ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ಸುತ್ತ ಅನಧಿಕೃತ ಬಡಾವಣೆಗಳ ದರ್ಬಾರ್‌!

ಇದ್ದೂ ಇಲ್ಲದಂತಿರುವ ನಗರಾಭಿವೃದ್ಧಿ ಪ್ರಾಧಿಕಾರ, 32 ವರ್ಷದಿಂದ 3 ಬಡಾವಣೆ ಅಭಿವೃದ್ಧಿ
Last Updated 30 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಮಂಡ್ಯ: ಮೈಸೂರು, ಬೆಂಗಳೂರು ನಡುವಿನ ಪ್ರಮುಖ ಜಿಲ್ಲಾ ಕೇಂದ್ರ ಮಂಡ್ಯ ಈಗಲೂ ‘ದೊಡ್ಡ ಹಳ್ಳಿ’ಯ ಸ್ಥಿತಿಯಲ್ಲೇ ಉಳಿದಿದೆ. ಸುತ್ತಲೂ ತಲೆ ಎತ್ತಿರುವ ಅನಧಿಕೃತ ಬಡಾವಣೆಗಳಿಂದಾಗಿ ನಗರದ ವ್ಯವಸ್ಥಿತ, ವೈಜ್ಞಾನಿಕ ಅಭಿವೃದ್ಧಿ ನೆನಗುದಿಗೆ ಬಿದ್ದಿದೆ.

ಪ್ರಮುಖ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದರೂ, ನಗರಾಭಿವೃದ್ಧಿಯ ಸಕಲ ಸೌಲಭ್ಯಗಳಿದ್ದರೂ ಮಂಡ್ಯ ಬೆಳೆಯುತ್ತಿಲ್ಲ. ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ರಚನೆಯಾಗಿ 32 ವರ್ಷ ಕಳೆದರೂ ಜನಸಂಖ್ಯೆಗೆ ಅನುಗುಣವಾಗಿ ನಗರದ ಗಡಿಯನ್ನು ವಿಸ್ತರಣೆ ಮಾಡಲು ಸಾಧ್ಯವಾಗಿಲ್ಲ. ಕೇವಲ 19 ಹಳ್ಳಿಗಳ ವ್ಯಾಪ್ತಿಗೆ ಮಾತ್ರ ಮುಡಾ ಸೀಮಿತವಾಗಿದೆ. ಇದರಿಂದಾಗಿ ನಗರದ ಸುತ್ತಲೂ ಸಣ್ಣಪುಟ್ಟ ಅಕ್ರಮ ಬಡಾವಣೆಗಳು ತಲೆ ಎತ್ತಿದ್ದು ನಗರದ ಬೆಳವಣಿಗೆ ಕುಂಠಿತವಾಗಿದೆ.

ಹೊರಗಿನಿಂದ ಬಂದ ಬಂಡವಾಳಶಾಹಿಗಳು ಸ್ಥಳೀಯ ಜನಪ್ರತಿನಿಧಿಗಳ ಸಹಾಯ ಪಡೆದು ನಗರದ ಸುತ್ತಲೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿ ಭೂಮಿ ಖರೀದಿ ಮಾಡಿದ್ದಾರೆ. ಸೂಕ್ತ ರೀತಿಯಲ್ಲಿ ಖಾತೆ ಪರಿವರ್ತನೆ ಮಾಡದೇ, ನಿಯಮಾನುಸಾರ ಅಭಿವೃದ್ಧಿ ಮಾಡದೇ ನಿವೇಶನ ಮಾರಾಟ ಮಾಡಿದ್ದಾರೆ. ಅಕ್ರಮ ಬಡಾವಣೆಗಳ ತೆರವುಗೊಳಿಸುವ ಅಧಿಕಾರವಿದ್ದರೂ ಮುಡಾ ಆಡಳಿತ ಮಂಡಳಿ ಕಣ್ಣುಮುಚ್ಚಿ ಕುಳಿತಿದೆ. ಅಕ್ರಮ ಬಡಾವಣೆಗಳ ದರ್ಬಾರ್‌ಗೆ ಮುಡಾ ಅಧಿಕಾರಿಗಳೇ ಸಹಾಯ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

‘ಮಂಡ್ಯ ಸುತ್ತಲೂ ತಲೆ ಎತ್ತಿರುವ ಶೇ 90ರಷ್ಟು ಬಡಾವಣೆಗಳು ಅಕ್ರಮವಾಗಿವೆ. ಮುಡಾ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಣದಾಸೆಗೆ ಸಿಕ್ಕಸಿಕ್ಕವರಿಗೆ ಬಡಾವಣೆ ಮಾಡಲು ಬಿಟ್ಟಿದ್ದಾರೆ. ಅದಕ್ಕಾಗಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಇದರಿಂದ ಬಡವರಿಗೆ ನಿವೇಶನ ಎಂಬುದು ಗಗನಕುಸುಮವಾಗಿದೆ’ ಎಂದು ವಕೀಲ ಗುರುಪ್ರಸಾದ್‌ ಹೇಳಿದರು.

ಮೂರೇ ಮೂರು ಬಡಾವಣೆ: 1988 ರಿಂದ ಮುಡಾ ಕೇವಲ ಮೂರು ಬಡಾವಣೆಗಳನ್ನು ಅಭಿವೃದ್ಧಿಪಡಿಸಿದೆ. ಸಾಹುಕಾರ್‌ ಚನ್ನಯ್ಯ ಬಡಾವಣೆಯಲ್ಲಿ 500 ನಿವೇಶನ ಅಭಿವೃದ್ಧಿಗೊಳಿಸಿ ನಗರಸಭೆಗೆ ಹಸ್ತಾಂತರ ಮಾಡಿದೆ. ವಿವೇಕಾನಂದ ಬಡಾವಣೆ (ಕೆರೆಯಂಗಳ) ಅವೈಜ್ಞಾನಿಕ ರೀತಿಯಲ್ಲಿ ರೂಪಿಸಲಾಗಿದೆ. ಯಾವುದೇ ಮೂಲ ಸೌಲಭ್ಯ ಕಲ್ಪಿಸಿಲ್ಲ. ಕೆರೆಯನ್ನು ಬಡಾವಣೆ ಮಾಡಿದ್ದಕ್ಕೆ ಹಲವು ದೂರುಗಳು ದಾಖಲಾಗಿವೆ. ಜೊತೆಗೆ 107 ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ಮುಡಾ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಸಿಬಿಐ ತನಿಖೆ ನಡೆಯುತ್ತಿದೆ.

ಸಾತನೂರು ಬಡಾವಣೆಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ಅಲ್ಲೂ ಕೂಡ ಮೂಲ ಸೌಲಭ್ಯ ಕಲ್ಪಿಸದ ಕಾರಣ ಜನರು ಮನೆ ನಿರ್ಮಾಣ ಮಾಡಲು ಮುಂದಾಗಿಲ್ಲ. 32 ವರ್ಷಗಳಿಂದ ಸಾಧ್ಯವಾದಷ್ಟು ಹೆಚ್ಚು ಬಡಾವಣೆ ರೂಪಿಸಿದ್ದರೆ ಜನರಿಗೆ ನಿವೇಶನ ದೊರೆಯುತ್ತಿತ್ತು. ಆದರೆ ಮುಡಾ ನಿರ್ಲಕ್ಷ್ಯದಿಂದ ಅಕ್ರಮ ರಿಯಲ್‌ ಎಸ್ಟೇಟ್ ದಂಧೆ ಬೆಳೆಯಲು ಅವಕಾಶ ನೀಡಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ಜನರು ದುಡ್ಡು ಏನಾಯ್ತು?: ದಶಕದ ಹಿಂದೆ ಮೂಡಾ ನಿವೇಶನ ಆಕಾಂಕ್ಷಿಗಗಳಿಂದ ಅರ್ಜಿ ಆಹ್ವಾನಿಸಿತ್ತು. ಪ್ರತಿ ಅರ್ಜಿಗೆ ನಿಗದಿತ ಶುಲ್ಕವನ್ನೂ ನಿಗದಿ ಮಾಡಲಾಗಿತ್ತು. ನಗರದ 28 ಸಾವಿರ ಜನರು ಹಣ ಕಟ್ಟಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ಜೊತೆ ₹ 6 ಕೋಟಿ ಹಣ ಸಂಗ್ರಹವಾಗಿತ್ತು. ಇದಾದ ನಂತರ ಅರ್ಜಿ ಸಲ್ಲಿಸಿದವರಿಗೆ ನಿವೇಶನವೂ ಸಿಗಲಿಲ್ಲ, ಅವರಿಗಾಗಿ ಜಾಗವನ್ನೂ ಗುರುತು ಮಾಡಲಿಲ್ಲ. ಸಂಗ್ರಹವಾದ ಹಣ ಎಲ್ಲಿಗೆ ಹೋಯಿತು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

‘ಮುಡಾ ಅಧಿಕಾರಿಗಳಿಗೆ ನಿಜವಾಗಿಯೂ ನಗರಾಭಿವೃದ್ಧಿ ಮೇಲೆ ಆಸಕ್ತಿ ಇದ್ದರೆ ಅಕ್ರಮವಾಗಿ ತಲೆ ಎತ್ತಿರುವ ಬಡಾವಣೆಗಳ ಮೇಲೆ ದಾಳಿ ನಡೆಸಿ ನಿವೇಶನಗಳನ್ನು ವಶಕ್ಕೆ ಪಡೆಯಬೇಕು’ ಎಂದು ‘ಸ್ವಂತ ಮನೆ ನಮ್ಮ ಹಕ್ಕು’ ಸಂಘಟನೆ ಮುಖಂಡ ಎಂ.ಬಿ.ನಾಗಣ್ಣಗೌಡ ಹೇಳಿದರು.

ಆಕ್ರೋಶ: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಈಚೆಗೆ ನಡೆದ ನಗರಾಭಿವೃದ್ಧಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಬಸವರಾಜ್‌ ಮುಡಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಮನೆ ನಿರ್ಮಾಣ ಅನುಮತಿ, ಭೂ ಪರಿವರ್ತನೆ ವಿಚಾರದಲ್ಲಿ ಜನರ ಮನವಿಗೆ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ದಾಖಲಾಗಿದ್ದ ಹಿನ್ನೆಲೆಯಲ್ಲಿ ಸಚಿವರು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

'ಮುಡಾದಲ್ಲಿ ಅಧಿಕಾರಿಗಳ ಕಾರುಬಾರು ಜೋರಾಗಿದೆ. ಒಬ್ಬೊಬ್ಬ ಎಂಜಿನಿಯರ್‌ 10–15 ವರ್ಷಗಳಿಂದ ವರ್ಗಾವಣೆಯಾಗದೇ ಇಲ್ಲೇ ಉಳಿದುಕೊಂಡಿದ್ದಾರೆ. ಅವರ ಎಲ್ಲಾ ಚಟುವಟಿಕೆಗಳು ಅನುಮಾನಾಸ್ಪದವಾಗಿದೆ. ಮುಡಾಕ್ಕೆ ಸರ್ಜರಿಯ ಅವಶ್ಯಕತೆ ಇದೆ’ ಎಂದು ಶಾಸಕ ಎಂ.ಶ್ರೀನಿವಾಸ್‌ ಹೇಳಿದರು.

51 ಹಳ್ಳಿ ಸೇರ್ಪಡೆಗೆ ಪ್ರಸ್ತಾವ

‘ಮಂಡ್ಯದ ಸುತ್ತಲೂ ನೀರಾವರಿ ಭೂಮಿ ಇರುವ ಕಾರಣ ನಗರದ ಗಡಿ ವಿಸ್ತರಣೆ ಮಾಡಲು ಇಲ್ಲಿಯವರೆಗೂ ಸಾಧ್ಯವಾಗಿರಲಿಲ್ಲ. ಈಗ ಬೆಂಗಳೂರು, ಮೈಸೂರು ಕಡೆಯ ಹೊರವಲಯದವರೆಗೂ ನಗರವನ್ನು ವಿಸ್ತರಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಮುಡಾ ಅಧ್ಯಕ್ಷ ಶ್ರೀನಿವಾಸ್‌ ಹೇಳಿದರು.

‘ವಿವೇಕಾನಂದ ಬಡಾವಣೆಯ ನಿವೇಶನ ಹಂಚಿಕೆ ಸಂಬಂಧ ನಡೆಯುತ್ತಿರುವ ಸಿಬಿಐ ವಿಚಾರಣೆ ಅಂತಿಮ ಹಂತಕ್ಕೆ ಬಂದಿದೆ. ಶೀಘ್ರದಲ್ಲಿ ಅದು ಬಗೆಹರಿಯುವ ಸಾಧ್ಯತೆ ಇದೆ. ಅಲ್ಲಿಯ 207 ನಿವೇಶನಗಳು ಸಿಗುವ ಸಾಧ್ಯತೆ ಇದ್ದು ಅವುಗಳನ್ನು ಹರಾಜು ಹಾಕಿ ಬಂದ ಹಣವನ್ನು ನಗರದ ಅಭಿವೃದ್ಧಿಗೆ ವಿನಿಯೋಗ ಮಾಡಲಾಗುವುದು’ ಎಂದು ಅವರು ಹೇಳಿದರು.

ಸ್ಮಾರ್ಟ್‌ ಸಿಟಿ ಮಾಡ್ತಾರಾ ಕೆಸಿಎನ್‌?

ಮೂರು ವರ್ಷಗಳಲ್ಲಿ ಮಂಡ್ಯ ನಗರಕ್ಕೆ ‘ಸ್ಮಾರ್ಟ್‌ ಸಿಟಿ’ರೂಪ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ನಿರ್ಧಾರ ಪ್ರಕಟಿಸಿದ್ದಾರೆ. ಅದಕ್ಕಾಗಿ ಮುಖ್ಯಮಂತ್ರಿಗಳ ಜೊತೆ ಮಾತನಾಡಿರುವುದಾಗಿ ಅವರು ತಿಳಿಸಿದ್ದಾರೆ.

ದೊಡ್ಡಹಳ್ಳಿಯಂತಿರುವ ನಗರದ ಅಭಿವೃದ್ಧಿಗೆ ಹಲವು ವರ್ಷಗಳಿಂದ ಕೈಗೊಳ್ಳಲಾಗಿದ್ದ ಎಲ್ಲಾ ಯೋಜನೆಗಳು ನನೆಗುದಿಗೆ ಬಿದ್ದಿವೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಂಡ್ಯ, ನೆಲಮಂಗಲ, ಹಾಸನ ನಗರವನ್ನು ನಗರ ಪಾಲಿಕೆಯಾಗಿ ರೂಪಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಹಾಸನ ನಗರ ಪಾಲಿಕೆಯಾಯಿತು. ಆದರೆ ಮಂಡ್ಯ ಯೋಜನೆ ನನೆಗುದಿಗೆ ಬಿತ್ತು.

ಹೊರ ವರ್ತುಲ ನಿರ್ಮಾಣ ಯೋಜನೆಗೂ ಜೀವ ಬಂದಿಲ್ಲ. ನಗರಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಅದರ ಪ್ರಕಾರ ಉಮ್ಮಡಹಳ್ಳಿ ಗೇಟ್‌, ಯತ್ತಗದಹಳ್ಳಿ, ಹನಿಯಂಬಾಡಿ, ಕಿರಗಂದೂರು ಮೂಲಕ ಹೆದ್ದಾರಿ ಸೇರುವ ಯೋಜನೆ ಇದಾಗಿತ್ತು.

ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ನಾರಾಯಣಗೌಡರು ಈಗ ಒಂದು ಹೆಜ್ಜೆ ಮುಂದೆ ಹೋಗಿ ಸ್ಮಾರ್ಟ್‌ ಸಿಟಿ ಮಾತನ್ನಾಡುತ್ತಿದ್ದಾರೆ.

ಮುಡಾ ಅಭಿವೃದ್ಧಿ ಪಡಿಸಿದ ಬಡಾವಣೆ ವಿವರ (ಅಂಕಿ–ಅಂಶ)

* ಸಾಹುಕಾರ್‌ ಚೆನ್ನಯ್ಯ ಬಡಾವಣೆ
ವಿಸ್ತೀರ್ಣ: 4 ಎಕರೆ, ನಿವೇಶನ: 90

* ವಿವೇಕಾನಂದ ನಗರ
ವಿಸ್ತೀರ್ಣ: 230 ಎಕರೆ, ನಿವೇಶನ: 2680

* ಸಾತನೂರು ಬಡಾವಣೆ
ವಿಸ್ತೀರ್ಣ: 28 ಎಕರೆ, ನಿವೇಶನ: 505

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT