ಬುಧವಾರ, ನವೆಂಬರ್ 13, 2019
28 °C

ಜಾನುವಾರು ವಿಮೆ ಮಾಡಿದರೆ ನಷ್ಟದಿಂದ ಪಾರು

Published:
Updated:
Prajavani

ನಾಗಮಂಗಲ: ರೈತರು ತಾವು ಸಾಕಿದ ಹಸು ಮತ್ತು ಎಮ್ಮೆಗಳಿಗೆ ವಿಮೆ ಮಾಡಿಸುವುದರಿಂದ ರೋಗರುಜಿನಗಳಿಗೆ ಒಳಗಾಗಿ ಸಾವಿಗೀಡಾಗುವ ರಾಸುಗಳಿಂದ ತಮಗಾಗುವ ಆರ್ಥಿಕ ನಷ್ಟವನ್ನು ಪಾರಾಗಬಹುದು ಬ್ಯಾಡರಹಳ್ಳಿ ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಬಿ.ಮೋಹನ್ ಹೇಳಿದರು.

ತಾಲ್ಲೂಕಿನ ಬ್ಯಾಡರಹಳ್ಳಿಯ ಸಮೂಹ ಹಾಲು ಶೀಥಲೀಕರಣ ಕೇಂದ್ರ ಮತ್ತು ಮಂಡ್ಯ ಜಿಲ್ಲಾ ಒಕ್ಕೂಟದ ವತಿಯಿಂದ ಜಾನುವಾರುಗಳಿಗೆ ವಿಮೆ ಮಾಡಿಸುವ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿಮೆಯನ್ನು ಹಸುಗಳ ಗುಣಮಟ್ಟದ ಮೇಲೆ ವಿಮೆ ಕಂಪನಿ ಮತ್ತು ಪಶು ವೈದ್ಯರು ದೃಢಪಡಿಸಲಿದ್ದು, ಪಾಲಿಸಿಯ ಮೊತ್ತದ ಶೇ 70ರಷ್ಟು ಭಾಗವನ್ನು ಮಂಡ್ಯ ಹಾಲು ಒಕ್ಕೂಟ ಮತ್ತು ಉಳಿಕೆ ಶೇ 30ರಷ್ಟು ಭಾಗದ ಹಣವನ್ನು ಹಾಲು ಉತ್ಪಾದಕರ ಸಹಕಾರ ಸಂಘದ ರಾಸು ಅಭಿವೃದ್ಧಿ ನಿಧಿಯಿಂದ ನೀಡಲಾಗುವುದು. ಪ್ರತಿ ಹಾಲು ಉತ್ಪಾದಕರು ಈ ಯೋಜನೆಯ ಸದುಪಯೋಗಪಡೆದುಕೊಳ್ಳಿ ಎಂದರು.

ಅಲ್ಲದೇ ಹೈನುಗಾರರು ಸಂಘದಿಂದ ಬರುವ ಆದಾಯವನ್ನು ಮಾತ್ರವೇ ಪಡೆಯದೇ ಉತ್ತಮ ಗುಣಮಟ್ಟ ಹಾಲನ್ನು ಉತ್ಪಾದಿಸಬೇಕು. ಜೊತೆಗೆ ಸಂಘವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಹಕಾರ ನೀಡಬೇಕು. ಆಗ ಮಾತ್ರವೇ ಸಂಘ ಸ್ಥಳೀಯ ಹೈನುಗಾರರ ಹಿತ ಕಾಪಾಡಲು ಸಾಧ್ಯ ಎಂದರು.

ಸಂಘದ ನಿರ್ದೇಶಕರಾದ ಬಿ.ಎಸ್.ಶಂಕರಯ್ಯ, ಎಚ್.ಆರ್.ಸಂತೋಷ್, ಕಾರ್ಯದರ್ಶಿ ನಿಂಗರಾಜು, ಹಾಲು ಪರೀಕ್ಷಕ ಶಿವಕುಮಾರ್, ಸಹಾಯಕ ಬಿ.ಪಿ. ಮನೋಜ್ ಮತ್ತು ಇಫ್ಕೋ ವಿಮೆ ಕಂಪನಿಯ ಅಧಿಕಾರಿಗಳು ಇದ್ದರು.

ಪ್ರತಿಕ್ರಿಯಿಸಿ (+)