ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಹಳ್ಳಿ: ಮನೆಗಳ ಹಸ್ತಾಂತರ ಇಂದು

2 ವರ್ಷಗಳ ಹಿಂದೆಯೇ ನಿರ್ಮಾಣಗೊಂಡಿದ್ದ 632 ಮನೆ, ‘ಪ್ರಜಾವಾಣಿ’ಯಿಂದ ನಿರಂತರ ವರದಿ
Last Updated 2 ಜುಲೈ 2022, 3:02 IST
ಅಕ್ಷರ ಗಾತ್ರ

ಮಂಡ್ಯ: ಕೊನೆಗೂ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ನಗರದ ಹಾಲಹಳ್ಳಿ ಕೊಳೆಗೇರಿ ನಿವಾಸಿಗಳಿಗೆ 2 ವರ್ಷದ ಹಿಂದೆಯೇ ನಿರ್ಮಾಣಗೊಂಡಿದ್ದ 632 ಮನೆಗಳ ಹಸ್ತಾಂತರ ಮಾಡಲು ನಿರ್ಧರಿಸಿದೆ. ಶನಿವಾರ (ಜು.2) ವಸತಿ ಸಚಿವ ವಿ.ಸೋಮಣ್ಣ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಿದ್ದಾರೆ.

ರಾಜೀವ್‌ ಆವಾಸ್‌ ಯೋಜನೆ ಅಡಿ ಕೊಳಚೆ ನಿರ್ಮೂಲನಾ ಮಂಡಳಿ ಹಾಲಹಳ್ಳಿಯಲ್ಲಿ ಜಿ ಪ್ಲಸ್‌ 1 ಮಾದರಿಯ 632 ಮನೆ ನಿರ್ಮಾಣ ಮಾಡಿತ್ತು. ಸದ್ಯ ಈ ಯೋಜನೆ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಲ್ಲಿ ವಿಲೀನಗೊಂಡಿದೆ. ಕಳೆದ 2 ವರ್ಷಗಳ ಹಿಂದೆಯೇ ಕಾಮಗಾರಿ ಪೂರ್ಣಗೊಂಡಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮನೆ ವಿತರಣೆ ಮಾಡಿರಲಿಲ್ಲ. ಹೆಚ್ಚುವರಿ 80 ಮನೆಗಳ ನಿರ್ಮಾಣಕ್ಕಾಗಿ ಪೂರ್ಣಗೊಂಡಿರುವ 632 ಮನೆಗಳ ವಿತರಣೆ ನನೆಗುದಿಗೆ ಬಿದ್ದಿತ್ತು.

ಪೂರ್ಣಗೊಂಡಿರುವ ಮನೆ ಗಳು ಅನೈತಿಕ ಚಟುವಟಿಕೆಗಳ ತಾಣವಾ ಗಿದ್ದವು, ಕಿಡಿಗೇಡಿಗಳು ಕಿಟಕಿ, ಬಾಗಿಲುಗಳನ್ನು ಮುರಿದು ಹಾಕಿದ್ದರು. ಗಾಜುಗಳನ್ನು ಒಡೆದು ಹಾಕಿದ್ದರು. ಕಾಮಗಾರಿ ಆರಂಭವಾದ ದಿನದಿಂದಲೂ ಅಲ್ಲಿಯ ನಿವಾಸಿಗಳು ಶೆಡ್‌ಗಳಲ್ಲೇ ಜೀವನ ನಡೆಸುತ್ತಿದ್ದರು. ಮಳೆ ಬಂದಾಗ ಶೆಡ್‌ಗೆ ನೀರು ನುಗ್ಗಿ ಅವರ ಬದುಕು ಬೀದಿಗೆ ಬೀಳುತ್ತಿತ್ತು. ಈ ಕುರಿತು ಪ್ರಜಾವಾಣಿ ‘ಮನೆ ಮರೀಚಿಕೆ’ ಅಂಕಣದಡಿ ಸರಣಿ ವರದಿ ಮಾಡಿತ್ತು. ಪೂರ್ಣಗೊಂಡಿರುವ ಮನೆಗಳ ಹಸ್ತಾಂತರಕ್ಕೆ ಒತ್ತಾಯಿಸಿ ನಿರಂತರ ವರದಿ ಪ್ರಕಟಿಸಿತ್ತು.

ಕಡೆಗೂ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ, ಕೊಳಚೆ ನಿರ್ಮೂಲನಾ ಮಂಡಳಿ ಮನೆಗಳ ಹಸ್ತಾಂತರ ಮಾಡುತ್ತಿದೆ. ಸಚಿವ ಸೋಮಣ್ಣ ಶನಿವಾರ ಮಧ್ಯಾಹ್ನ 3 ಗಂಟೆಗೆ ಮನೆ ಉದ್ಘಾಟನೆ ಮಾಡುತ್ತಿದ್ದು ಸಚಿವ ಕೆ.ಸಿ.ನಾರಾಯಣಗೌಡ ಭಾಗಿಯಾ
ಗುತ್ತಾರೆ. ಜಿಲ್ಲಾಧಿಕಾರಿ ಎಸ್‌.ಅಶ್ವತಿ ಸೇರಿದಂತೆ ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಭಾಗವಹಿಸುವರು.

ಒಟ್ಟು 712 ಮನೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಅಂಬರೀಷ್‌ ಅವರು ವಸತಿ ಇಲಾಖೆ ಸಚಿವರಾಗಿದ್ದ ವೇಳೆಯಲ್ಲಿ ಕಾಮಗಾರಿ ಆರಂಭಗೊಂಡಿತ್ತು. ಸದ್ಯ 632 ಮನೆಗಳು ಈಗಾಗಲೇ ನಿರ್ಮಾಣವಾಗಿದ್ದು, ಉಳಿದ 80 ಮನೆಗಳ ನಿರ್ಮಾಣವಾಗಬೇಕಿದೆ. ಪೂರ್ಣಗೊಂಡಿರುವ ಮನೆಗಳನ್ನು ಹಸ್ತಾಂತರ ಮಾಡಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದರು.

ಮನೆಗಳ ಅಕ್ಕಪಕ್ಕದಲ್ಲಿ ನಿವೇಶನವಿದ್ದರೂ ಸದ್ಯ ನಿರ್ಮಾಣಗೊಂಡಿರುವ ಮನೆಗಳ ಮೇಲೆಯೇ ಜಿ ಪ್ಲಸ್‌ 3 ಮನೆ ನಿರ್ಮಿಸಲು ಮುಂದಾಗಿದ್ದರು. ಆದರೆ ಇದನ್ನು ಖಂಡಿಸಿ ಅಲ್ಲಿಯ ನಿವಾಸಿಗಳು ಪ್ರತಿಭಟನೆ ಹಾದಿ ಹಿಡಿದಿದ್ದರು. ಈಚೆಗೆ ಸುಮಲತಾ ಭೇಟಿ ನೀಡಿ ಪೂರ್ಣಗೊಂಡಿರುವ ಮನೆಗಳನ್ನು ತಕ್ಷಣವೇ ಹಸ್ತಾಂತರ ಮಾಡಬೇಕು ಎಂದು ಒತ್ತಾಯಿಸಿದ್ದರು.

ಮೊದಲು ಮಾರ್ಚ್‌ 31ರಂದು ಮನೆಗಳ ಹಸ್ತಾಂತರಕ್ಕೆ ದಿನಾಂಕ ನಿಗದಿಯಾಗಿತ್ತು. ಮತ್ತೆ ದಿನಾಂಕ ವಿಸ್ತರಣೆಯಾಯಿತು. ಕಡೆಗೂ ಕಾಲ ಕೂಡಿ ಬಂದಿದ್ದು ಶನಿವಾರ ನಿವಾಸಿಗಳು ಮನೆ ಸ್ವೀಕಾರ ಮಾಡಲಿದ್ದಾರೆ.

2014ರಲ್ಲಿ ರಾಜೀವ್‌ ಆವಾಸ್‌ ಯೋಜನೆಯಡಿ ಕಾಮಗಾರಿ ಆರಂಭಗೊಂಡಿತ್ತು. ₹ 65 ಕೋಟಿ ವೆಚ್ಚದಲ್ಲಿ 712 ಮನೆಗಳ ಜಿ ಪ್ಲಸ್‌–1 (ತಳ ಮತ್ತು ಮೇಲ್ಮಹಡಿ) ಕಾಮಗಾರಿಗೆ ಯೋಜನೆ ರೂಪಿಸಲಾಗಿತ್ತು. ಒಂದು ವರ್ಷದಲ್ಲಿ ಕಾಮಗಾರಿ ಮುಗಿಸಲು ಗಡುವು ವಿಧಿಸಲಾಗಿತ್ತು. ಆದರೆ ಕುಂಟುತ್ತಾ ಸಾಗಿದ ಕಾಮಗಾರಿ 2019ರಲ್ಲಿ ಪೂರ್ಣಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT