ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವೆಲ್ಲ ಒಂದೇ ಎಂಬ ಕಲ್ಪನೆ ಮೂಡಲಿ: ಸುಮಲತಾ

ಮಹಿಳಾ ಸರ್ಕಾರಿ ಮಹಾವಿದ್ಯಾಲಯದಲ್ಲಿ ಸಂಸದೆ ಧ್ವಜಾರೋಹಣ
Last Updated 15 ಆಗಸ್ಟ್ 2019, 13:10 IST
ಅಕ್ಷರ ಗಾತ್ರ

ಮಂಡ್ಯ: ‘ಜಾತಿ, ಕುಲ, ಧರ್ಮದ ಹೆಸರಿನಲ್ಲಿ ಇಂದಿಗೂ ಸಂಘರ್ಷಗಳು ನಡೆಯುತ್ತಿವೆ. ನಾವೆಲ್ಲಾ ಒಂದೇ ಎಂಬ ಕಲ್ಪನೆ ಬಂದಾಗ ಮಾತ್ರ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಬರುತ್ತದೆ’ ಎಂದು ಸಂಸದೆ ಎ.ಸುಮಲತಾ ಹೇಳಿದರು.

ನಗರದ ಮಹಿಳಾ ಸರ್ಕಾರಿ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ 73ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

‘ಯುವ ಪೀಳಿಗೆ ಮುಂದೆ ದೊಡ್ಡ ಸವಾಲು ಇದೆ. ಇಂತಹ ಸಾಮಾಜಿಕ ಸಮಸ್ಯೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಇಂದು ನೀವು ಏನನ್ನು ಕಲಿತು, ಬದುಕಿನಲ್ಲಿ ಅಳವಡಿಸಿಕೊಳ್ಳುತ್ತೀರೋ ಮುಂದೆ ಅದೇ ನಿಮ್ಮ ಜೀವನ ಆಗಿರುತ್ತದೆ. ದೇಶದ ಪ್ರಗತಿಯಲ್ಲಿ ಪ್ರತಿಯೊಬ್ಬರೂ ಭಾಗಿಗಳಾಗಬೇಕು. ನಡೆ, ನುಡಿ, ವ್ಯಕ್ತಿತ್ವದಲ್ಲಿ ಅದನ್ನು ರೂಢಿಸಿಕೊಂಡು ಮುಂದಿನ ಪೀಳಿಗೆಗೆ ಪ್ರತಿಯೊಬ್ಬರೂ ಕೊಡುಗೆ ನೀಡುವಂತ ಮನೋಭಾವ ಬೆಳೆಸಿಕೊಳ್ಳಬೇಕು. ಹಲವಾರು ಮಹನೀಯರು ತ್ಯಾಗ, ಬಲಿದಾನದ ಮೂಲಕ ನಮಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ನಾವು ಮುಂದಿನ ಪೀಳಿಗೆಗೆ ಏನನ್ನು ಕೊಡುಗೆಯಾಗಿ ನೀಡುತ್ತಿದ್ದೇವೆ ಎಂಬುದರ ಬಗ್ಗೆ ಪ್ರತಿಯೊಬ್ಬರೂ ಚಿಂತನೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ಬ್ರಿಟಿಷರಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ಇಂದು ನಾವು ನಿಜಕ್ಕೂ ಸ್ವತಂತ್ರರಾಗಿದ್ದೇವೇಯೇ ಎಂಬ ಬಗ್ಗೆ ಚಿಂತನೆ ಮಾಡಬೇಕಾಗಿದೆ. ಇದರಲ್ಲಿ ಸಾಕಷ್ಟು ಲೋಪಗಳಿರುತ್ತವೆ. ಮಾತು, ತಿಳಿವಳಿಕೆ, ನಡೆದುಕೊಳ್ಳುವ ರೀತಿ, ಎಲ್ಲದರಲ್ಲೂ ಸಾಕಷ್ಟು ಲೋಪಗಳು ಕಂಡು ಬರುತ್ತಿದೆ. ಅದನ್ನು ತಿದ್ದಿಕೊಳ್ಳದೆ ನಾವು ಸ್ವತಂತ್ರರಾಗಿದ್ದೇವೆ. ಮಾತಿನಂತೆ ನಡೆ, ನಡೆಯಂತೆ ವ್ಯಕ್ತಿತ್ವ ರೂಪುಗೊಳ್ಳಬೇಕು. ವ್ಯಕ್ತಿತ್ವ ಯಾವ ರೀತಿ ಇರುತ್ತೇ ಅದರಂತೆ ಜೀವನ ರೂಪಿತವಾಗುತ್ತದೆ’ ಎಂದು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಸ್ವಚ್ಚ ಭಾರತ್ ಅಭಿಯಾನ ಆರಂಭಿಸಿದರು. ಆದರೆ ಇಂದು ನಾವು ಎಷ್ಟು ಜನ ಅದಕ್ಕೆ ಕೈ ಜೋಡಿಸುತ್ತಿದ್ದೇವೆ, ರಸ್ತೆ ಸೇರಿದಂತೆ ಎಲ್ಲ ಕಡೆ ಕಸ ಕಡ್ಡಿಗಳನ್ನು ಮನಬಂದಂತೆ ಬಿಸಾಡುತ್ತೇವೆ. ಜನಪ್ರತಿನಿಧಿಗಳು, ಸರ್ಕಾರಿ ನೌಕರರು, ಸ್ವಚ್ಛತಾ ಕೆಲಸಗಾರರು ಸ್ವಚ್ಛತೆ ಮಾಡುತ್ತಾರೆ ಎಂಬ ಭಾವನೆ ನಮ್ಮಲ್ಲಿ ಬೇರೂರಿದೆ. ಎಲ್ಲವನ್ನೂ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು, ನೌಕರರು ಮಾಡುತ್ತಾರೆ ಎಂದು ಸುಮ್ಮನಿರಬಾರದು, ನಾವು ನಮ್ಮ ಜವಾಬ್ದಾರಿಗಳನ್ನು ಸಾಧ್ಯವಾದಷ್ಟು ಸರಿಯಾಗಿ ನಿರ್ವಹಿಸಬೇಕು’ ಎಂದು ಹೇಳಿದರು.

ಪ್ರಾಂಶುಪಾಲ ಪ್ರೊ. ಸತ್ಯನಾರಾಯಣ್, ಪ್ರಾಧ್ಯಾಪಕರಾದ ಪ್ರೊ. ಶ್ರಿದೇವಿ, ದಶರಥ್, ನಾರಾಯಣ್ ಇದ್ದರು.

ಅಲ್ಲಲ್ಲಿ ಸ್ವಾತಂತ್ರ್ಯ ದಿನಾಚರಣೆ: ತಾಲ್ಲೂಕಿನ ತುಂಬಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಎಸ್‌ಡಿಎಂಸಿ ಅಧ್ಯಕ್ಷ ಪ್ರದೀಪ್‌ ಧ್ವಜಾರೋಹಣ ನೆರವೇರಿಸಿದರು. ಗ್ರಾ.ಪಂ. ಸದಸ್ಯ ಪುಟ್ಟಸ್ವಾಮಿ, ಸಹ ಮುಖ್ಯ ಶಿಕ್ಷಕಿ ಎಲ್‌.ರತ್ನಮ್ಮ, ಶಿಕ್ಷಕ ಜಿ.ಸಿ.ಹೊನ್ನಪ್ಪ, ಮೋಹನ್‌ ಇದ್ದರು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಸೂನಗಹಳ್ಳಿ: ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಹೋಬಳಿ ಮಟ್ಟದ ಕ್ರೀಡಾ ಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ನಂತರ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಮುಖ್ಯ ಶಿಕ್ಷಕ ಪ್ರಭಾಕರ ಡಿ.ಪಿ. ಎಸ್‌ಡಿಎಂಸಿ ಅಧ್ಯಕ್ಷ ಎಸ್‌.ಸಿ. ಪ್ರಸನ್ನ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT