ಭಾನುವಾರ, ಏಪ್ರಿಲ್ 5, 2020
19 °C

ಭಾರತಕ್ಕಿದೆ ರೋಗ ತಡೆಯುವ ಶಕ್ತಿ: ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಗಮಂಗಲ: ಇಡೀ ಪ್ರಪಂಚ ಇಂದು ಸಮಸ್ಯೆಗಳ ಸರಮಾಲೆಯಲ್ಲಿ ಸಿಲುಕಿ ನರಳುತ್ತಿದೆ. ಜೊತೆಗೆ ಅಶಾಂತಿ, ರೋಗ ರುಜಿನಗಳು ತಾಂಡವವಾಡುತ್ತಿದ್ದರೂ ಭಾರತ ಮಾತ್ರ ಎಲ್ಲವನ್ನೂ ತಡೆದುಕೊಳ್ಳುವ ದೈವೀಶಕ್ತಿಯನ್ನು ಹೊಂದಿದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ಕಾಲಭೈರವೇಶ್ವರ ಸ್ವಾಮಿ ದೇವಾಲಯದ ದ್ವಾದಶಾಬ್ದ ಮಹಾ ಕುಂಭಾಭಿಷೇಕ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಧರ್ಮಸಭೆ ಮತ್ತು ಜೋಗಪ್ಪ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಚೀನಾದಲ್ಲಿ ಕೊರೊನಾ ಸೋಂಕಿನಿಂದ ಸಾವಿರಾರು ಮಂದಿ ಮೃತಪಡುತ್ತಿದ್ದಾರೆ. ಅದೇ ರೀತಿ ವಿವಿಧ ದೇಶಗಳಲ್ಲೂ ಈ ಸೋಂಕು ಕಾಣಿಸಿಕೊಳ್ಳುತ್ತಿದೆ. ಎಲ್ಲೆಡೆ ಅಶಾಂತಿ ತಾಂಡವವಾಡುತ್ತಿದ್ದು, ಇದಕ್ಕೆಲ್ಲ ಪರಿಹಾರ ನೀಡುವವರು ಯಾರು? ಜಗತ್ತು ಸಮಸ್ಯೆಗಳಿಂದ ನರಳುತ್ತಿದ್ದರೂ ಭಾರತ ತನ್ನ ಮಂತ್ರ ಶಕ್ತಿಯಿಂದ ತಡೆದುಕೊಳ್ಳುತ್ತಿದೆ. ಭೂಮಿಗೆ ಬಿತ್ತಿದ ಕಾಳು ಮೊಳಕೆ ಒಡೆದು ಚಿಗುರಿ ಗಿಡವಾಗಿ ಬೆಳೆದು ಫಲವನ್ನು ನೀಡುವಾಗ ಬಾಗುತ್ತದೆ. ರೀತಿ ಭಗವಂತನ ಸೃಷ್ಟಿಯಲ್ಲಿ ಎಲ್ಲವೂ ತಲೆ ಬಾಗುತ್ತವೆ. ಆದರೆ, ಬಾಗದೆ ಇರುವ ಗುಣವಿರುವುದು ಮನುಷ್ಯನಿಗೆ ಮಾತ್ರ ಎಂದರು.

ಮನುಷ್ಯನ ನಿರಂತರ ಶೋಷಣೆ, ದಬ್ಬಾಳಿಕೆಯಿಂದ ಭೂಮಿ ತನ್ನ ಸತ್ವ ಮತ್ತು ಶಕ್ತಿಯನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಮನುಷ್ಯನಲ್ಲಿರುವ ದುರಾಸೆಯೇ ಪ್ರಮುಖ ಕಾರಣ. ಮನುಷ್ಯನು ಭೂಮಿಯ ಮೇಲಿನ ಮಲಿನ ಮತ್ತು ತನ್ನ ಅಂತರಂಗದ ಮಲಿನವನ್ನು ಸ್ವಚ್ಛ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಅಪಾರ ಪರಿಣಾಮವನ್ನು ಎದುರಿಸ ಬೇಕಾಗುತ್ತದೆ. ಆದ್ದರಿಂದ ಮನುಷ್ಯ ಇನ್ನಾದರೂ ಎಚ್ಚರಗೊಳ್ಳಬೇಕಿದೆ. ಭಗವಂತ ತನ್ನ ಭೂಮಿಯ ಮೇಲಿನ ಶಿಷ್ಯರ ಏಳಿಗೆಗಾಗಿ ಸ್ವತಃ ಅವನೇ ಅವತರಿಸುತ್ತಾನೆ. ಅದೇ ರೀತಿ ಬಾಲಗಂಗಾಧರನಾಥ ಸ್ವಾಮೀಜಿ ಭಕ್ತರ ಏಳಿಗೆಗಾಗಿಯೇ ಅವತರಿಸಿದವರು. ಅವರು ಬದುಕಿದ್ದಷ್ಟು ಕಾಲವೂ ಸಮಾಜಮುಖಿ ಜೀವನ ನಡೆಸಿ ಇಡೀ ಸಮಾಜಕ್ಕೆ ಬೆಳಕಾಗಿದ್ದರು ಎಂದರು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ‌ ಸಾನ್ನಿಧ್ಯ ವಹಿಸಿ ಮಾತನಾಡಿ, ‘ಮರಕ್ಕೆ ಬೇರುಗಳಿದ್ದಂತೆ ಮಠಗಳಿಗೆ ಭಕ್ತರೇ ಬೇರುಗಳು. ಸಮಾಜವನ್ನು ಮುನ್ನಡೆಸಲು ಆದರ್ಶ ಪುರುಷರ ಕೊರತೆ ಇದ್ದಂತಹ ಸಂದರ್ಭದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಅವತರಿಸಿ, ಭಕ್ತರಲ್ಲಿಗೇ ಹೋದರು. ಭಡಕ್ತರನ್ನೇ ಶ್ರೀಮಠದ ಶಕ್ತಿಯನ್ನಾಗಿಸಿದರು’ ಎಂದರು.

ಪುರುಷೋತ್ತಮನಾಥ ಸ್ವಾಮೀಜಿ, ಸಿದ್ಧರಾಮ ಚೈತನ್ಯ ಸ್ವಾಮಿ, ವಿಷ್ಣುಪಾದ ಸ್ವಾಮೀಜಿ, ಡಾ.ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿ, ನಂಜಾವಧೂತ ಸ್ವಾಮೀಜಿ ಮತ್ತು ಆದಿಚುಂಚನಗಿರಿ ಸಂಸ್ಥಾನ ಮಠಗಳ ಸ್ವಾಮೀಜಿಗಳು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು