ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾ.31ಕ್ಕೆ ಕೊಳೆಗೇರಿ ನಿವಾಸಿಗಳಿಗೆ ಮನೆ ಹಸ್ತಾಂತರ

ಹಾಲಹಳ್ಳಿ ಕೊಳೆಗೇರಿ: ಬಾಕಿ ಉಳಿದ ಕಾಮಗಾರಿ ಪೂರ್ಣಗೊಳಿಸುವಂತೆ ಸಂಸದೆ ಸುಮಲತಾ ಸೂಚನೆ
Last Updated 23 ಡಿಸೆಂಬರ್ 2020, 4:05 IST
ಅಕ್ಷರ ಗಾತ್ರ

ಮಂಡ್ಯ: ಹಾಲಹಳ್ಳಿ ಕೊಳೆಗೇರಿ ನಿವಾಸಿಗಳಿಗಾಗಿ ನಿರ್ಮಾಣಗೊಂಡಿರುವ 632 ಮನೆಗಳ ಹಸ್ತಾಂತರಕ್ಕೆ ಸಂಸದೆ ಸುಮಲತಾ ದಿನಾಂಕ ಘೋಷಣೆ ಮಾಡಿರುವುದು ಅಲ್ಲಿಯ ನಿವಾಸಿಗಳಲ್ಲಿ ಸಂತಸ ಮೂಡಿಸಿದೆ.

ಕಾಮಗಾರಿ ಪೂರ್ಣಗೊಂಡು ವರ್ಷ ಕಳೆದರೂ ಮನೆ ಹಂಚಿಕೆ ಮಾಡದಿರುವ ಕುರಿತು ಪ್ರಜಾವಾಣಿ ಈಚೆಗೆ ‘ಮನೆ ಮರೀಚಿಕೆ’ ಶೀರ್ಷಿಕೆಯಡಿ ಸರಣಿ ವರದಿ ಪ್ರಕಟಿಸಿತ್ತು. ಕೊಳೆಗೇರಿ ನಿವಾಸಿಗಳ ಸಂಕಷ್ಟ, ಮನೆ ಹಂಚಿಕೆ ಮಾಡದ ಅಧಿಕಾರಿಗಳ ನಿರ್ಲಕ್ಷ್ಯ, ಹೊಸ ಮನೆಗಳಲ್ಲಿ ಕಿಡಿಗೇಡಿಗಳ ಕಾಟ, ನಿವಾಸಿಗಳಿಂದ ಫಲಾನುಭವಿ ವಂತಿಕೆ ವಸೂಲಿ ಕುರಿತು ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು.

ಈ ಕುರಿತು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸಂಸದೆ ಸುಮಲತಾ ಅವರ ಗಮನಕ್ಕೆ ತಂದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸುಮಲತಾ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಮನೆ ಹಂಚಿಕೆಯ ದಿನಾಂಕ ಘೋಷಣೆ ಮಾಡಿದ್ದಾರೆ.

‘ಹಾಲಹಳ್ಳಿ ಕೊಳಗೇರಿಯಲ್ಲಿ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ, ರಾಜೀವ್‌ ಗಾಂಧಿ ಆವಾಸ್‌ ಯೋಜನೆಯಡಿ ನಿರ್ಮಾಣಗೊಂಡಿರುವ 632 ಮನೆಗಳನ್ನು ಮಾರ್ಚ್‌ 31ಕ್ಕೆ ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಗುವುದು’ ಎಂದು ಸಂಸದೆ ಎ.ಸುಮಲತಾ ಹೇಳಿದರು.

‘712 ಮನೆಗಳಲ್ಲಿ 632 ಮನೆಗಳು ಈಗಾಗಲೇ ನಿರ್ಮಾಣವಾಗಿದ್ದು, ಉಳಿದ 80 ಮನೆಗಳ ನಿರ್ಮಾಣವಾಗಬೇಕಿದೆ. ಪೂರ್ಣಗೊಂಡಿರುವ ಮನೆಗಳನ್ನು ಹಸ್ತಾಂತರ ಮಾಡಲಾಗುವುದು. ಪರಸ್ಪರ ಸಹಕಾರ ಇಲ್ಲದಿದ್ದರೆ ಯಾವುದೇ ಸಮಸ್ಯೆ ಬಗೆಹರಿಯುವುದಿಲ್ಲ. 80 ಮನೆಗಳ ನಿರ್ಮಾಣದಲ್ಲಿ ಸಮಸ್ಯೆಯಾಗಿದ್ದು, ಅದನ್ನು ಪರಿಹರಿಸಿ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದರು.

‘ಅಂಬರೀಷ್‌ ಅವರ ಕನಸಾದ ಮನೆಗಳಲ್ಲಿ ಫಲಾನುಭವಿಗಳು ಸಂತೋ ಷದಿಂದ ಇರುವುದನ್ನು ನೋಡಿ ನಾವು ಖುಷಿ ಪಡಬೇಕು. 80 ಮನೆಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದರು.

‘ಅಂಬರೀಷ್‌ ಅವರು ವಸತಿ ಸಚಿವರಾಗಿ ವಸತಿ ಯೋಜನೆಯಡಿ ಸಾವಿರಾರು ಬಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲು ಕಾರ್ಯಕ್ರಮ ರೂಪಿಸಿದ್ದರು. ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ ಐದಾರು ವರ್ಷ ಕಳೆದರೂ ನೂರಾರು ಮನೆಗಳು ಪೂರ್ಣ ಆಗದಿರುವುದು ಬೇಸರ ತಂದಿದೆ’ ಎಂದರು.

‘ಅಂಬರೀಷ್‌ ವಸತಿ ಸಚಿವರಾಗಿ ಒಂದು ವರ್ಷದಲ್ಲಿ ವಸತಿ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ ಪದಕ ಪಡೆದಿದ್ದರು. ಸಚಿವ ಸ್ಥಾನ ಸಿಗುವ ಸಂದರ್ಭದಲ್ಲಿ ಬೇರೆ ಬೇರೆ ಖಾತೆಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದರೂ ಬಡವರಿಗೆ ಸೂರು ಕಲ್ಪಿಸುವ ಖಾತೆಯೇ ಇರಲಿ ಎಂದು ಬಹಳ ಆಸಕ್ತಿಯಿಂದ ಪಡೆದಿದ್ದರು. ಆದರೆ ಇಂದಿಗೂ ಮನೆಗಳಿಲ್ಲದೆ ಶೆಡ್‌ಗಳಲ್ಲಿ ಜನರು ಇರುವುದನ್ನು ನೋಡಿದರೆ ಬಹಳ ನೋವಾಗುತ್ತದೆ’ ಎಂದರು.

‘ಕೊಳಚೆ ಪ್ರದೇಶದಕ್ಕೆ ಮೂಲ ಸೌಕರ್ಯ ಒದಗಿಸಲು ಕೊರತೆಯಿರುವ ಅನುದಾನ ಕುರಿತು ಈಗಾಗಲೇ ಜಿಲ್ಲಾಧಿಕಾರಿ ರಾಜ್ಯ ವಸತಿ ಸಚಿವರ ಗಮನಕ್ಕೆ ತಂದಿದ್ದಾರೆ. ವಸತಿ ಸಚಿವ ವಿ. ಸೋಮಣ್ಣ ಅವರೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆಗೊಳಿಸಲು ಪ್ರಯತ್ನಿಸುತ್ತೇನೆ’ ಎಂದರು.

‘ಕೊಳಗೇರಿ ನಿವಾಸಿಗಳಿಗೆ ಮೂಲ ಸೌಕರ್ಯವಿರುವ ಕಟ್ಟಡ ನಿರ್ಮಾಣ ಕಾಮಗಾರಿಯು ಬಹಳಷ್ಟು ತಡವಾಗಿದ್ದು, ನಿರಾಶ್ರಿತರು ಅತೀ ಕ್ಲಿಷ್ಟ ವಾತಾವರಣದಲ್ಲಿ ಬದುಕು ನಡೆಸುತ್ತಿದ್ಧಾರೆ. ಹವಾಮಾನ ವೈಪರಿತ್ಯದ ಸಂದರ್ಭದಲ್ಲಿ ಸಾಕಷ್ಟು ಅನಾಹುತ ಸಂಭವಿಸುವ ಸಾಧ್ಯತೆ ಇದ್ದು, ಅತಿ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ದಸಂಸ ಮುಖಂಡ ಎಂ.ಬಿ.ಶ್ರೀನಿವಾಸ್‌, ನಗರಸಭೆ ಪರಾಯುಕ್ತ ಎಸ್‌.ಲೋಕೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT