ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಲ್ಲದ ಅಕ್ರಮ ಗಣಿಗಾರಿಕೆ; ಸಂಸದೆ ಸುಮಲತಾ ಅಂಬರೀಷ್ ಆಕ್ರೋಶ

ದಿಶಾ ಸಭೆಯಲ್ಲಿ ಗಣಿ– ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧಅಸಮಾಧಾನ
Last Updated 28 ಡಿಸೆಂಬರ್ 2021, 2:31 IST
ಅಕ್ಷರ ಗಾತ್ರ

ಮಂಡ್ಯ: ‘ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜಿಲ್ಲೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಸರಿಯಾಗಿ ಕೆಲಸ ನಿರ್ವ ಹಿಸುತ್ತಿಲ್ಲ. ಅಕ್ರಮ ಗಣಿಗಾರಿಕೆ ಇನ್ನೂ ಜೀವಂತವಾಗಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ವಹಿಸಿಲ್ಲ’ ಎಂದು ಸಂಸದೆ ಸುಮಲತಾ ಅಂಬರೀಷ್ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಅಭಿವೃದ್ಧಿ ಉಸ್ತುವಾರಿ ಸಮನ್ವಯ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಇದುವರೆಗೆ ಎಷ್ಟು ದಂಡ ವಸೂಲಿ ಮಾಡಲಾಗಿದೆ ಎಂದು ಭೂವಿಜ್ಞಾನಿ ಮಹೇಶ್‌ ಅವರನ್ನು ಪ್ರಶ್ನೆ ಮಾಡಿದಾಗ, ನೊಟೀಸ್‌ ನೀಡಲಾಗಿದೆ ಎಂದು ಉತ್ತರಿಸಿದರು.

‘ನಾನು ನೊಟೀಸ್‌ ಎಷ್ಟು ಬಾರಿ ಕೊಟ್ಟಿದ್ದೀರಾ ಎಂದು ಕೇಳಲಿಲ್ಲ, ಕಳೆದ ಸಭೆಯಲ್ಲೂ ಇದೇ ಉತ್ತರ ಬಂದಿದೆ. ಜವಾಬ್ದಾರಿಯಿಂದ ಮಾತನಾಡಿ. ನಿಮ್ಮ ಹಿರಿಯ ಭೂವಿಜ್ಞಾನಿಗೆ ದಿಶಾ ಸಭೆ ಇದ್ದಾಗಲೇ ಏನಾದರೂ ತೊಂದರೆ ಬರುತ್ತದೆ ಅಲ್ಲವೇ? ನೀವೂ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ನಿಗಾ ವಹಿಸಲು ಚೆಕ್‌ಪೋಸ್ಟ್‌ ಹಾಕಲಾಗಿದೆ ಎನ್ನುತ್ತೀರಿ. ಆದರೆ, ಅವು ಕಾರ್ಯ ನಿರ್ವಹಿಸುತ್ತಿಲ್ಲ, ಕಲ್ಲುಗಳನ್ನು ಸಾಗಿಸ ಲಾಗುತ್ತಿದೆ’ ಎಂದರು.

ಶಾಸಕರಾದ ಡಾ.ಕೆ.ಅನ್ನದಾನಿ, ಸಿ.ಎಸ್‌.ಪುಟ್ಟರಾಜು, ಕೆ.ಸುರೇಶ್‌ಗೌಡ ಮಾತನಾಡಿ, ಜಿಲ್ಲೆಯಲ್ಲಿ ಅಧಿಕೃತ ಮತ್ತು ಅನಧಿಕೃತ ಗಣಿಗಾರಿಕೆಗಳ ಬಗ್ಗೆ ಮಾಹಿತಿ ಕೇಳಿದಾಗ, ಭೂ ವಿಜ್ಞಾನಿ ತಬ್ಬಿಬ್ಬಾದರು. ಇದಕ್ಕೆ ಕೆಂಡಾಮಂಡಲರಾದ ಶಾಸಕರು ಅಧಿಕಾರಿಯನ್ನು ಒಂದು ದಿನದ ಮಟ್ಟಿಗೆ ಅಮಾನತು ಮಾಡಿ ಎಂದು ಸಿಇಒ ದಿವ್ಯಾಪ್ರಭು ಅವರಿಗೆ ಸೂಚನೆ ನೀಡಿದರು.

‘ರಸ್ತೆ ಬದಿಯಲ್ಲಿ ನಿಂತು ವಸೂಲಿ ಮಾಡುವುದೇ ಭೂ ವಿಜ್ಞಾನಿಯ ಕೆಲಸವೇ? ಎಂದು ಕೆ.ಅನ್ನದಾನಿ ಕೇಳಿದರು. ಒಂದು ದಿನದ ಮಟ್ಟಿಗಾದರೂ ಇಂಥ ಅಧಿಕಾರಿಗಳನ್ನು ಅಮಾನತು ಮಾಡಿದರೆ ಸುಳ್ಳು ಮಾಹಿತಿ ನೀಡುವುದನ್ನೇ ಬಿಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಿಶಾ ಸಭೆಯಲ್ಲಿ ‘ಅಜೆಂಡಾ’ ಕಿತ್ತಾಟ: ‌ಸಭೆ ಆರಂಭವಾಗುತ್ತಿದ್ದಂತೆ ಶಾಸಕ ಸುರೇಶ್‌ ದಿಶಾ ಸಭೆಯ ಅಜೆಂಡಾ ಕೊಡಿ ಎಂದು ಸಿಇಒ ಅವರನ್ನು ಕೇಳಿದರು.

ಸಿಇಒ ಅವರು ಇದೇ ಅಜೆಂಡಾ ಎಂದು ನಡಾವಳಿಯ ಪುಸ್ತಕ ನೀಡಿದರು. ಇದಕ್ಕೆ ಕೆಂಡಾಮಂಡಲವಾದ ಅವರು ಕೊಟ್ಟ ಮೂರು ನಿಮಿಷದಲ್ಲಿ ಇದೆಲ್ಲ ಓದುವುದು ಯಾವಾಗ? ಪ್ರಶ್ನೆ ಮಾಡು ವುದಾದರೂ ಹೇಗೆ ಎಂದಾಗ ಶಾಸಕ ಸಿ.ಎಸ್‌.ಪುಟ್ಟರಾಜು ದನಿ ಗೂಡಿಸಿದರು.

ಸಭೆಗೆ ಬಂದು ಎರಡೂವರೆ ಗಂಟೆ ಆಗಿದೆ. ನಿಮ್ಮ ಕಚೇರಿಯಲ್ಲಿ ಕುಳಿತಿ ದ್ದೇವೆ. ಯಾವೊಬ್ಬ ಅಧಿಕಾರಿಯೂ ಮಾತನಾಡಿಸಲಿಲ್ಲ. ನೀವು ಇಂತಿಷ್ಟು ಸಮಯದಲ್ಲಿ ಸಭೆ ಆರಂಭಿಸುವ ಮಾತನ್ನು ಹೇಳಿದರೆ ಆ ಸಮಯಕ್ಕೆ ಬರುತ್ತಿದ್ದೆವು ಎಂದರು.

ಇಂದಿನ ಅಜೆಂಡಾವನ್ನೇ ಓದಿ ರಾತ್ರಿ 10 ಗಂಟೆಯಾದರೂ ಎಲ್ಲವೂ ಮುಗಿಯಬೇಕು. ಅದರಂತೆ ಮಾಡಿ ಎಂದಾಗ ದಿಶಾ ಸಭೆಯ ಸದಸ್ಯ ಬೇಲೂರು ಸೋಮಶೇಖರ್‌ ನಡುವೆ ವಾಗ್ವಾದ ನಡೆಯಿತು. ಶಾಸಕರು ಈ ಹಿಂದಿನ ದಿಶಾ ಸಭೆಯಲ್ಲಿ ಇರದ ಅಜೆಂಡಾ ಈಗ ಯಾಕೆ ಎಂದಾಗ, ‘ನಾನು ಕೇಳುತ್ತಿರುವುದು ನಿನ್ನನ್ನಲ್ಲ, ಸಿಇಒ ಉತ್ತರ ಕೊಡುತ್ತಾರೆ’ ಎಂದಾಗವಾಗ್ವಾದ ನಡೆಯಿತು.

ಮಧ್ಯ ಪ್ರವೇಶಿಸಿದ ಸಿಇಒ, ಇನ್ನು ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುತ್ತೇವೆ. ಸಭೆ ಇರುವ ಒಂದು ವಾರದ ಮುನ್ನವೇ ಅಜೆಂಡಾ ಕಳುಹಿಸಲಾಗುವುದು ಎಂದಾಗ ಕೇವಲ ನೋಟಿಸ್‌ ನೀಡಿ ಜಾರಿಕೊಳ್ಳುವ ಜಾಣ್ಮೆ ಪ್ರದರ್ಶಿಸದಿರಿ ಎಂದು ಸಿ.ಎಸ್.ಪುಟ್ಟರಾಜು, ಅನ್ನದಾನಿ ಹೇಳಿದರು.

ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡಿ ಎಂದರು.

ಇತರ ಭೂಮಿ ಬಳಸಲು ಒಪ್ಪಿಗೆ ಕೊಡಿ: ಅರಣ್ಯ ಇಲಾಖೆಯ ಅಧಿಕಾರಿಗಳು ಕೆಲವು ಕಡೆ ನಾವೇ ಆರ್‌ಟಿಸಿದಾರರು ಎಂದು ಹೇಳಿಕೊಂಡು ರೈತರ ಜಮೀನು ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಪುಟ್ಟರಾಜು ಆರೋಪಿಸಿದರು.

‘ಸಾಗುವಳಿ ಮಾಡುತ್ತಿದ್ದಾರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕು. ಪ್ರಾಣಿಗಳು ವಾಸ ಮಾಡುವ ಸ್ಥಳಗಳನ್ನು ಅರಣ್ಯ ಇಲಾಖೆಯ ವ್ಯಾಪ್ತಿಗೆ ತೆಗೆದುಕೊಳ್ಳಲಿ ನಮ್ಮ ಅಭ್ಯಂತರವಿಲ್ಲ. ಕೃಷಿ ಭೂಮಿಯನ್ನು, ಅರಣ್ಯವೇ ಇಲ್ಲದ ಭೂಮಿಯನ್ನು ಪರಿಶೀಲನೆಗೊಳಪಡಿಸಿ ಎನ್‌ಒಸಿ ಕೊಡಿ. ಇದು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಸಾಮಾಜಿಕ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಅವರಿಗೆ ಕೆ.ಸುರೇಶ್‌ಗೌಡ ಮನವಿ ಮಾಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಭಾಗವಹಿಸಿದ್ದರು.

ಅಪಘಾತಕ್ಕೆ ಅಮಾಯಕರು ಬಲಿ: ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಯೇ ಮುಚ್ಚಿ ಹೋಗಿದೆ. ಎಲ್ಲೆಲ್ಲಿ ಕಾಮಗಾರಿ ನೆಪದಲ್ಲಿ ಲಾರಿಗಳು ಕಲ್ಲು ತುಂಬಿಕೊಂಡು ಹೋಗಿವೆಯೋ ಅಲ್ಲೆಲ್ಲಾ ರಸ್ತೆಗಳು ಗುಂಡಿ ಬಿದ್ದಿವೆ. ಲಾರಿ ಚಾಲಕರು ವೇಗವಾಗಿ ಚಾಲನೆ ಮಾಡಿ ಅಪಘಾತ ಮಾಡುತ್ತಿದ್ದಾರೆ. ಇದರಿಂದ ಅಮಾಯಕರು ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಸಿ.ಎಸ್‌.ಪುಟ್ಟರಾಜು ವಿಷಯ ಪ್ರಸ್ತಾಪಿಸಿದರು.

ಇದಕ್ಕೆ ಉತ್ತರಿಸಿದ ರೈಲ್ವೆ ಸಿಇಎ ಅಧಿಕಾರಿ ಮಲ್ಲಿಕಾರ್ಜುನ, ಇನ್ನೂ ಒಂದು ತಿಂಗಳಲ್ಲಿ ರಸ್ತೆ ದುರಸ್ತಿ ಮಾಡಿಸಲಾಗುವುದು ಎಂದಾಗ; ಸಿಇಒ, ಒಂದು ತಿಂಗಳೆಂದು ಹೇಳಬೇಡಿ. ನಿಮ್ಮ ಕೆಲಸಗಳ ಬಗ್ಗೆ ಆರೋಪಗಳಿವೆ ಎಂದರು.

ಪುಟ್ಟರಾಜು ಪ್ರತಿಕ್ರಿಯಿಸಿ, ನಮ್ಮ ವ್ಯಾಪ್ತಿಯಲ್ಲಿ ರಸ್ತೆಗಳು ಗುಂಡಿಬಿದ್ದು ಸರಿಪಡಿಸಲಾಗದ ಸ್ಥಿತಿ ತಲುಪಿವೆ. ಹೀಗಿರುವಾಗ ಒಂದು ತಿಂಗಳೊಳಗೆ ಹೇಗೆ ಮಾಡುತ್ತೀರಿ? ನಿಮ್ಮ ಗುತ್ತಿಗೆದಾರರು ನಿಮ್ಮ ಕೈಕೆಳಗೆ ಕೆಲಸ ನಿರ್ವಹಿಸುತ್ತಿದ್ದಾರಾ ಎಂದು ಪ್ರಶ್ನಿಸಿದರು.

ಮೌನಕ್ಕೆಜಾರಿದ ಸಂಸದೆ

ಸಭೆಯಲ್ಲಿ ಅಜೆಂಡಾ ಗದ್ದಲದ ನಡುವೆ ಸಂಸದೆ ಸುಮಲತಾ ಅಂಬರೀಷ್‌ ಅವರು ಮಾತ್ರ ಮೌನವಾಗಿದ್ದರು. ಅವರ ಬೆಂಬಲಿಗ ಹಾಗೂ ದಿಶಾ ಸಭೆ ಸದಸ್ಯ ಬೇಲೂರು ಸೋಮಶೇಖರ್, ಶಾಸಕ ಸುರೇಶ್‌ಗೌಡ ಅವರು ಅಜೆಂಡಾ ವಿಷಯದ ಬಗ್ಗೆ ಚರ್ಚೆ ನಡೆಸುತ್ತಿದ್ದರೂ ಸುಮಲತಾ ಮಾತನಾಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT