ಶುಕ್ರವಾರ, ಡಿಸೆಂಬರ್ 13, 2019
26 °C

ಕಸ ಹಾಕುವ ಸ್ಥಳದಲ್ಲಿ ಅಂಬೇಡ್ಕರ್ ಭಾವಚಿತ್ರ: ಪ್ರಕ್ಷುಬ್ದ ವಾತಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಂಡವಪುರ: ಪಟ್ಟಣದ ಮಿನಿ ವಿಧಾನಸೌಧದ ಪ್ರಾಗಂಣದ ಕಸ ಹಾಕುವ ಸ್ಥಳದಲ್ಲಿ ಗುರುವಾರ ಅಂಬೇಡ್ಕರ್ ಭಾವಚಿತ್ರ ಬಿದ್ದಿದ್ದ ಕಾರಣ ಕೆಲ ಕಾಲ ಪ್ರಕ್ಷಬ್ದ ವಾತಾವರಣ ಸೃಷ್ಟಿಯಾಗಿತ್ತು.

ಭಾವಚಿತ್ರದ ವಿಡಿಯೊ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದವು. ದಲಿತ ಸಂಘಟನೆಯ ಮುಖಂಡರು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ, ಘಟನೆಗೆ ಕಾರಣವಾದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಂತರ ತಹಶೀಲ್ದಾರ್ ಪ್ರಮೋದ್ ಎಲ್ ಪಾಟೀಲ್  ಕಸದ ಸ್ಥಳದಲ್ಲಿ ಬಿದ್ದಿದ್ದ ಅಂಬೇಡ್ಕರ್ ಭಾವಚಿತ್ರ ತೆಗೆಸಿ ಕಚೇರಿಯಲ್ಲಿ ಇಟ್ಟು ಹೂಹಾಕಿ ಗೌರವ ಸಲ್ಲಿಸಿದರು.

ತಕ್ಷಣ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಉಪ ವಿಭಾಗಾಧಿಕಾರಿ ವಿ.ಆರ್.ಶೈಲಜಾ ಅವರ ಅಧ್ಯಕ್ಷತೆಯಲ್ಲಿ ರಾತ್ರಿ 8ಗಂಟೆವರೆಗೂ ಸಭೆ ನಡೆಯಿತು.

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಲಾಗಿದೆ. ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮವಹಿಸಬೇಕು ಎಂದು ಸಭೆಯಲ್ಲಿದ್ದ ದಲಿತ ಸಂಘರ್ಷ ಸಮಿತಿ ಮುಖಂಡರಾದ ಸಂಚಾಲಕ ಗುರುಪ್ರಸಾದ್ ಕೆರೆಗೋಡು, ಎಂ.ಬಿ.ಶ್ರೀನಿವಾಸ್ ಒತ್ತಾಯಿಸಿದರು.

ತಹಶೀಲ್ದಾರ್ ಪ್ರಮೋದ್ ಎಲ್ ಪಾಟೀಲ್ ಮಾತನಾಡಿ, ವಿಧಾನಸೌಧದ ಕಟ್ಟಡದಲ್ಲಿ ಕೆಲ ಕೊಠಡಿಗಳ ನವೀಕರಣ ನಡೆಯುತ್ತಿದೆ. ಇದರ ಪಕ್ಕದಲ್ಲಿಯೇ ಇರುವ ಪ್ರಾಗಂಣದಲ್ಲಿ ಒಂದಿಷ್ಟು ಕಸ ಬಿದ್ದಿದೆ. ಈ ಸ್ಥಳಕ್ಕೆ ಅಂಬೇಡ್ಕರ್ ಅವರ ಭಾವಚಿತ್ರ ಬಿದ್ದಿರುವುದು ನಮ್ಮ ಕಡೆದ ಅಪರಾಧವಾಗಿದೆ. ಈ ಭಾವಚಿತ್ರ ತಾಲ್ಲೂಕು ಖಜಾನೆಯ ಕಚೇರಿಯಲ್ಲಿದ್ದ ಭಾವಚಿತ್ರ ಎಂದು ತಿಳಿದು ಬಂದಿದೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು

ತಾಲ್ಲೂಕು ಖಜಾನಾಧಿಕಾರಿ ರವಿಕುಮಾರ್ ಮಾತನಾಡಿ  ‘ಕೆಲವು ದಿನಗಳ ಹಿಂದೆ ಕಚೇರಿಯಲ್ಲಿ ಅಂಬೇಡ್ಕರ್ ಸೇರಿದಂತೆ ಹಲವು ನಾಯಕರ ಭಾವಚಿತ್ರ ಹಾಕಲಾಯಿತು. ಆ ಸಂದರ್ಭದಲ್ಲಿ ಹಳೆಯ ಅಂಬೇಡ್ಕರ್ ಚಿತ್ರವನ್ನು ಕಚೇರಿಯಲ್ಲಿಯೇ ಒಂದೆಡೆ ಇಡಲಾಗಿತ್ತು. ಅದು ಹೊರಗಡೆ ಹೇಗೆ ಬಂತು ಎಂಬುದು ತಿಳಿಯದಾಗಿದೆ. ತನಿಖೆಗೆ ನಾನು ಸಹಕರಿಸುತ್ತೇನೆ. ಯಾರೇ ತಪ್ಪೆಸಗೆಗಿದ್ದರೂ ಕಾನೂನು ಕ್ರಮಕೈಗೊಳ್ಳಬೇಕಿದೆ ಎಂದು ಹೇಳಿದರು.

ಮಾತಿನ ಚಕಮಕಿ: ರಾತ್ರಿ 8 ರಲ್ಲಿ ಸ್ಥಳಕ್ಕೆ ಬಂದ ಡಿವೈಎಸ್‌ಪಿ ಅರುಣ್‌ ನಾಗೇಗೌಡ ಅವರನ್ನು ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರೆಗೋಡು, ಈ ಘಟನೆಯ ಸಂಬಂಧ ದೂರು ದಾಖಲಿಸಿಕೊಳ್ಳಲಾಗಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಡಿವೈಎಸ್‌ಪಿ ಅರುಣ್‌ ನಾಗೇಗೌಡ ಸಮಜಾಯಿಸಿ ನೀಡದೆ ಹೊರಡಲು ಮುಂದಾದರು.

ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಗುರುಪ್ರಸಾದ್ ‘ಸಮಜಾಯಿಸಿ ಉತ್ತರ ನೀಡದೆ ಹೋಗುತ್ತಿರುವುದು ಉಡಾಫೆಯ ನಡವಳಿಕೆಯಾಗಿದೆ’ ಎಂದು ಪ್ರತಿಭಟಿಸಿದರು. ನಂತರ ಡಿವೈಎಸ್‌ಪಿ ಅರುಣ್‌, ಸಿಪಿಐ ರವೀಂದ್ರ, ಎಫ್‌ಐಆರ್ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ದಲಿತ ಸಂಘಟನೆಯ ಮುಖಂಡರಾದ ಎಚ್‌.ಪಿ.ಸೋಮಶೇಖರ್, ರವೀಂದ್ರ, ಯೋಗೇಶ್, ಚಂದ್ರು, ರಮೇಶ್, ಎಚ್.ಜಿ.ಗೋವಿಂದರಾಜ್‌ ಇತರರು ಇದ್ದರು.

ಪ್ರತಿಕ್ರಿಯಿಸಿ (+)