ಇಂದಿರಾ ಕ್ಯಾಂಟೀನ್‌: ಕಾಣೆಯಾದ ರುಚಿ, ಶುಚಿ!

7
ಕೇವಲ ಐದು ತಿಂಗಳಲ್ಲಿ ಕಳೆದು ಹೋದ ಆಕರ್ಷಣೆ, ತಿಂಡಿಯ ಮೇಲೆ ಜನರಿಗೆ ನಿರಾಸಕ್ತಿ

ಇಂದಿರಾ ಕ್ಯಾಂಟೀನ್‌: ಕಾಣೆಯಾದ ರುಚಿ, ಶುಚಿ!

Published:
Updated:
Deccan Herald

ಮಂಡ್ಯ: ನಗರದ ‘ಇಂದಿರಾ ಕ್ಯಾಂಟೀನ್‌’ಗಳಲ್ಲಿ ಮೊದಲಿದ್ದ ನೂಕುನುಗ್ಗಲು ಈಗ ಮಾಯವಾಗಿದೆ. ಬೆಳಿಗ್ಗೆಯ ತಿಂಡಿಗಾಗಿ ಸಾಲುಗಟ್ಟಿ ನಿಲ್ಲುತ್ತಿದ್ದ ಜನರು ಈಗ ‘ತಿಂಡಿ’ ಎಂದರೆ ದೂರ ಸರಿಯುತ್ತಿದ್ದಾರೆ. ಕೇವಲ ಐದು ತಿಂಗಳಲ್ಲಿ ನಗರದ ಎರಡೂ ಕ್ಯಾಂಟೀನ್‌ಗಳು ಆಕರ್ಷಣೆ ಕಳೆದುಕೊಂಡಿವೆ.

ಇಂದಿರಾ ಕ್ಯಾಂಟೀನ್‌, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲು ಕಂಡ ನಂತರ ಇಂದಿರಾ ಕ್ಯಾಂಟೀನ್‌ಗಳು ತಮ್ಮ ಮಹತ್ವ ಕಳೆದುಕೊಳ್ಳುತ್ತಿವೆ. ಆರಂಭದಲ್ಲಿ ಬಹಳ ಚೆನ್ನಾಗಿ ನಡೆಯುತ್ತಿದ್ದ ನಗರದ ಎರಡೂ ಕ್ಯಾಂಟೀನ್‌ಗಳಲ್ಲಿ ಈಗ ರುಚಿ, ಗುಣಮಟ್ಟ ಮಾಯವಾಗಿದೆ. ಸ್ವಚ್ಛತೆಯ ಕೊರತೆಯಿಂದ ಗ್ರಾಹಕರು ಕ್ಯಾಂಟೀನ್‌ ಬಳಿಗೆ ಬರುತ್ತಿಲ್ಲ. ‘ಒಂದೇ ರುಚಿ’ ತಿಂದು ಬೇಸತ್ತಿರುವ ಜನರು ಇಂದಿರಾ ಕ್ಯಾಂಟೀನ್‌ ಕಂಡರೆ ಮೂಗು ಮುರಿಯುತ್ತಿದ್ದಾರೆ. ಹೀಗಾಗಿ ದಿನೇ ದಿನೇ ಕ್ಯಾಂಟೀನ್‌ಗೆ ಗ್ರಾಹಕರ ಸಂಖ್ಯೆ ಕುಸಿಯುತ್ತಿದೆ.

ನಿಯಮದ ಪ್ರಕಾರ ಕ್ಯಾಂಟೀನ್‌ನಲ್ಲಿ ಪ್ರತಿದಿನ ಇಡ್ಲಿ ಮಾಡಬೇಕು. ಇಡ್ಲಿ ಜೊತೆಗೆ ಯಾವುದಾದರೂ ಇನ್ನೊಂದು ತಿಂಡಿ ಮಾಡಬೇಕು. ಆದರೆ ನಗರದ ಎರಡೂ ಕ್ಯಾಂಟೀನ್‌ಗಳಲ್ಲಿ ವಾರದಲ್ಲಿ ಎರಡು ದಿನ ಮಾತ್ರ ಇಡ್ಲಿ ಮಾಡುತ್ತಿದ್ದಾರೆ. ಪ್ರತಿನಿತ್ಯ ಉಪ್ಪಿಟ್ಟು ಮಾಡುತ್ತಿರುವ ಕಾರಣ ಗ್ರಾಹಕರಿಗೆ ರುಚಿ ಸಿಗುತ್ತಿಲ್ಲ. ಜೊತೆಗೆ ಮಧ್ಯಾಹ್ನ ಊಟಕ್ಕೆ ಪ್ರತಿದಿನ ತರಕಾರಿ ಸಾಂಬರ್‌ ಮಾಡಬೇಕು. ಆದರೆ ಕೆಲವು ದಿನ ತಿಳಿ ಸಾಂಬಾರ್‌ ಮಾತ್ರ ಮಾಡುತ್ತಿದ್ದು ಇದು ಗ್ರಾಹಕರಿಗೆ ಇಷ್ಟವಾಗುತ್ತಿಲ್ಲ.

‘ಉಪ್ಪಿಟ್ಟು ಪಾಯಸದಂತಿರುತ್ತದೆ, ಪಲಾವ್‌ನಲ್ಲಿ ಬಟಾಣಿ ಬೆಂದಿರುವುದಿಲ್ಲ, ಅನ್ನ ಮುಳ್ಳಕ್ಕಿಯಾಗಿರುತ್ತದೆ. ಇಡ್ಲಿ ಮಾಡಿದ ದಿನ ಮಾತ್ರ ನಾನು ಇಂದಿರಾ ಕ್ಯಾಂಟೀನ್‌ನಲ್ಲಿ ತಿಂಡಿ ತಿನ್ನುತ್ತೇನೆ. ಇಂದಿರಾ ಕ್ಯಾಂಟೀನ್‌ ತಿಂಡಿ ಎಂದರೆ ಬೇಸರ ಬರುತ್ತದೆ. ಮಧ್ಯಾಹ್ನದ ಊಟದ ಸಾಂಬಾರ್‌ಗೆ ಒಂದೇ ಥರದ ತರಕಾರಿ ಹಾಕುತ್ತಾರೆ. ಆರಂಭದಲ್ಲಿ ಚೆನ್ನಾಗಿ ಮಾಡುತ್ತಿದ್ದರು. ಆದರೆ ಸಿದ್ದರಾಮಯ್ಯ ಅಧಿಕಾರದಿಂದ ಇಳಿದ ಮೇಲೆ ಬಡವರ ಹೊಟ್ಟೆಯ ಮೇಲೆ ಯಾರಿಗೂ ಕಾಳಜಿ ಇಲ್ಲ. ಹೀಗೆಯೇ ನಡೆದರೆ ಇನ್ನು ಕೆಲವೇ ತಿಂಗಳಲ್ಲಿ ಕ್ಯಾಂಟೀನ್‌ ಮುಚ್ಚಿ ಹೋಗುತ್ತವೆ’ ಎಂದು ಗಾರೆ ಕಾರ್ಮಿಕ ರಾಜು ಹೇಳಿದರು.

ಸಾರಿಗೆ ಬಸ್‌ ನಿಲ್ದಾಣದ ಎದುರು ಒಂದು, ಆರೋಗ್ಯ ಇಲಾಖೆ ಕಚೇರಿ ಆವರಣಲ್ಲಿ ಒಂದು ಸೇರಿ ಎರಡು ಕ್ಯಾಂಟೀನ್‌ ಸ್ಥಾಪಿಸಲಾಗಿದೆ. ಮಾರ್ಚ್‌ 12ರಂದು ಕ್ಯಾಂಟೀನ್‌ಗೆ ಚಾಲನೆ ನೀಡಲಾಯಿತು. ಕ್ಯಾಂಟೀನ್‌ ಆರಂಭವಾಗಿ ಕೇವಲ ಐದು ತಿಂಗಳಾಗಿದ್ದು ಆಗಲೇ ಎರಡೂ ಕ್ಯಾಂಟೀನ್‌ಗಳು ಗುಣಮಟ್ಟ ಕಳೆದುಕೊಳ್ಳುತ್ತಿವೆ.

‌‘ಆರೋಗ್ಯ ಇಲಾಖೆ ಕಚೇರಿ ಎದುರಿನ ಕ್ಯಾಂಟೀನ್‌ನಲ್ಲಿ ಉಪ್ಪಿನ ಡಬ್ಬಿಗೆ ಚಮಚ ಹಾಕುವುದಿಲ್ಲ. ಜನರು ಎಂಜಲು ಕೈಯಲ್ಲೇ ಉಪ್ಪು ಹಾಕಿಕೊಳ್ಳಬೇಕು. ಈ ಬಗ್ಗೆ ಕೇಳಿದರೆ, ಜನ ಚಮಚ ಕಳ್ಳತನ ಮಾಡಿಕೊಂಡು ಹೋಗುತ್ತಾರೆ ಎಂಬ ಉಡಾಫೆ ಉತ್ತರ ಕೊಡುತ್ತಾರೆ. ಯಾವಾಗಲೂ ಪ್ಲೇಟ್‌ಗಳು ರಾಶಿ ರಾಶಿ ಬಿದ್ದಿರುತ್ತವೆ. ಅವುಗಳನ್ನು ನೋಡಿದರೆ ತಿನ್ನಲು ಮನಸ್ಸು ಬರುವುದಿಲ್ಲ’ ಎಂದು ಗ್ರಾಹಕ ಶಿವಣ್ಣ ತಿಳಿಸಿದರು.

ಕೆಲಸಗಾರರ ಕೊರತೆ: ಕ್ಯಾಂಟೀನ್‌ಗಳಲ್ಲಿ ಅಡುಗೆಯವರು ಹಾಗೂ ಇತರ ಕೆಲಸಗಾರರು ಕೊರತೆಯಾಗಿರುವ ಕಾರಣ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕ್ಯಾಂಟೀನ್‌ ಸಿಬ್ಬಂದಿ ಹೇಳುತ್ತಾರೆ. ‘ಅಡುಗೆಯವರು ಒಂದು ದಿನ ಬಂದರೆ ಇನ್ನೊಂದು ದಿನ ಬರುತ್ತಿಲ್ಲ. ಕೆಲಸಗಾರರ ಕೊರತೆಯಿಂದ ಪ್ರತಿದಿನ ಇಡ್ಲಿ ಮಾಡಲು ಸಾಧ್ಯವಾಗುತ್ತಿಲ್ಲ. ಸ್ವಚ್ಛತೆಯ ವಿಷಯದಲ್ಲೂ ಕೆಲಸಗಾರರ ಕೊರತೆಯಾಗಿದೆ’ ಎಂದು ನಗರದ ಎರಡೂ ಕ್ಯಾಂಟೀನ್‌ ಉಸ್ತುವಾರಿ ನೋಡಿಕೊಳ್ಳುವ ಸುನೀಲ್‌ ಕುಮಾರ್‌ ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !