ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಪಾತೋತ್ಸವ; ವೇದಿಕೆ ಕಾರ್ಯಕ್ರಮಕ್ಕೆ ಸೀಮಿತ

ಪ್ರಕೃತಿ ದತ್ತವಾಗಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲ: ಭಾನುವಾರ ಪ್ರವಾಸಿಗರ ಸಂಖ್ಯೆ ಹೆಚ್ಚಳ
Last Updated 19 ಜನವರಿ 2020, 19:30 IST
ಅಕ್ಷರ ಗಾತ್ರ

ಮಳವಳ್ಳಿ: ತಾಲ್ಲೂಕಿನ ಶಿವನಸಮುದ್ರದಲ್ಲಿ ನಡೆಯುತ್ತಿರುವ ಗಗನಚುಕ್ಕಿ ಜಲಪಾತೋತ್ಸವವು ಬರೀ ವೇದಿಕೆ ಕಾರ್ಯಕ್ರಮಕ್ಕೆ ಸೀಮಿತವಾಗಿದ್ದು, ಪ್ರಕೃತಿ ದತ್ತವಾಗಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಯಿತು.

ರೈತರ, ಪ್ರಗತಿಪರ ಚಿಂತಕರ ವಿರೋಧಗಳ ನಡುವೆ ಆರಂಭವಾದ ಜಲಪಾತೋತ್ಸವವು ಪ್ರವಾಸಿಗರಿಗೆ ಹೆಚ್ಚು ನೀರಿಲ್ಲದೆ ಬರಿ ಬಂಡೆಗಳ ದರ್ಶನ ಮಾಡಿಸಿತು. ವಾಸ್ತವದಲ್ಲಿ ಧುಮ್ಮಿಕ್ಕುವ ನೀರಿನ ಭೋರ್ಗರೆತವನ್ನು ಎಲ್‌ಇಡಿ ಪರದೆಯ ಮೇಲೆ ನೋಡಬೇಕಾಯಿತು.

ಎರಡನೇ ಬೆಳೆಗೆ, ಸಂಕ್ರಾಂತಿ ಹಬ್ಬಕ್ಕೆ ಸರಿಯಾಗಿ ನಾಲೆಗಳಿಗೆ ನೀರು ಹರಿಸದೆ ಲಕ್ಷಾಂತರ ರೂಪಾಯಿ ವ್ಯಯಿಸಿ ಧುಮ್ಮಿಕ್ಕುವ ನೀರಿಲ್ಲದೆ ಜಲಪಾತೋತ್ಸವ ಆಚರಣೆ ಮಾಡುವ ಔಚಿತ್ಯವಾದರೂ ಏನಿತ್ತು ಎಂಬ ಟೀಕೆಗಳು ವ್ಯಕ್ತವಾಗಿದ್ದು, ಮನೋರಂಜನೆ ಕಾರ್ಯಕ್ರಮಗಳು, ದುಂದು ವೆಚ್ಚಗಳು ಜಿಲ್ಲೆಯ ರೈತರ ಸಮಸ್ಯೆಗಳ ಅಣಕದಂತೆ ಪ್ರತಿಬಿಂಬಿತವಾಗಿದೆ.

ಶನಿವಾರಕ್ಕೆ ಹೋಲಿಸಿದರೆ ರಜಾ ದಿನವಾದ ಭಾನುವಾರ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು. ಭೋರ್ಗರೆಯುವ ಜಲಪಾತದ ಸೊಬಗನ್ನು ಕಣ್ತುಂಬಿಕೊಳ್ಳುವ ಕಾತುರದಿಂದ ದೂರದ ಊರಿಂದ ಬಂದ ಪ್ರವಾಸಿಗರಿಗೆ ಜಲಪಾತೋತ್ಸವ ನಿರಾಶೆ ಮೂಡಿಸಿತು. ಜಲಪಾತದಲ್ಲಿ ಭೋರ್ಗರೆಯುವ ನೀರಿಲ್ಲದ ಕೊರಗನ್ನು ನೀಗಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತಾದರೂ ಅದು ಆ ಕ್ಷಣಕ್ಕೆ ನೀಡಿದ ಮನೊರಂಜನೆಯಾಗಿತ್ತು. ಸ್ಮೃತಿ ಪಟಲದಲ್ಲಿ ಉಳಿಯುವ ಶಾಶ್ವತ ನೈಸರ್ಗಿಕ ಚಿತ್ರವಾಗಿರಲಿಲ್ಲ.

ಗಗನಚುಕ್ಕಿ ಜಲಪಾತ್ಸೋತ್ಸವ ಎರಡನೇ ದಿನದ ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತ, ಜಾನಪದ ಗೀತೆಗಳು, ಹಳೆಯ ಚಿತ್ರ ಗೀತೆಗಳು, ಸುಗಮ ಸಂಗೀತ, ಪೂಜಾ ಕುಣಿತ, ಕಂಸಾಳೆ ನೃತ್ಯ, ಸೇರಿದಂತೆ ಹಲವಾರು ಕಾರ್ಯಕ್ರಮಗಳು ಪ್ರದರ್ಶನವಾದವು.

ಹೆಲಿಕಾಪ್ಟರ್‌ನಲ್ಲಿ ಗಗನಚುಕ್ಕಿ, ಭರಚುಕ್ಕಿ, ಕಾವೇರಿ ನದಿ, ಪ್ರಕೃತಿ ಸೊಬ ಗನ್ನು ಸವಿದು ಖುಷಿಪಟ್ಟರು. ಸಾಮಾನ್ಯ ಜನರಿಗೆ ಇದು ಗಗನ ಕುಸುಮವಾಗಿತ್ತು. ಆದ್ದರಿಂದ ವೇದಿಕೆ ಕಾರ್ಯಕ್ರಮಗಳನ್ನೇ ನೋಡಿ ಸಂತಸಪಟ್ಟರು.

ಸಾಂಸ್ಕೃತಿಕ ಕಾರ್ಯಕ್ರಮಗಳು ಮಧ್ಯಾಹ್ನದಿಂದಲೇ ಆರಂಭವಾಯಿತು. ಆಗ ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಪ್ರೇಕ್ಷಕರು ಪಕ್ಕದಲ್ಲಿದ್ದ ಮರದ ನೆರಳಿ ನಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಿದರು.

ಸ್ವಲ್ಪ ಕಳೆಗಟ್ಟಿದ್ದ ಜಲಪಾತ

ಜಲಪಾತೋತ್ಸವ ಮೊದಲ ದಿನವಾದ ಶನಿವಾರ ನೀರಿಲ್ಲದೇ ಸೊರಗಿದ್ದ ಜಲಪಾತವನ್ನು ನೋಡಿ ಜನರು ನಿರಾಶೆಗೊಂಡಿದ್ದರು. ಆದರೆ ಭಾನುವಾರ ಮಧ್ಯಾಹ್ನದ ನಂತರ ಜಲಪಾತದಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ಹೆಚ್ಚಾದ ಪರಿಣಾಮ ಜಲಪಾತಕ್ಕೆ ಸೊಬಗು ತಂದಿತ್ತಾದರೂ ಭೋರ್ಗರೆಯುತ್ತಿದ್ದ ಗತವೈಭವ ಕಾಣಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT