ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಸ್ವಾಮಿ ಎದುರು ಕಾರ್ಯಕರ್ತರ ವಾಗ್ವಾದ

Last Updated 27 ಮಾರ್ಚ್ 2018, 10:18 IST
ಅಕ್ಷರ ಗಾತ್ರ

ಮಂಡ್ಯ: ನಗರದ ಮಹಾವೀರ ವೃತ್ತದಲ್ಲಿ ಸೋಮವಾರ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ಎದುರೇ ಮುಖಂಡರಾದ ಎಂ. ಶ್ರೀನಿವಾಸ್‌ ಹಾಗೂ ಅಶೋಕ್‌ ಜಯರಾಂ ಬೆಂಬಲಿಗರು ವಾಗ್ವಾದ ನಡೆಸಿದರು.

ಮಳವಳ್ಳಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ‘ವಿಕಾಸಪರ್ವ’ ಸಮಾವೇಶದಲ್ಲಿ ಪಾಲ್ಗೊಳ್ಳಲು ಕುಮಾರಸ್ವಾಮಿ ಹೊರಟಿದ್ದರು. ಮಹಾವೀರ ವೃತ್ತದಲ್ಲಿ ಎಂ.ಶ್ರೀನಿವಾಸ್‌ ಹಾಗೂ ಅಶೋಕ್‌ ಜಯರಾಂ ಬೆಂಬಲಿಗರು ಕುಮಾರಸ್ವಾಮಿ ಅವರನ್ನು ಭೇಟಿಯಾಗಲು ಪೈಪೋಟಿ ನಡೆಸಿದರು.

ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ನಮ್ಮ ನಾಯಕರಿಗೆ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸಿ  ಉಭಯ ಮುಖಂಡರ ಬೆಂಬಲಿಗರು ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದರು. ನಾಯಕರ ಪರ ಘೋಷಣೆ ಕೂಗಿದರು.

ಬೆಂಬಲಿಗರ ನಡುವೆ ತಳ್ಳಾಟ ಉಂಟಾಗಿ ಗೊಂದಲದ ವಾತಾವರಣ ಉಂಟಾಯಿತು. ಇಬ್ಬರೂ ನಾಯಕರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು.

ಪರಿಸ್ಥಿತಿ ಕಂಡು ಮುಜುಗರ ಅನುಭವಿಸಿದ ಎಚ್‌.ಡಿ.ಕುಮಾರಸ್ವಾಮಿ ಕಾರಿನಿಂದ ಕೆಳಗೆ ಇಳಿಯದೆ ಮುಂದೆ ತೆರಳಿದರು. ಅವರು ಹೋದ ನಂತರವೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇತ್ತು.

ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ‘ಘಟನೆ ನಡೆದಾಗ ನಾನೂ ಕುಮಾರಸ್ವಾಮಿ ಅವರ ಜೊತೆಯಲ್ಲೇ ಕಾರ್‌ನಲ್ಲಿ ಇದ್ದೆ. ಬೆಂಬಲಿಗರು ಟಿಕೆಟ್‌ ನೀಡುವಂತೆ ಮನವಿ ಮಾಡಿದರು. ಈ ಬಗ್ಗೆ ಪರಿಶೀಲಿಸುವುದಾಗಿ ಕುಮಾರಸ್ವಾಮಿ ಅವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಯಾವುದೇ ಗಲಾಟೆ ಆಗಲಿಲ್ಲ. ಹೆಚ್ಚು ಕಾರ್ಯಕರ್ತರು ಇದ್ದ ಕಾರಣ ತಳ್ಳಾಟ ಉಂಟಾಯಿತು ಅಷ್ಟೇ’ ಎಂದು ಎಂ.ಶ್ರೀನಿವಾಸ್‌ ಹೇಳಿದರು.

‘ಕುಮಾರಸ್ವಾಮಿ ಅವರಿಗೆ ಸ್ವಾಗತ ಕೋರಲು ನಾನೂ ತೆರಳಿದ್ದೆ. ಅವರು ಬಂದಾಗ ಕಾರ್ಯಕರ್ತರು ವೈಯಕ್ತಿಕವಾಗಿ ನನಗೆ ಮತ್ತು ಎಂ.ಶ್ರೀನಿವಾಸ್‌ ಅವರಿಗೆ ಜೈಕಾರ ಹಾಕಿದರು. ಆಗ ಸ್ವಲ್ಪ ಗೊಂದಲ ಉಂಟಾಯಿತು. ವೈಯಕ್ತಿಕವಾಗಿ ಜೈಕಾರ ಬೇಡ, ಪಕ್ಷಕ್ಕೆ ಹಾಕಿ ಎಂದು ತಿಳಿಹೇಳಿದೆ. ನಂತರ ಎಲ್ಲರೂ ಸಮಾಧಾನಗೊಂಡರು’ ಎಂದು ಅಶೋಕ್‌ ಜಯರಾಂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT