ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ಜಿಲ್ಲೆ ರಾಜಕಾರಣಕ್ಕೆ ಶೀಘ್ರವೇ ಬರುವೆ: ಎಚ್‌.ಡಿ ದೇವೇಗೌಡ

ಪಾಂಡವಪುರ ತಾಲ್ಲೂಕಿನ ಚಿನಕುರಳಿಯಲ್ಲಿ ಕಾಲೇಜು ಕಟ್ಟಡ ಉದ್ಘಾಟಿಸಿದ ಎಚ್‌.ಡಿ.ದೇವೇಗೌಡ
Last Updated 4 ನವೆಂಬರ್ 2019, 11:41 IST
ಅಕ್ಷರ ಗಾತ್ರ

ಪಾಂಡವಪುರ: ‘ನಾನು ರಾಜಕಾರಣದಿಂದ ವಿಶ್ರಮಿಸುವುದಿಲ್ಲ, ಹೋರಾಟ ನಡೆಸುತ್ತೇನೆ. ಮಂಡ್ಯ ಜಿಲ್ಲೆಯ ರಾಜಕಾರಣಕ್ಕೆ ಶೀಘ್ರದಲ್ಲಿಯೇ ಧುಮುಕುತ್ತೇನೆ’ ಎಂದು ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

ತಾಲ್ಲೂಕಿನ ಚಿನಕುರಳಿ ಗ್ರಾಮದಲ್ಲಿ ಭಾನುವಾರ ಶಾಸಕ ಸಿ.ಎಸ್.ಪುಟ್ಟರಾಜು ಅವರ ಎಸ್‌ಟಿಜಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಾರಿಟಬಲ್‌ ಟ್ರಸ್ಟ್‌ನ ಎಸ್‌ಟಿಜಿ ಪಿಯು ಕಾಲೇಜು ಹಾಗೂ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡವನ್ನು ಉದ್ಫಾಟಿಸಿ ಅವರು ಮಾತನಾಡಿದರು.

‘ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಚುನಾವಣಾ ರಾಜಕಾರಣಕ್ಕೆ ಇಳಿಯಲಾಗುವುದು’ ಎಂದು ಹೇಳಿದರು.

‘ರಾಜ್ಯದಲ್ಲಿ ಜೆಡಿಎಸ್‌ ಪ್ರಾದೇಶಿಕ ಪಕ್ಷ ಕಟ್ಟಿ ಬೆಳೆಸುವುದರಲ್ಲಿ ಕಾರ್ಯಕರ್ತರ ಪಾತ್ರ ಬಹು ದೊಡ್ಡದು. 59 ವರ್ಷಗಳ ಈ ರಾಜಕಾರಣದಲ್ಲಿ ಎದೆಗುಂದದೇ ಹೋರಾಟ ನಡೆಸಲು ನನಗೆ ಕಾರ್ಯಕರ್ತರೇ ಒಂದು ದೊಡ್ಡ ಶಕ್ತಿಯಾಗಿದ್ದಾರೆ. ಪಕ್ಷದ ಸಂಘಟನೆಯ ದೃಷ್ಟಿಯಿಂದ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ’ ಎಂದರು.

ಶಿಕ್ಷಣ‌, ಆರೋಗ್ಯದಲ್ಲಿ ಖಾಸಗಿ ಪಾತ್ರ ದೊಡ್ಡದು: ‘ಸರ್ಕಾರ ಒಂದರಿಂದಲೇ ಜನರಿಗೆ ಅಗತ್ಯವಾಗಿ ಬೇಕಾಗಿರುವ ಶಿಕ್ಷಣ ಮತ್ತು ಆರೋಗ್ಯವನ್ನು ನೀಡಲು ಸಾಧ್ಯವಿಲ್ಲ. ದೇಶದಲ್ಲಿ ಬೃಹತ್‌ ಸಮಸ್ಯೆಯಾಗಿರುವ ಶಿಕ್ಷಣ ಮತ್ತು ಆರೋಗ್ಯವನ್ನು ಮಠಾಧೀಶರು ಸೇರಿದಂತೆ ಖಾಸಗಿ ಒಡೆತನದ ಸಂಸ್ಥೆಗಳು ಬಗೆಹರಿಸಿವೆ. ಖಾಸಗಿಯವರಿಂದಲೇ ಮೂರನೇ ಒಂದು ಭಾಗದಷ್ಟು ಶಿಕ್ಷಣ ಜನರಿಗೆ ದೊರೆಯುತ್ತಿದೆ’ ಎಂದು ಹೇಳಿದರು.

‘ನಗರ ಪ್ರದೇಶಗಳಲ್ಲಿ ದೊರೆಯುವ ಶಿಕ್ಷಣ ಸೌಲಭ್ಯ ಗ್ರಾಮಾಂತರ ಮಕ್ಕಳಿಗೂ ದೊರೆಯಬೇಕೆಂಬುದು ಶಾಸಕ ಪುಟ್ಟರಾಜು ಅವರ ಕನಸಾಗಿದೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಸಿ.ಎಸ್.ಪುಟ್ಟರಾಜು, ‘ಗ್ರಾಮೀಣ ಮಕ್ಕಳಿಗೆ ವಿದ್ಯಾದಾನ ಮಾಡುವುದು ನಮ್ಮ ಏಕೈಕ ಉದ್ದೇಶವಾಗಿದೆ. ನಗರ ಪ್ರದೇಶಗಳಲ್ಲಿ ದೊರೆಯುವ ಎಲ್ಲ ಶಿಕ್ಷಣ ಸೌಲಭ್ಯಗಳನ್ನು ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ನೀಡಲಾಗುವುದು’ ಎಂದು ಹೇಳಿದರು.

ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ವಿಧಾನಸಭಾ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ, ಉದ್ಯಮಿ ಚಿಕ್ಕಸ್ವಾಮಿ, ಮನ್‌ಮುಲ್‌ ಅಧ್ಯಕ್ಷ ರಾಮಚಂದ್ರ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಅಶೋಕ, ಶೀಳನೆರೆ ಮಂಜುನಾಥ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಗಾಯಿತ್ರಿ, ಜೆಡಿಎಸ್ ಮುಖಂಡ ಪಾಲಹಳ್ಳಿ ಮುಕುಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT