಗಿಲು ಹುಟ್ಟಿಸಿದ್ದಾರೆ’ ಎಂದು ಆರೋಪಿಸಿದರು.

ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ದೇವಿ, ಜನಶಕ್ತಿ ಸಂಘಟನೆಯ ಎಂ.ಸಿದ್ದರಾಜು, ಮುಖಂಡರಾದ ದೇವರಾಜು, ರಮಾನಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT