ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೊಲೀಸ್‌ ಠಾಣೆಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ’

ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ಉದ್ಘಾಟನೆ
Last Updated 5 ಜುಲೈ 2018, 9:54 IST
ಅಕ್ಷರ ಗಾತ್ರ

ಮಂಡ್ಯ: ‘ಪೊಲೀಸ್‌ ಠಾಣೆಗಳಲ್ಲಿ ಮಾನವ ಹಕ್ಕುಗಳಿಗೆ ರಕ್ಷಣೆ ಇಲ್ಲದಾಗಿದೆ. ಪೊಲೀಸರು ಕಾನೂನು ಮೀರಿ ವಿಚಾರಣಾ ಪ್ರಕ್ರಿಯೆ ನಡೆಸುತ್ತಾರೆ. ದೂರುದಾರರಿಗೆ ಗೌರವ ನೀಡದೆ ಸಂವಿಧಾನಿಕ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ’ ಎಂದು ವಕೀಲ ಹಾಗೂ ಮಾನವ ಹಕ್ಕುಗಳ ತರಬೇತುದಾರ ಎಂ.ಗುರುಪ್ರಸಾದ್‌ ಹೇಳಿದರು.

ಗಾಂಧಿಭವನದಲ್ಲಿ ಗುರುವಾರ ನಡೆದ ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ಉದ್ಘಾಟನಾ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು. ‘ಪೊಲೀಸ್‌ ಠಾಣೆಗಳಲ್ಲಿ ದೂರುದಾರರನ್ನು ಗೌರವಯುತವಾಗಿ ನಡೆಸಿಕೊಳ್ಳುವುದಿಲ್ಲ. ಕುಳಿತುಕೊಳ್ಳಲು ಕುರ್ಚಿಯನ್ನೂ ಕೊಡುವುದಿಲ್ಲ. ಪ್ರಾಣಿಗಳ ರೀತಿಯಲ್ಲಿ ಹೊರಗೆ ಕಳುಹಿಸುತ್ತಾರೆ. ಆರೋಪಿಗಳನ್ನು ವಿಚಾರಣೆ ಮಾಡುವಾಗ ಅವರ ಮೇಲೆ ದೌರ್ಜನ್ಯ ಎಸಗುತ್ತಾರೆ. ಇವೆಲ್ಲವೂ ಪೊಲೀಸ್‌ ಕಾಯ್ದೆಯ ವಿರುದ್ಧವಾಗಿವೆ. ಆರೋಪಿಗಳ ಮೇಲೆ ಹಲ್ಲೆ ನಡೆಸುವ ಹಕ್ಕು ಪೊಲೀಸರಿಗೆ ಇಲ್ಲ. ಜೊತೆಗೆ ಮಹಿಳೆಯರು, ಸಂತ್ರಸ್ತರು ದೂರು ನೀಡಲು ಠಾಣೆಗೆ ತೆರಳಿದಾಗ ಅವರ ದೂರು ಪಡೆಯದೇ ನಿರ್ಲಕ್ಷ್ಯ ಮಾಡುತ್ತಾರೆ. ಇವೆಲ್ಲವೂ ಮಾನವ ಹಕ್ಕುಗಳ ಉಲ್ಲಂಘನೆಯಾಗಿವೆ’ ಎಂದು ಹೇಳಿದರು.

‘ಪೊಲೀಸ್‌ ದೌರ್ಜನ್ಯ ತಡೆಯುವುದಕ್ಕಾಗಿ ಸರ್ಕಾರ ಪೊಲೀಸ್‌ ದೂರು ಪ್ರಾಧಿಕಾರ ರಚನೆ ಮಾಡಿದೆ. ಪೊಲೀಸರಿಂದ ದೌರ್ಜನ್ಯಕ್ಕೆ ಒಳಗಾದವರು ಪ್ರಾಧಿಕಾರಕ್ಕೆ ದೂರು ನೀಡಬಹುದು. ಮಾನವ ಹಕ್ಕುಗಳ ರಕ್ಷಣೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ದೇಶದ ಸ್ವಾತಂತ್ರ್ಯದ ನಂತರ ಮಾನವ ಹಕ್ಕುಗಳ ಮೇಲೆ ಹೆಚ್ಚು ಅರಿವು ಮೂಡಿಸಲಾಯಿತು. ಇದರಿಂದ ಮಾನವ ಹಕ್ಕುಗಳ ಆಯೋಗ ರಚನೆಯಾಯಿತು. ವಿಶ್ವದೆಲ್ಲೆಡೆ ಈಚೆಗೆ ಈ ಹಕ್ಕುಗಳ ಮೇಲೆ ಜಾಗೃತಿ ಮೂಡುತ್ತಿದೆ’ ಎಂದು ಹೇಳಿದರು.

ತಹಶೀಲ್ದಾರ್‌ ಡಿ.ಎಲ್‌.ನಾಗೇಶ್‌ ಮಾತನಾಡಿ ‘ಭ್ರಷ್ಟಾಚಾರ ಕ್ಯಾನ್ಸರ್‌ ರೋಗವಿದ್ದಂತೆ. ಈ ಕ್ಯಾನ್ಸರ್‌ ರೋಗ ನಿರ್ಮೂಲನೆಗೆ ಈಗ ಹಲವು ಔಷಧಿ ಕಂಡು ಹಿಡಿಯಲಾಗಿದೆ. ಅದರಂತೆ ಭ್ರಷ್ಟಾಚಾರ ನಿರ್ಮೂಲನೆಗೆ ಸಿಬಿಐ, ಲೋಕ್‌ಪಾಲ್‌, ಲೋಕಾಯುಕ್ತ ಮುಂತಾದ ಸಂಸ್ಥೆಗಳನ್ನು ರಚನೆ ಮಾಡಲಾಗಿದೆ. ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಇದರ ನಿರ್ಮೂಲಕನೆಗೆ ಎಲ್ಲರೂ ಹೋರಾಟ ನಡೆಸಬೇಕು. ಭ್ರಷ್ಟಾಚಾರ ಹೆಚ್ಚಾದರೆ ದೇಶ ಎಲ್ಲಾ ರಂಗಗಳಲ್ಲೂ ಹಿಂದುಳಿಯುತ್ತದೆ’ ಎಂದು ಹೇಳಿದರು.

ಜಿಲ್ಲಾ ಆಯುಷ್‌ ವೈದ್ಯಾಧಿಕಾರಿ ಡಾ. ಪುಷ್ಪಾ ಕೃಷ್ಣ ಮಾತನಾಡಿ ‘ಸಮಾಜದಲ್ಲಿ ಎಲ್ಲಾ ವರ್ಗದ ಜನರು ಗೌರವಯುತವಾಗಿ ಜೀವನ ನಡೆಸಬೇಕು. ಯಾವುದೇ ಜಾತಿ, ವರ್ಗಗಳ ತಾರತಮ್ಯವಿಲ್ಲದೇ ಸಮಾನತೆಯ ಹಕ್ಕು ದೊರೆಯಬೇಕು. ತಾರತಮ್ಯ ಮಾಡಿದರೆ ಅದು ಸಂವಿಧಾನ ನೀಡಿರುವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಮಾನವ ಹಕ್ಕುಗಳು ಮನುಷ್ಯನ ಜೊತೆ ಪ್ರಕೃತಿದತ್ತವಾಗಿ ಬಂದಿವೆ. ಅವುಗಳನ್ನು ರಕ್ಷಣೆ ಮಾಡಬೇಕು. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳೂ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಚಂಪಕಲಾ ಸುನೀಲ್‌, ಸಮಾಜ ಸೇವಕರಾದ ಜವರೇಗೌಡ, ನಾಗೇಂದ್ರ, ಜಿಲ್ಲಾ ಘಟಕದ ಉಪಾಧ್ಯಕ್ಷ ತಿರುಮಲಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT