ಶನಿವಾರ, ಆಗಸ್ಟ್ 20, 2022
21 °C
ಚುನಾವಣಾ ಫಲಿತಾಂಶ ಬಂದು ಇಂದಿಗೆ ಎರಡು ವರ್ಷ, ಹೈಕೋರ್ಟ್‌ನಲ್ಲಿ ಬಾಕಿ ಉಳಿದ ಮೀಸಲಾತಿ ಗೊಂದಲ

ಮಂಡ್ಯ: ನಗರಸಭೆಯಲ್ಲಿ 2 ವರ್ಷ ಕಳೆದರೂ ಸದಸ್ಯರಿಗೆ ಅಧಿಕಾರವಿಲ್ಲ

ಎಂ.ಎನ್‌.ಯೋಗೇಶ್‌‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಸೆ.3ಕ್ಕೆ ಎರಡು ವರ್ಷಗಳ ಹಿಂದೆ ನಗರಸಭೆ ಚುನಾವಣೆಯಲ್ಲಿ ಗೆದ್ದ ಸದಸ್ಯರು ಇಲ್ಲಿಯವರೆಗೂ ಪ್ರಮಾಣವಚನ ಸ್ವೀಕರಿಸಿಲ್ಲ. ನಗರಸಭೆಯಲ್ಲಿ ಅಧಿಕಾರಿಗಳ ಕಾರುಬಾರು ಜೋರಾಗಿದ್ದು ಸದಸ್ಯರು ನಾಮಕಾವಸ್ತೆಗೆ ಮಾತ್ರ ಇರುವಂತಾಗಿದೆ.

2018, ಆ.31ರಂದು ಚುನಾವಣೆ ನಡೆದು ಸೆ.3ರಂದು ಫಲಿತಾಂಶ ಪ್ರಕಟಗೊಂಡಿತ್ತು. ಚುನಾವಣಾ ಫಲಿತಾಂಶದ ನಂತರ ಕಾಂಗ್ರೆಸ್‌ ಕೈಯಲ್ಲಿದ್ದ ಆಡಳಿತವನ್ನು ಜೆಡಿಎಸ್‌ ಕಸಿದುಕೊಂಡಿತ್ತು. ಒಟ್ಟು 35 ವಾರ್ಡ್‌ಗಳಲ್ಲಿ ಜೆಡಿಎಸ್‌ 18, ಕಾಂಗ್ರೆಸ್‌ 10, ಬಿಜೆಪಿ 2, ಪಕ್ಷೇತರರಾಗಿ 5 ಮಂದಿ ಆಯ್ಕೆಯಾಗಿದ್ದರು. ಅಧ್ಯಕ್ಷ– ಉಪಾಧ್ಯಕ ಮೀಸಲಾತಿ ವಿಚಾರದಲ್ಲಿ ಗೊಂದಲ ಉಂಟಾಗಿದ್ದು ಪ್ರಕರಣ ಹೈಕೋರ್ಟ್‌ ಅಂಗಳದಲ್ಲಿದೆ. ಪ್ರಕರಣ ಇತ್ಯರ್ಥವಾಗದ ಕಾರಣ ಸದಸ್ಯರಿಗೆ ಅಧಿಕಾರ ಎಂಬುದು ಮರೀಚಿಕೆಯಾಗಿಯೇ ಉಳಿದಿದೆ.

ಫಲಿತಾಂಶ ಪ್ರಕಟಗೊಂಡ ದಿನವೇ ಸರ್ಕಾರ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ನಿಗದಿ ಮಾಡಿ ಪಟ್ಟಿ ಪ್ರಕಟಿಸಿತ್ತು. ನಂತರ 2018, ಸೆ.6ರಂದು ಪರಿಷ್ಕೃತ ಮೀಸಲಾತಿ ಪಟ್ಟಿ ಪ್ರಕಟಗೊಂಡಿತು. ಆದರೆ ಹೊಸಪಟ್ಟಿಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್‌ ಸಲ್ಲಿಕೆಯಾಗಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್‌ ಸೆ.3ರಂದು ಪ್ರಕಟಿಸಿದ್ದ ಮೀಸಲಾತಿ ಪಟ್ಟಿಯನ್ನೇ ಎತ್ತಿ ಹಿಡಿಯಿತು. ಆದರೆ ಆದೇಶ ಪ್ರಶ್ನಿಸಿ ಮತ್ತೆ ಮೇಲ್ಮನವಿ ಸಲ್ಲಿಸಲಾಯಿತು. ಮೇಲ್ಮನವಿ ಕೋರ್ಟ್‌ನಲ್ಲಿ ಬಾಕಿ ಉಳಿದಿದ್ದು ಸದಸ್ಯರು ಅಧಿಕಾರ ವಹಿಸಿಕೊಳ್ಳಲು ಸಾಧ್ಯವಾಗಿಲ್ಲ.

ಸೆ.3ರಂದು ಪ್ರಕಟಿಸಿದ ಮೀಸಲಾತಿಯಲ್ಲಿ ಅಧ್ಯಕ್ಷರ ಹುದ್ದೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಸ್ಥಾನ ಹಿಂದುಳಿದ (ಬ) ವರ್ಗದ ಮಹಿಳೆಗೆ ಮೀಸಲಾಗಿತ್ತು. ಸ್ಥಳೀಯ ಶಾಸಕ ಸರ್ಕಾರದ ಮೇಲೆ ಒತ್ತಡ ತಂದು ತಮಗೆ ಬೇಕಾದ ಸಮುದಾಯಗಳಿಗೆ ಮೀಸಲಾತಿ ನಿಗದಿ ಮಾಡಿಸಿದ್ದಾರೆ ಎಂದು ಸದಸ್ಯರು ಆರೋಪಿಸಿದ್ದರು. ತಡೆಯಾಜ್ಞೆ ತೆರವುಗೊಳಿಸಿ ಪ್ರಕರಣ ಇತ್ಯರ್ಥವಾಗುವಂತೆ ನೋಡಿಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು  ಮನಸ್ಸು ಮಾಡುತ್ತಿಲ್ಲ.

ನಗರಸಭೆ ಆಡಳಿತ ಮಂಡಳಿ ರಚನೆಯಾಗದ ಪರಿಣಾಮ ಈಗ ನಗರಸಭೆಯ ಅಧಿಕಾರ ಜಿಲ್ಲಾಧಿಕಾರಿ ನಿಯಂತ್ರಣದಲ್ಲಿದೆ. ಜಿಲ್ಲಾಧಿಕಾರಿ ನಗರಸಭೆಯ ಆಡಳಿತಾಧಿಕಾರಿಯಾಗಿದ್ದು ಯಾವುದೇ ಕಾಮಗಾರಿ ಕೈಗೊಳ್ಳುವಾಗ ಅವರ ನಿರ್ಧಾರವೇ ಅಂತಿಮವಾಗಿದೆ. ಸದಸ್ಯರು ಅಧಿಕಾರವನ್ನೇ ವಹಿಸಿಕೊಳ್ಳದ ಕಾರಣ ನಗರಸಭೆಯ ನಿರ್ಣಯಗಳಿಗೆ ಸದಸ್ಯರಿಗೆ ಯಾವುದೇ ಅಧಿಕಾರ ಇಲ್ಲವಾಗಿದೆ.

ನಗರಸಭೆಯಲ್ಲಿ ಸದಸ್ಯರ ಮಾತುಗಳಿಗೆ ಮನ್ನಣೆ ದೊರೆಯುತ್ತಿಲ್ಲ, ಅಧಿಕಾರಿಗಳ ದರ್ಬಾರ್‌ ನಡೆಯುತ್ತಿದೆ. ಸದಸ್ಯರ ಗಮನಕ್ಕೆ ತಾರದೇ ಅಧಿಕಾರಿಗಳು ನಿರ್ಣಯ ಕೈಗೊಳ್ಳುತ್ತಿದ್ದಾರೆ ಎಂದು ಸದಸ್ಯರು ಆರೋಪಿಸುತ್ತಾರೆ. ‘ನಗರದಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿದ್ದು ಹೊರಗಡೆ ಕಾಲಿಡಲು ಸಾಧ್ಯವಾಗುತ್ತಿಲ್ಲ. ಜನರು ನಗರಸಭಾ ಸದಸ್ಯರಿಗೆ ಹಿಡಿ ಶಾಪ ಹಾಕುತ್ತಿದ್ಧಾರೆ. ಜನರಿಗೆ ಉಂಟಾಗುತ್ತಿರುವ ಸಮಸ್ಯೆ ಅಧಿಕಾರಿಗಳಿಗೆ ಅರ್ಥವಾಗುತ್ತಿಲ್ಲ. ಆದಷ್ಟು ಬೇಗ ಮೀಸಲಾತಿ ಗೊಂದಲ ಬಗೆಹರಿದು ಹೊಸ ಆಡಳಿತ ಮಂಡಳಿ ರಚನೆಯಾಗಬೇಕು’ ಎಂದು 17ನೇ ವಾರ್ಡ್‌ ಸದಸ್ಯೆ ಎಂ.ಬಿ.ಶಶಿಕಲಾ ಹೇಳಿದರು.

ಜಲಮಂಡಳಿ ಅಧಿಕಾರಿಗಳು ನಡೆಸಿರುವ ಒಳಚರಂಡಿ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲೂ ಸಾಧ್ಯವಾಗುತ್ತಿಲ್ಲ. ಜೊತೆಗೆ ಕೇಂದ್ರ ಪುರಸ್ಕೃತ ಅಮೃತ್‌ ಯೋಜನೆ ಕಾಮಗಾರಿಗಳು ಕುಂಟುತ್ತಾ ಸಾಗುತ್ತಿವೆ. ಅಧಿಕಾರಿಗಳು ಸದಸ್ಯರನ್ನು ದೂರವಿಟ್ಟು ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಸದಸ್ಯರು ಆರೋಪಿಸುತ್ತಾರೆ.

ಮೀಸಲಾತಿ ಗೊಂದಲ ಬಗೆಹರಿಯುವವರೆಗೂ ಸದಸ್ಯರು ಅಧಿಕಾರಿಗಳು ಅಸಹಾಯಕರಾಗಿಯೇ ಉಳಿಯಬೇಕಾಗಿದೆ. ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳಲ್ಲೂ ಇದೇ ಪರಿಸ್ಥಿತಿ ಮನೆ ಮಾಡಿದೆ.

7 ವರ್ಷ: ಸದಸ್ಯರ ಅದೃಷ್ಟವೇ?

ನಗರಸಭೆ ಅಧ್ಯಕ್ಷರು ಅಧಿಕಾರ ವಹಿಸಿಕೊಂಡು ಮೊದಲ ಸಾಮಾನ್ಯ ಸಭೆ ನಡೆಸಿದ ದಿನದಿಂದ ಸದಸ್ಯರ ಅಧಿಕಾರವಧಿ ಐದು ವರ್ಷಕ್ಕೆ ನಿಗದಿಯಾಗಿರುತ್ತದೆ. ಆದರೆ ಅಧ್ಯಕ್ಷರ ಮೀಸಲಾತಿಯೇ ಗೊಂದಲದಲ್ಲಿ ಇರುವ ಕಾರಣ ಅಧ್ಯಕ್ಷರ ಚುನಾವಣೆಯೇ ನಡೆದಿಲ್ಲ. ಹೀಗಾಗಿ ನಗರಸಭಾ ಚುನಾವಣೆಯಲ್ಲಿ ಗೆದ್ದವರು ಕಳೆದ ಎರಡು ವರ್ಷಗಳಿಂದ ಪುಕ್ಕಟೆಯಾಗಿ, ನೆಪಕ್ಕಷ್ಟೇ ಸದಸ್ಯರಾಗಿದ್ದಾರೆ. ಮೀಸಲಾತಿ ಗೊಂದಲು ಮುಗಿದು ಹೊಸ ಆಡಳಿತ ಮಂಡಳಿ ರಚನೆಯಾದರೆ ಅಲ್ಲಿಂದ ಅವರ ಅಧಿಕಾರವಧಿ 5 ವರ್ಷಗಳಿಗೆ ನಿಗದಿಯಾಗುತ್ತದೆ. ಕಳೆದು ಹೋದ 2 ವರ್ಷ ಸೇರಿಸಿದರೆ ಸದಸ್ಯರು 7 ವರ್ಷ ಅಧಿಕಾರ ಅನುಭವಿಸಿದಂತಾಗುತ್ತದೆ.

‘ಜನರ ಕೆಲಸ ಮಾಡಬೇಕು ಎಂಬ ಉತ್ಸಾಹದಲ್ಲಿದ್ದ ಸದಸ್ಯರಿಗೆ ಕಳೆದೆರಡು ವರ್ಷಗಳಿಂದ ಬಹಳ ಬೇಸರವಾಗಿದೆ. ಹೆಸರಿಗಷ್ಟೇ ಸದಸ್ಯ ಸ್ಥಾನ ಬೇಕು ಎನ್ನುವವರಿಗೆ ಎರಡು ವರ್ಷ ಹೆಚ್ಚುವರಿಯಾಗಿ ಸಿಕ್ಕಿದೆ’ ಎಂದು 3 ವಾರ್ಡ್‌ ಸದಸ್ಯ ಝಾಕಿರ್‌ ಪಾಷಾ ಹೇಳಿದರು.

ಮಾರ್ಚ್‌ ತಿಂಗಳಲ್ಲಿ ಮೀಸಲಾತಿ ಗೊಂದಲ ಬಗೆಹರಿಯುವ ನಿರೀಕ್ಷೆ ಇತ್ತು. ಆದರೆ ಕೋವಿಡ್‌ ಸಮಸ್ಯೆಯಿಂದಾಗಿ ಹೈಕೋರ್ಟ್‌ ಪ್ರಕರಣದ ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ.
–ಡಾ.ಎಂ.ವಿ.ವೆಂಕಟೇಶ್‌, ಜಿಲ್ಲಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.