ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಉದ್ಯಮ ರೂಪ ಪಡೆಯದ ಆಲೆಮನೆಗಳು

ಆಲೆಮನೆ ಕೈಗಾರಿಕಾ ಸ್ವರೂಪದಿಂದ ಹೊರಕ್ಕೆ, ಸಿಗದ ಸಬ್ಸಿಡಿ, ನಷ್ಟದ ಕೂಪವಾದ ವಹಿವಾಟು
Last Updated 22 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಮಂಡ್ಯ: ಆಲೆಮನೆಗಳಲ್ಲಿ ನಡೆಯುವ ಬೆಲ್ಲ ತಯಾರಿಕಾ ಪ್ರಕ್ರಿಯೆ ವಾಸ್ತವವಾಗಿ ಕೈಗಾರಿಕೆಯ ಸ್ವರೂಪದಲ್ಲೇ ಇರುತ್ತದೆ. ಆದರೆ ಸರ್ಕಾರ ಆಲೆಮನೆಗಳಿಗೆ ಉದ್ಯಮ ರೂಪ ನೀಡದ ಪರಿಣಾಮ ಜಿಲ್ಲೆಯಲ್ಲಿ ಆಲೆಮನೆ ವಹಿವಾಟು ಅವನತಿಯ ಅಂಚು ತಲುಪಿದೆ.

ಆಲೆಮನೆಗೆ ದೊಡ್ಡ ಆವರಣ, ಯಂತ್ರೋಪಕರಣ, ಕಾರ್ಮಿಕರು, ನೀರು, ವಿದ್ಯುತ್‌ ಬೇಕು. ಒಂದು ಕೈಗಾರಿಕೆ ನಡೆಸಲು ಬೇಕಾದ ಸಕಲ ಸೌಲಭ್ಯಗಳ ಅಗತ್ಯವಿದೆ. ಇಷ್ಟಾದರೂ ಆಲೆಮನೆಗಳನ್ನು ಉದ್ಯಮ ಎಂದು ಪರಿಗಣಿಸದ ಕಾರಣದ ಮಾಲೀಕರು ನಷ್ಟ ಅನುಭವಿಸಿದರು. ಕನಿಷ್ಠ ಪಕ್ಷ ಗುಡಿ ಕೈಗಾರಿಕೆ ಎಂಬ ಮನ್ನಣೆ ಸಿಕ್ಕಿದ್ದರೂ ಮಾಲೀಕರಿಗೆ ಸಬ್ಸಿಡಿ ಸೇರಿ ಇನ್ನಿತರ ಸೌಲಭ್ಯಗಳು ಸಿಗುತ್ತಿದ್ದವು. ಸರ್ಕಾರದಿಂದ ಯಾವುದೇ ಸಹಾಯಾಸ್ತ ಸಿಗದೆ ಆಲೆಮನೆಗಳು ಪಾಳು ಕಟ್ಟಡದ ರೂಪ ಪಡೆದವು.

ಜಿಲ್ಲೆಯಲ್ಲಿ ನಾಲ್ಕೈದು ಸಕ್ಕರೆ ಕಾರ್ಖಾನೆಗಳು ನಡೆಯುತ್ತಿದ್ದರೂ ಆಲೆಮನೆ ವಹಿವಾಟಿಗೆ ಯಾವುದೇ ತೊಂದರೆ ಇರುತ್ತಿರಲಿಲ್ಲ. ಸ್ಥಳೀಯ ಮಾಲೀಕರು ಯಾವುದೇ ರಾಸಾಯನಿಕ ಬಳಸದೇ ಶುದ್ಧ ಬೆಲ್ಲ ತಯಾರಿಸುತ್ತಿದ್ದರು. ‘ಮಂಡ್ಯ ಬೆಲ್ಲ’ಕ್ಕೆ ರಾಜ್ಯ, ಹೊರರಾಜ್ಯದಲ್ಲಿ ಅಪಾರ ಬೇಡಿಕೆ ಇತ್ತು, ಗುಣಮುಟ್ಟದ ಮೂಲಕವೇ ಬ್ರ್ಯಾಂಡ್‌ ರೂಪ ಪಡೆದಿತ್ತು.

ಯಂತ್ರೋಪಕರಣ ಬೆಲೆ ಗಗನಕ್ಕೇರಿದ ಸಂದರ್ಭದಲ್ಲ ಯಾವುದೇ ಸಬ್ಸಿಡಿ ಸೌಲಭ್ಯವಿಲ್ಲದೇ ಆಲೆಮನೆ ನಡೆಸುವುದು ಕ್ರಮೇಣ ಹೊರೆಯಾಯಿತು. ಇದರ ಪರಿಣಾಮವಾಗಿ 90ರ ದಶಕದಲ್ಲಿ 6 ಸಾವಿರಕ್ಕೂ ಹೆಚ್ಚಿದ್ದ ಆಲೆಮೆಗಳು ಒಂದು ಸಾವಿಕ್ಕಿಳಿದವು. ಸ್ಥಳೀಯ ರೈತರು ಆಲೆಮನೆ ನಡೆಸಲು ನಿರಾಸಕ್ತಿ ಹೊಂದಿದ ಕಾರಣ ಅಳಿದುಳಿದ ಆಲೆಮನೆಗಳಿಗೆ ಹೊರರಾಜ್ಯಗಳ ಗುತ್ತಿಗೆದಾರರು ಪ್ರವೇಶಿಸಿದರು. ಅವರಿಗೆ ಲಾಭವೇ ಪ್ರಧಾನವಾದ ಕಾರಣ ಮಂಡ್ಯ ಬೆಲ್ಲದ ಹೆಸರು ಹಾಳುಮಾಡಿದರು ಎಂದು ರೈತರು ಆರೋಪಿಸುತ್ತಾರೆ.

ಕೈಗಾರಿಕಾ ನೀತಿಯಿಂದ ಹೊರಕ್ಕೆ: 2006ಕ್ಕೂ ಮೊದಲು ಕೈಗಾರಿಕಾ ನೀತಿಯಲ್ಲಿ ಆಲೆಮನೆಗಳೂ ಇದ್ದವು. ಹೀಗಾಗಿ ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಆಲೆಮನೆ ಮಾಲೀಕರಿಗೆ ಸಬ್ಸಿಡಿ ಸೌಲಭ್ಯ ದೊರೆಯುತ್ತಿತ್ತು. ಆದರೆ ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಆಲೆಮನೆಗಳನ್ನು ಕೈಗಾರಿಕಾ ನೀತಿಯಿಂದ ಕೈಬಿಡಲಾಯಿತು. ಹೀಗಾಗಿ ಮಾಲೀಕರಿಗೆ ಸಿಗುತ್ತಿದ್ದ ಸಬ್ಸಿಡಿ ಸೌಲಭ್ಯ ನಿಂತು ಹೋಯಿತು.

‘ಆಲೆಮನೆಗಳಿಂದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬಿನ ಕೊರತೆಯಾಗುತ್ತದೆ ಎಂಬ ಕಾರಣಕ್ಕೆ ಆಲೆಮನೆಗಳನ್ನು ಕೈಗಾರಿಕಾ ನೀತಿಯಿಂದ ಕೈಬಿಡಲಾಯಿತು. ನಂತರ ಆಲೆಮನೆ ಸ್ಥಾಪನೆಗೆ ಡಿ.ಸಿಯಿಂದ ಅನುಮತಿ ಪಡೆಯಬೇಕು ಎಂಬ ನಿಯಮ ಜಾರಿಗೆ ಬಂತು. ಆದರೆ ಡಿ.ಸಿ ಅನುಮತಿ ಕೊಡಲು ಹಿಂದೇಟು ಹಾಕುತ್ತಿದ್ದರು. ಹೀಗಾಗಿ ಜಿಲ್ಲೆಯಲ್ಲಿ ಆಲೆಮನೆ ವಹಿವಾಟು ನಷ್ಟದ ಹಾದಿ ಹಿಡಿಯಿತು’ ಎಂದು ಗಾಣದ ಮಾಲೀಕರ ಸಂಘದ ಅಧ್ಯಕ್ಷ ಸೋಮ ಶಂಕರೇಗೌಡ ತಿಳಿಸಿದರು.

ವಿದ್ಯುತ್‌ ಕಣ್ಣಾಮುಚ್ಚಾಲೆ: ಆಲೆಮನೆಗಳು ನಷ್ಟದ ಕೂಪವಾಗಲು ವಿದ್ಯುತ್‌ ಕಣ್ಣಾಮುಚ್ಚಾಲೆಯೂ ಒಂದು ಪ್ರಮುಖ ಕಾರಣ ಎಂದು ರೈತರು ಹೇಳುತ್ತಾರೆ. ಗೃಹಬಳಕೆ ಹಾಗೂ ಕೊಳವೆಬಾವಿಗಳಿಗೆ ಮೊದಲು ಪ್ರತ್ಯೇಕ ವಿದ್ಯುತ್‌ ಸರಬರಾಜು ಇರಲಿಲ್ಲ. ನಿತ್ಯ ಕೇವಲ 3 ಗಂಟೆ ವಿದ್ಯುತ್‌ ಸರಬರಾಜಾಗುತ್ತಿತ್ತು. ಇದರಿಂದ ವಿದ್ಯುಚ್ಛಾಲಿತ ಗಾಣ ನಡೆಸಲು ಸಾಧ್ಯವಾಗಲಿಲ್ಲ.

‘ವಿದ್ಯುತ್‌ ಕೊರತೆಯಿಂದಾಗಿ ನಾವು ಡೀಸೆಲ್‌ ಮೋಟಾರ್‌ ಮೊರೆ ಹೋದೆವು. ಆದರೆ ಖರ್ಚು ಹೆಚ್ಚಾದ ಕಾರಣ ನಿರ್ವಹಣೆ ಮಾಡಲು ಸಾಧ್ಯವಾಗಲಿಲ್ಲ, ನಷ್ಟ ಹೆಚ್ಚಾಯಿತು’ ಎಂದು ಗಾಣದ ಮಾಲೀಕ ನಾಗೇಶ್‌ ತಿಳಿಸಿದರು.

ಫ್ಲೋರ್‌ಮಿಲ್‌ ಲೈಸೆನ್ಸ್‌ನಲ್ಲಿ ವಿದ್ಯುತ್‌ ಸಂಪರ್ಕ

ಮೊದಲು ಆಲೆಮನೆಗಳಿಗೆ ವಿದ್ಯುತ್‌ ಸಂಪರ್ಕ ಪಡೆಯುವುದೇ ಒಂದು ಸಾಹಸವಾಗಿತ್ತು. ಅದಕ್ಕಾಗಿ ಆಲೆಮನೆ ಮಾಲೀಕರು ಹಿಟ್ಟಿನ ಗಿರಣಿ (ಫ್ಲೋರ್‌ಮಿಲ್‌) ಯಂತ್ರಗಳನ್ನು ಆಲೆಮನೆಗೆ ತಂದಿಟ್ಟು ಗಿರಣಿ ಲೈಸೆನ್ಸ್‌ನಲ್ಲಿ ವಿದ್ಯುತ್‌ ಸಂಪರ್ಕ ಪಡೆಯುತ್ತಿದ್ದರು.

‘ಅಧಿಕಾರಿಗಳಿಗೆ ತೋರಿಸಲು ಹಳೆಯ ಗಿರಣಿ ಯಂತ್ರಗಳನ್ನು ತಂದಿಟ್ಟುಕೊಳ್ಳುತ್ತಿದ್ದೆವು. ಒಂದು ಯಂತ್ರ ಹಲವು ಆಲೆಮನೆ ಸುತ್ತುತ್ತಿತ್ತು. ಈಗ ಗ್ರಾ.ಪಂ ಆಲೆಮನೆಗಳಿಗೆ ಅನುಮತಿ ನೀಡುತ್ತಿದ್ದು ಅದರ ಆಧಾರದ ಮೇಲೆ ವಿದ್ಯುತ್ ಸಂಪರ್ಕ ಪಡೆಯಲಾಗುತ್ತಿದೆ’ ಎಂದು ಆಲೆಮನೆ ಮಾಲೀಕರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT