ಹೆದ್ದಾರಿಯಲ್ಲಿ ಬ್ಯಾರಿಕೇಡ್‌ ಇದ್ದರೆ ಯುವಕರ ಜೀವ ಉಳಿಯುತ್ತಿತ್ತು!

7

ಹೆದ್ದಾರಿಯಲ್ಲಿ ಬ್ಯಾರಿಕೇಡ್‌ ಇದ್ದರೆ ಯುವಕರ ಜೀವ ಉಳಿಯುತ್ತಿತ್ತು!

Published:
Updated:
Deccan Herald

ಮಂಡ್ಯ: ‘ವಿ.ಸಿ.ಫಾರಂ ಗೇಟ್‌ನಲ್ಲಿ ಪೊಲೀಸರು ಬ್ಯಾರಿಕೇಡ್‌ ಹಾಕಿದ್ದರೆ ಇಬ್ಬರು ಯುವಕರ ಜೀವನ ಉಳಿಯುತ್ತಿತ್ತು. ಬ್ಯಾರಿಕೇಡ್‌ ಇಲ್ಲದಿರುವುದೇ ಅಪಘಾತಕ್ಕೆ ಕಾರಣವಾಯಿತು’ ಎಂದು ಹೋರಾಟಗಾರ ಇಂಡುವಾಳು ಬಸವರಾಜು ಹೇಳಿದರು.

ಎಚ್‌.ಮಲ್ಲಿಗೆರೆ ಗ್ರಾಮದ ಪ್ರಶಾಂತ್‌ ಹಾಗೂ ಹೊಳಲು ಗ್ರಾಮದ ಪ್ರಮೋದ್‌ ಸಾವಿಗೆ ಹೆದ್ದಾರಿಯಲ್ಲಿ ಬ್ಯಾರಿಕೇಡ್‌ ಹಾಕದಿರುವುದೇ ಕಾರಣ ಎಂದು ಸಾರ್ವಜನಿಕರು ದೂರಿದರು. ಅಪಾಯಕಾರಿ ತಿರುವಿನಲ್ಲಿ ವಿ.ಸಿ.ಫಾರ್‌ ಗೇಟ್‌ ಇದ್ದು ಈ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಟ್ರಾಫಿಕ್‌ ನಿರ್ವಹಣೆಗೆ ಇಲ್ಲೊಬ್ಬರು ಪೊಲೀಸ್‌ ಸಿಬ್ಬಂದಿ ನೇಮಕ ಮಾಡಬೇಕು ಎಂದು  ಹಲವು ದಿನಗಳಿಂದಲೂ ಒತ್ತಾಯ ಮಾಡುತ್ತಿದ್ದೇವೆ. ಆದರೆ ಪೊಲೀಸರು ಇಲ್ಲಿಗೆ ಯಾವುದೇ ಸಿಬ್ಬಂದಿ ನೇಮಕ ಮಾಡಿಲ್ಲ ಎಂದು ದೂರಿದರು.

19 ವರ್ಷ ವಯಸ್ಸಿನ ಹೊಳಲು ಗ್ರಾಮದ ಪ್ರಮೋದ್‌ ಬೆಂಗಳೂರಿನ ಆರ್‌ಟಿಒ ಕಚೇರಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ಆತನ ಸಹೋದರ ನಿರಂಜನ್‌ ಬೆಂಗಳೂರಿನ ಟಯೋಟಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಹೊಳಲು ಗ್ರಾಮದ ರಾಮು ಹಾಗೂ ನಾಗಮಣಿ ದಂಪತಿಯ ಪುತ್ರ. ಎಚ್‌.ಮಲ್ಲಿಗೆರೆ ಗ್ರಾಮದ ಪ್ರಶಾಂತ್‌ ಕೂಡ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು.  ಈಚೆಗೆ ಊರಿಗೆ ಬಂದಿದ್ದರು. ‘ಬಾಳಿ ಬದುಕಬೇಕಾದ ಯುವಕರು ಅನ್ಯಾಯವಾಗಿ ಸಾವನ್ನಪ್ಪಿದರು. ಈ ಹೆದ್ದಾರಿ ಇನ್ನೂ ಎಷ್ಟು ಜನರ ಬಲಿ ಪಡೆಯುವುದೋ ಗೊತ್ತಿಲ್ಲ’ ಎಂದು ಮಹಾದೇವಸ್ವಾಮಿ ಹೇಳಿದರು.

ಪ್ರಶಾಂತ್‌ ಹಾಗೂ ಪ್ರಮೋದ್‌ ಅವರ ಮೃತದೇಹವನ್ನು ಭಾನುವಾರ ಮಧ್ಯಾಹ್ನವೇ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ದೇಹಗಳು ಛಿದ್ರವಾಗಿದ್ದ ಕಾರಣ ಅಂತಿಮ ನಮನ ಸಲ್ಲಿಸಲು ಅವಕಾಶ ಸಿಗಲಿಲ್ಲ. ಎರಡೂ ಕುಟುಂಬ ಸದಸ್ಯರ ರೋದನ ಮುಗಿಲು ಮುಟ್ಟಿತ್ತು.

ಡಿಸಿ, ಎಸ್ಪಿಗೆ ಮನವಿ ಇಂದು: ‌ವಿ.ಸಿ.ಫಾರಂ ಗೇಟ್‌ ಹಾಗೂ ಇಂಡುವಾಳು ಸರ್ಕಲ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು, ಟ್ರಾಫಿಕ್‌ ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿ ಇಂಡುವಾಳು ಗ್ರಾಮಸ್ಥರು ಸೋಮವಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !