ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಜಾಗೃತಿಯ ಸ್ವಾತಂತ್ರ್ಯ ದಿನಾಚರಣೆ

ಕೊರೊನಾ ಸೋಂಕಿನ ವಿರುದ್ಧ ಅರಿವು ಮೂಡಿಸುವ ಮೂಕಾಭಿನಯ, ಬೀದಿ ನಾಟಕ ಪ್ರದರ್ಶನ
Last Updated 15 ಆಗಸ್ಟ್ 2020, 8:39 IST
ಅಕ್ಷರ ಗಾತ್ರ

ಮಂಡ್ಯ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ 74ನೇ ಸ್ವಾತಂತ್ರ್ಯ ದಿನಾಚರಣೆ ಕೋವಿಡ್‌ ಜಾಗೃತಿಯ ಉತ್ಸವವಾಗಿತ್ತು. ಸರಳವಾಗಿ ನಡೆದ ಸಮಾರಂಭದಲ್ಲಿ ಕೊರೊನಾ ಸೋಂಕಿನ ವಿರುದ್ಧದ ಧ್ವನಿ ಮೊಳಗಿತು.

ಕ್ರೀಡಾಂಗಣಕ್ಕೆ ಬರುವ ಪ್ರತಿಯೊಬ್ಬರಿಗೂ ಸ್ಯಾನಿಟೈಸರ್‌ ನೀಡಲಾಯಿತು. ಮುಖಗವಸು ಧರಿಸಿದ್ದವರಿಗೆ ಮಾತ್ರ ಪ್ರವೇಶ ನೀಡಲಾಯಿತು. ಪೊಲೀಸ್‌, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಅಬಕಾರಿ, ಅರಣ್ಯ ಇಲಾಖೆ ಸಿಬ್ಬಂದಿ, ಎನ್‌ಸಿಸಿ, ಸ್ಕೌಟ್ಸ್‌ ಮತ್ತು ಗೈಡ್‌ ಸ್ವಯಂಸೇವಕರು ಧ್ವಜವಂದನೆ ಸಲ್ಲಿಸಲು ತಯಾರಾಗಿದ್ದರು. ಆದರೆ ಅಂತಿಮ ಕ್ಷಣದಲ್ಲಿ ರಾಜ್ಯ ಸರ್ಕಾರ ಪರೇಡ್‌ ನಿಷೇಧಿಸಿ ಆದೇಶ ಹೊರಡಿಸಿದ ಕೇವಲ ಪಾಲ್ಗೊಳ್ಳುವಿಕೆ ಹಾಗೂ ಪರಿವೀಕ್ಷಣೆಗೆ ಸೀಮಿತವಾಗಿತ್ತು.

ಮೈಸೂರಿನ ಮೈಮ್ಸ್‌ ತಂಡ ಕೊರೊನಾ ವಿರುದ್ಧದ ಜಾಗೃತಿ ಕುರಿತು ಪ್ರದರ್ಶಿಸಿದ ಮೂಕಾಭಿನಯ ಅರಿವಿನ ಧ್ವನಿ ಮೂಡಿಸಿತು. ಗೌತಮ್‌ ನೇತೃತ್ವದ ಕಲಾವಿದರ ತಂಡ ಕೋವಿಡ್‌ ವಿರುದ್ಧ ಹೋರಾಟಕ್ಕೆ ಜನರು ತೆಗೆದುಕೊಳ್ಳಬೇಕಾದ ಕ್ರಮಗಳ ಮೇಲೆ ಬೆಳಕು ಚೆಲ್ಲಿದರು. ಹನಿಯಂಬಾಡಿ ಶಂಕರ್‌ ಹಾಗೂ ಕಲಾವಿದರು ಕೋವಿಡ್‌ ವಿರುದ್ಧದ ಹೋರಾಟದ ಬಗ್ಗೆ ಬೀದಿನಾಟಕ ಪ್ರದರ್ಶನ ಮಾಡಿದರು. ಜಾಗೃತಿಯ ಗೀತೆಗಳನ್ನು ಪ್ರಸ್ತುಪಡಿಸಿದರು.

ಜಿಲ್ಲಾ ಪಂಚಾಯಿತಿ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವತಿಯಿಂದ ‘ಜಲ ಜೀವನ ಮಿಷನ್– ಮನೆಮನೆಗೆ ಜೀವನ ಗಂಗೆ’ ಜಾಗೃತಿಯ ಸ್ತಬ್ಧಚಿತ್ರ ರೂಪಿಸಲಾಗಿತ್ತು. ಆರೋಗ್ಯ ಇಲಾಖೆಯಿಂದ ಕೋವಿಡ್‌ ಸುರಕ್ಷತಾ ಕ್ರಮಗಳ ಬಗ್ಗೆ ಸ್ತಬ್ಧಚಿತ್ರ ಮಾಡಲಾಗಿತ್ತು. ಕೃಷಿಇಲಾಖೆಯಿಂದ ರೈತರಿಗೆ ಸಿಗುವ ಯೋಜನೆಗಳ ಬಗ್ಗೆ ಅರಿವು ಮೂಡಿಸಲಾಯಿತು. ಅರಣ್ಯ ಇಲಾಖೆ ವತಿಯಿಂದ ಪರಿಸರ ಹಾಗೂ ವನ್ಯ ಜೀವಿಗಳ ರಕ್ಷಣೆ ಕುರಿತು ಸ್ತಬ್ಧಚಿತ್ರ ರೂಪಿಸಲಾಗಿತ್ತು.

ರೈತರಿಗೆ ಅನುಕೂಲ: ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ‘ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಜಿಲ್ಲೆಯಲ್ಲಿ ಇದೂವರೆಗೆ 2.59 ಲಕ್ಷ ಫಲಾನುಭವಿಗಳಿಗೆ ₹ 150 ಕೋಟಿ ಸಹಾಯಧನ ವಿತರಣೆ ಮಾಡಲಾಗಿದೆ. ಈ ಹಂಗಾಮಿನಲ್ಲಿ ಬೆಳೆ ಸಮೀಕ್ಷೆ ನಡೆಸಲು ರೈತರಿಗೆ ಅವಕಾಶ ಮಾಡಿಕೊಡಲಾಗಿದೆ’ ಎಂದರು.

‘ಒಂದು ವರ್ಷದ ಅವಧಿಯಲ್ಲಿ ಜಿಲ್ಲೆಯ 6,192 ಫಲಾನುಭವಿಗಳಿಗೆ ಪಡಿತರ ಚೀಟಿ, 4873 ಮಂದಿಗೆ ಎಪಿಎಲ್‌ ಕಾರ್ಡ್‌ ವಿತರಣೆ ಮಾಡಲಾಗಿದೆ. 15 ಲಕ್ಷಕ್ಕೂ ಹೆಚ್ಚು ಜನರು ಉಚಿತವಾಗಿ ಆಹಾರ ಧಾನ್ಯ ಪಡೆಯುತ್ತಿದ್ದಾರೆ. ಸಂಧ್ಯಾ ಸುರಕ್ಷಾ ಯೋಜನೆಯಡಿ ಫಲಾನುಭಿಗಳು ಪಡೆಯುತ್ತಿದ್ದ ₹ 600 ಮಾಸಾಶನವನ್ನು ₹ 1 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. ಇದರಿಂದ 1.32 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಿದೆ. ಇಲ್ಲಿಯವರೆಗೆ 6.50 ಲಕ್ಷ ಆರ್‌ಟಿಸಿ ಒಟ್ಟುಗೂಡಿಸಿ ರೈತರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲಾಗಿದೆ’ ಎಂದರು.

‘3,800 ಆರ್‌ಟಿಸಿಗಳನ್ನು ತಿದ್ದುಪಡಿ ಮಾಡಿ ರೈತರ ಮನೆ ಬಾಗಿಲಿಗೆ ವಿತರಣೆ ಮಾಡಲಾಗಿದೆ. ಕೋವಿಡ್‌ ಅವಧಿಯಲ್ಲಿ ಸಂಕಷ್ಟ ಅನುಭವಿಸುತ್ತಿದ್ದ ಜಿಲ್ಲೆಯ ಹೂವು ಬೆಳೆಗಾರರ ನೆರವಿಗೆ ಸರ್ಕಾರ ಎಕರೆಗೆ ತಲಾ ₹ 25 ಸಾವಿರ ಪರಿಹಾರ ವಿತರಣೆ ಮಾಡುತ್ತಿದೆ. ಕಾವೇರಿ ನೀರಾವರಿ ನಿಗಮದ ವತಿಯಿಂದ ಕೊತ್ತತ್ತಿ ಹೋಬಳಿಯ 28 ಗ್ರಾಮಗಳಿಗೆ ಕುಡಿಯುವ ನೀರು, 5 ಕೆರೆಗಳಿಗೆ ನೀರು ತುಂಬಿಸುವ ₹ 18.5 ಕೋಟಿ ವೆಚ್ಚದ ಏತ ನೀರಾವರಿಗೆ ಚಾಲನೆ ನೀಡಲಾಗಿದೆ’ ಎಂದು ಹೇಳಿದರು.

‘ಉದ್ಯೋಗ ಖಾತ್ರಿ ಯೋಜನೆಯಡಿ ₹ 175 ಕೋಟಿ ಹಣಕ್ಕೆ ಅನುಮೋದನೆ ಪಡೆದು ಒಟ್ಟು 29 ಲಕ್ಷ ಮಾನವ ದಿನ ಸೃಜಿಸಲಾಗಿದೆ. ಜಿಲ್ಲಾ ಪಂಚಾಯಿತಿ ಇತಿಹಾಸದಲ್ಲೇ ಮೊದಲ ಬಾರಿಗೆ ಏಕಕಾಲಕ್ಕೆ 4 ವಿಭಾಗಗಳಲ್ಲಿ ರಾಷ್ಟ್ರೀಯ ಪುರಸ್ಕಾರ ದೊರೆತಿದ್ದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಳ ಮಾಡಲಾಗಿದೆ. ಸ್ವಚ್ಛ ಭಾರತ್‌ ಮಿಷನ್‌ನಡಿ 3,072 ವೈಯಕ್ತಿಕ ಶೌಚಾಲಯ ನಿರ್ಮಾಣದ ಗುರಿ ಹೊಂದಲಾಗಿದೆ’ ಎಂದರು.

ಶಾಸಕರಾದ ಎಂ.ಶ್ರೀನಿವಾಸ್‌, ಕೆ.ಟಿ.ಶ್ರೀಕಂಠೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನಾ ಸ್ವಾಮಿ, ಉಪಾಧ್ಯಕ್ಷೆ ಗಾಯತ್ರಿ ರೇವಣ್ಣ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌, ಜಿಪಂ ಸಿಇಒ ಜುಲ್ಫಿಕರ್‌ ಉಲ್ಲಾ ಇದ್ದರು.

ಮಕ್ಕಳ ಕಲರವ, ಸಂಭ್ರಮ ಇಲ್ಲ

ಪ್ರತಿ ವರ್ಷ ಸ್ವಾತಂತ್ರ್ಯೋತ್ಸವದಲ್ಲಿ ಮಕ್ಕಳ ಕಲರವ ಮೊಳಗುತ್ತಿತ್ತು. ಜಿಲ್ಲಾ ಕ್ರೀಡಾಂಗಣದ ತುಂಬೆಲ್ಲ ಮಕ್ಕಳ ಧ್ವನಿ ಕೇಳಿ ಬರುತ್ತಿತ್ತು. ಆದರೆ ಈ ವರ್ಷ ಕೋವಿಡ್‌ ಕಾರಣದಿಂದ ಶಾಲಾ ಮಕ್ಕಳ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ. ಹೀಗಾಗಿ ಮಕ್ಕಳ ಧ್ವನಿ ಕಳೆದುಕೊಂಡ ಉತ್ಸವ ಕಳೆಗುಂದಿತ್ತು.

‘ಇಷ್ಟೊಂದು ಯಾಂತ್ರಿಕವಾಗಿ ಯಾವ ವರ್ಷವೂ ಸ್ವಾತಂತ್ರ್ಯ ದಿನಾಚರಣೆ ನಡೆದಿರಲಿಲ್ಲ. ಕ್ರೀಡಾಂಗಣದಲ್ಲಿ ಮಕ್ಕಳ ಸಂಭ್ರಮ ನೋಡಲು ಎರಡು ಕಣ್ಣು ಸಾಲುತ್ತಿರಲಿಲ್ಲ. ಆದಷ್ಟು ಬೇಗ ಕೊರೊನಾ ಸೋಂಕಿನಿಂದ ದೇಶ ಹೊರಬರಬೇಕಾಗಿದೆ. ಶಾಲೆಗಳು ಆರಂಭಗೊಂಡು ಮತ್ತೊಮ್ಮೆ ಮಕ್ಕಳ ಧ್ವನಿ ಕೇಳುವಂತಾಗಬೇಕು’ ಎಂದು ಶಿಕ್ಷಕರೊಬ್ಬರು ಹೇಳಿದರು.

ಮೈಷುಗರ್‌ ‘ಒ ಅಂಡ್‌ ಎಂ’ ಶೀಘ್ರ

‘ಮೈಷಗರ್‌ ಕಾರ್ಖಾನೆಯನ್ನು ಶೀಘ್ರ ಒ ಅಂಡ್‌ ಎಂ ಮಾದರಿಯಲ್ಲಿ ಕಾರ್ಯಾರಂಭ ಮಾಡಿ ರೈತರ ಹಿತರಕ್ಷಣೆ ಮಾಡಲಾಗುವುದು. ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ನೀಡಲಾಗಿದ್ದು ಈಗಾಗಲೇ ಕಾರ್ಯಾರಂಭ ಮಾಡಿದೆ. ಇದರಿಂದ ಈ ಭಾಗದ 10 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ’ ಎಂದು ಸಚಿವ ನಾರಾಯಣಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT