ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ನಿಷ್ಠಾವಂತ ಕಾರ್ಯಕರ್ತರ ಪಕ್ಷ: ಎಚ್‌.ಡಿ ರೇವಣ್ಣ

ಬಾಂಬೆ ಗಿರಾಕಿ ಸ್ವಾರ್ಥಕ್ಕಾಗಿ ಪಕ್ಷ ಬಿಟ್ಟು ಹೋಗಿದ್ದಾನೆ: ಎಚ್‌.ಡಿ.ರೇವಣ್ಣ ಆಕ್ರೋಶ
Last Updated 23 ನವೆಂಬರ್ 2019, 10:55 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರ ಪಕ್ಷವಾಗಿದ್ದು, ಪ್ರಾಮಾಣಿಕತೆ ಮತ್ತು ದಕ್ಷತೆಯ ಗುಣವನ್ನು ಹೊಂದಿದೆ. ಪಕ್ಷದ ಅಭ್ಯರ್ಥಿಯನ್ನು ಕಾರ್ಯಕರ್ತರೇ ಗೆಲ್ಲಿಸಿಕೊಳ್ಳಲಿದ್ದಾರೆ ಎಂದು ಶಾಸಕ ಎಚ್‌.ಡಿ.ರೇವಣ್ಣ ಹೇಳಿದರು.

ತಾಲ್ಲೂಕಿನ ಮಾಂಬಹಳ್ಳಿ, ಕಟ್ಟೆಕ್ಯಾತನಹಳ್ಳಿ, ಸೋಮನಹಳ್ಳಿ, ಆಲಂಬಾಡಿಕಾವಲು, ಹೊಸಹೊಳಲು ಹಾಗೂ ಪಟ್ಟಣದ ಬಡಾವಣೆಗಳಲ್ಲಿ ಪಕ್ಷದ ಅಭ್ಯರ್ಥಿ ಬಿ.ಎಲ್.ದೇವರಾಜು ಪರ ಪ್ರಚಾರ ನಡೆಸಿದ ಅವರು ಮಾತನಾಡಿದರು.

ದೇವರಾಜು ಅವರು ಮೈಸೂರು ಲ್ಯಾಂಪ್ಸ್ ಸಂಸ್ಥೆ, ಮಂಡ್ಯ ಡಿಸಿಸಿ ಬ್ಯಾಂಕ್, ಟಿಎಪಿಸಿಎಂಎಸ್ ಸಂಸ್ಥೆಯ ಅಧ್ಯಕ್ಷರಾಗಿ, ಅಕ್ಕಿಹೆಬ್ಬಾಳು ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ದೇವರಾಜು ಅವರು ಶಾಸಕರಾಗಬೇಕು ಎನ್ನುವುದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಆಶಯವಾಗಿದೆ. ಕಳೆದ ಚುನಾವಣೆಯಲ್ಲಿ ಹಲವು ಕಾರಣಗಳಿಂದ ಟಿಕೆಟ್ ನೀಡಲಾಗಲಿಲ್ಲ. ಟಿಕೆಟ್‌ ಕೊಟ್ಟಿದ್ದರೆ ಈ ಉಪಚುನಾವಣೆಯೇ ನಡೆಯುತ್ತಿರಲಿಲ್ಲ. ಬಾಂಬೆ ಗಿರಾಕಿಯು ಪಕ್ಷ ಮತ್ತು ಕಾರ್ಯಕರ್ತರನ್ನು ತನ್ನ ಸ್ವಾರ್ಥಕ್ಕಾಗಿ ಬಿಟ್ಟು ಹೋಗಿದ್ದಾನೆ. ಆತನನ್ನು ಸೋಲಿಸುವ ಮೂಲಕ ಬುದ್ಧಿ ಕಲಿಸುವ ಕೆಲಸವನ್ನು ತಾಲ್ಲೂಕಿನ ಸಮಸ್ತ ಮತದಾರರ ಮಾಡಬೇಕಿದೆ ಎಂದರು.

ಬಿಜೆಪಿಗೆ ಬೆಂಬಲ ನೀಡುವುದಾಗಿ ಕುಮಾರಸ್ವಾಮಿಯಾಗಲಿ, ದೇವೇಗೌಡರಾಗಲಿ ಎಲ್ಲಿಯೂ ಹೇಳಿಲ್ಲ. ಇದು ಊಹಾಪೋಹ. ಈ ಪರಿಸ್ಥಿತಿಯಲ್ಲಿ ಯಾರಿಗೂ ಮಧ್ಯಂತರ ಚುನಾವಣೆ ಬೇಕಿಲ್ಲ. ಆದ್ದರಿಂದ ಸಂಕಷ್ಟ ಬಂದಾಗ ಪರಿಶೀಲಿಸೋಣ ಎಂದಿದ್ದಾರಷ್ಟೆ. ಜೆಡಿಎಸ್ ಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸದಾ ಅಂತರ ಕಾಪಾಡಿಕೊಂಡಿದೆ ಎಂದರು.

ಅಭ್ಯರ್ಥಿ ಬಿ.ಎಲ್.ದೇವರಾಜು, ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ, ಜೆಡಿಎಸ್ ಮುಖಂಡರಾದ ಎ.ಆರ್.ರಘು, ಎಚ್.ಟಿ.ಮಂಜು, ಎಂ.ಬಿ.ಹರೀಶ್, ಪೂವನಹಳ್ಳಿ ರೇವಣ್ಣ, ಅಕ್ಕಿಹೆಬ್ಬಾಳು ಶ್ರೀನಿವಾಸ್, ಮಾಂಬಹಳ್ಳಿ ಅಶೋಕ್, ಶಶಿಧರ್ ಸಂಗಾಪುರ, ಕಂಠಿ ಕುಮಾರ್, ಬಸ್ ಕೃಷ್ಣೇಗೌಡ, ರಂಗರಾಜು, ನಾಟನಹಳ್ಳಿ ಪವನ್ ಕುಮಾರ್, ಕೆ.ಸಚಿನ್ ಕೃಷ್ಣ ಇದ್ದರು.

‘ವಿವಿಧ ಇಲಾಖೆಗಳಿಗೆ ₹700 ಕೋಟಿ’

ದೇಶದಲ್ಲಿಯೇ ಸುಮಾರು ₹46 ಸಾವಿರ ಕೋಟಿ ಮೊತ್ತದ ರೈತರ ಸಾಲವನ್ನು ಕುಮಾರಸ್ವಾಮಿ ನೇತೃತ್ವದ ಸರ್ಕಾರ ಮನ್ನಾ ಮಾಡಿತ್ತು. ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಸುಮಾರು ₹700 ಕೋಟಿ ಅನುದಾನವನ್ನು ವಿವಿಧ ಇಲಾಖೆಗಳಿಗೆ ನೀಡಿತ್ತು. ಸಾಲಮನ್ನಾ ಯೋಜನೆಯಲ್ಲಿ ತಾಲ್ಲೂಕಿನಲ್ಲಿ 22 ಸಾವಿರ ರೈತರ ₹105 ಕೋಟಿ ಸಾಲಮನ್ನಾ ಆಗಿದೆ. ಇನ್ನಷ್ಟು ದಿನ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಮುಂದುವರೆದಿದ್ದರೆ ಮಂಡ್ಯ ಜಿಲ್ಲೆಯಲ್ಲಿ ಹೊಸ ಸಕ್ಕರೆ ಕಾರ್ಖಾನೆಯನ್ನು ನಿರ್ಮಿಸುತ್ತಿದ್ದರು. ಇದಕ್ಕೆ ನಾರಾಯಣಗೌಡನಂತಹ ಅನರ್ಹ ಶಾಸಕರು ಅವಕಾಶ ನೀಡಲಿಲ್ಲ ಎಂದು ಎಚ್‌.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT