ಶುಕ್ರವಾರ, ಸೆಪ್ಟೆಂಬರ್ 24, 2021
24 °C
ಸಚಿವರಾದ ನಂತರ ಮೊದಲ ಬಾರಿಗೆ ಜಿಲ್ಲೆಗೆ ಬಂದ ಕೆ.ಸಿ.ನಾರಾಯಣಗೌಡ, ಅಧಿಕಾರಿಗಳ ಸಭೆ

ವಾರದೊಳಗೆ ಆಮ್ಲಜನಕ ಉತ್ಪಾದನೆ: ಕೆ.ಸಿ.ನಾರಾಯಣಗೌಡ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಕೋವಿಡ್‌ 3ನೇ ಅಲೆ ಬಂದರೆ ರೋಗಿಗಳಿಗೆ ಆಮ್ಲಜನಕದ ಕೊರತೆ ಉಂಟಾಗಬಾರದು. ಜಿಲ್ಲೆಯ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಮಂಜೂರಾಗಿದ್ದು ವಾರದೊಳಗೆ ಆಮ್ಲಜನಕ ಉತ್ಪಾದನೆಯಾಗಬೇಕು’ ಎಂದು ಸಚಿವ ಕೆ.ಸಿ.ನಾರಾಯಣಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ನಂತರ ಶುಕ್ರವಾರ ನಗರಕ್ಕೆ ಭೇಟಿ ನೀಡಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

‘ಎಲ್ಲಾ ತಾಲ್ಲೂಕು ಆಸ್ಪತ್ರೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಹೊಂದಿದ ರಾಜ್ಯದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆ ಮಂಡ್ಯಕ್ಕೆ ದೊರೆಯಲಿದೆ. ಶೀಘ್ರ ಎಲ್ಲಾ ತಾಲ್ಲೂಕುಗಳಲ್ಲಿ ಆಮ್ಲಜನಕ ಉತ್ಪಾದನೆಯಾಗಲು ಕ್ರಮ ಕೈಗೊಳ್ಳಬೇಕು. ಸರ್ಕಾರದ ಅನುದಾನದ ಜೊತೆ ಖಾಸಗಿ ಸಂಸ್ಥೆಗಳ ಸಿಎಸ್‌ಆರ್ ನಿಧಿ ಬಳಕೆ ಮಾಡಿಕೊಂಡು ಘಟಕ ನಿರ್ಮಾಣ ಮಾಡಲಾಗುತ್ತಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳ್ಳಬೇಕು’ ಎಂದರು.

‘ಕಳೆದ ಬಾರಿ ಆಮ್ಲಜನಕಕ್ಕಾಗಿ ಹೊರ ಜಿಲ್ಲೆಗಳ ಮೇಲೆ ಅವಲಂಬಿತರಾಗಿದ್ದೆವು. ಇದರಿಂದ ಅಧಿಕಾರಿಗಳು ಸಾಕಷ್ಟು ಕಷ್ಟಪಡಬೇಕಾಯಿತು, ಮುಂದೆ ಇಂತಹ ಪರಿಸ್ಥಿತಿ ಬರಬಾರದು. ಈ ಬಾರಿ ಜಿಲ್ಲೆಯಲ್ಲಿ ಅಗತ್ಯಕ್ಕಿತ ಹೆಚ್ಚಿನ ಆಮ್ಲಜನಕ ಉತ್ಪಾದನೆ ಮಾಡಬೇಕು, ಹೆಚ್ಚಾದರೆ ಹೊರ ಜಿಲ್ಲೆಗಳಿಗೆ ಸರಬರಾಜು ಮಾಡುವ ಸಾಮರ್ಥ್ಯ ಹೊಂದಬೇಕು. ಘಟಕ ಸ್ಥಾಪನೆಗೆ ಅನುದಾನ ತರಲು ಸಾಕಷ್ಟು ಪರಿಶ್ರಮಪಟ್ಟಿದ್ದೇನೆ. ಈಗ ಕಾಮಗಾರಿಯಲ್ಲಿ ವಿಳಂಬ ಆಗಬಾರದು’ ಎಂದರು.

‘ಮಿಮ್ಸ್ ಆಸ್ಪತ್ರೆ ಸೇರಿದಂತೆ ಎಲ್ಲಾ ತಾಲ್ಲೂಕು ಆಸ್ಪತ್ರೆಗಳ ಘಟಕದಿಂದ ಒಟ್ಟು 3,980 ಎಲ್‍ಪಿಎಂ ವೈದ್ಯಕೀಯ ಆಮ್ಲಜನಕ ಉತ್ಪಾದನೆ ಆಗಲಿದೆ. ಅದಲ್ಲದೆ ಪ್ರಸ್ತುತ ಜಿಲ್ಲೆಯಲ್ಲಿ 644 ಜಂಜೊ ಸಿಲೆಂಡರ್ ದಾಸ್ತಾನಿದೆ. 25 ಬಿ ಟೈಪ್‌ ಸಿಲೆಂಡರ್ ಕೂಡ ಲಭ್ಯವಿದೆ. ಹೀಗಾಗಿ 3ನೇ ಬಂದಲ್ಲಿ ಅದನ್ನು ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ’ ಎಂದರು.

‘ಈ ಹಿಂದೆ ಕೋವಿಡ್ -19 ನಿರ್ವಹಣೆಗೆ ಅಸ್ಪತ್ರೆಗಳಲ್ಲಿ ಕೈಗೊಂಡಿರುವ ಎಲ್ಲ ವ್ಯವಸ್ಥೆಗಳು ಸುಸೂತ್ರವಾಗಿರುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಎಷ್ಟೇ ಸಿದ್ದತೆ ಇದ್ದರೂ ಅಧಿಕಾರಿಗಳು ಮೈಮರೆಯುವಂತಿಲ್ಲ. ಸಾಧ್ಯವಾದಷ್ಟು ಕೋವಿಡ್ -19ರ 3ನೇ ಅಲೆ ಬಗ್ಗೆ ಜಾಗೃತರಾಗಬೇಕು. ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಬೇಕು. ಜನರಿಗೆ ಜಾಗೃತಿ ಮುಡಿಸುವ ಮೂಲಕ ಅಲೆ ಎದುರಿಸಲು ಸಜ್ಜುಗೊಳಿಸಬೇಕು’ ಎಂದರು.

‘ಮದುವೆ ಸಮಾರಂಭ, ಧಾರ್ಮಿಕ ಸಮಾರಂಭಗಳಿಗೆ 30 ಜನ ಮೀರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರ್ಯಕ್ರಮ ನಡೆಸಲು ಪೂರ್ವನುಮತಿ ಪಡೆಯಬೇಕು. ಅನುಮತಿ ಪಡೆಯದಿದ್ದರೆ, ಕೋವಿಡ್‌ ನಿಯಮ ಪಾಲನೆ ಮಾಡದಿದ್ದರೆ ಕಟ್ಟುನಿಟ್ಟಿನ ಕ್ರಮ ಜಗುರಿಸಬೇಕು. ಹೊರ ಜಿಲ್ಲೆಗಳಲ್ಲಿ ಕೋವಿಡ್‌ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ ಪರೀಕ್ಷೆ ಸಂಖ್ಯೆಯನ್ನು ಹೆಚ್ಚಳ ಮಾಡಬೇಕು. ಸಂಪರ್ಕಿತರನ್ನು ಗುರುತಿಸಿ ಕ್ವಾರಂಟೈನ್‌ ಮಾಡಲು ಕ್ರಮ ಕೈಗೊಳ್ಳಬೇಕು. ಆರ್‌ಟಿಪಿಸಿಆರ್‌ಗೆ ಆದ್ಯತೆ ನೀಡಬೇಕು’ ಎಂದು ಸೂಚಿಸಿದರು.

‘ಗ್ರಾಮ ಮಟ್ಟದಲ್ಲಿರುವ ಟಾಸ್ಕ್‌ ಫೋರ್ಸ್‌ ಸಮಿತಿಗಳನ್ನು ಬಲಪಡಿಸಬೇಕು. ಹಳ್ಳಿಗಳಿಗೆ ಹೊರ ಜಿಲ್ಲೆ, ಹೊರರಾಜ್ಯಗಳಿಂದ ಬರುವ ಜನರ ಮೇಲೆ ನಿಗಾ ಇರಿಸುವಂತೆ ಸಮಿತಿ ಸದಸ್ಯರಿಗೆ ಸೂಚನೆ ನೀಡಬೇಕು. 3ನೇ ಅಲೆ ಮಕ್ಕಳಿಗೆ ಹೆಚ್ಚಾಗಿ ಕಾಣಿಸಿಕೊಳ್ಳುವ ಸೂಚನೆ ಇರುವ ಕಾರಣ ಐಸಿಯು ಬೆಡ್, ವೆಂಟಿಲೇಟರ್‌ ಸಿದ್ಧ ಮಾಡಿಕೊಳ್ಳಬೇಕು. ಅಂಗನವಾಡಿಗೆ ಬರುವ ಮಕ್ಕಳ ತಾಯಂದಿರಿಗೆ ಲಸಿಕೆ ಹಾಕಬೇಕು. ವೈದ್ಯರ ನಿಯೋಜನೆ, ಔಷಧ, ಲಸಿಕೆ, ಕೋವಿಡ್ ಕೇರ್ ಕೇಂದ್ರಗಳ ಸೌಲಭ್ಯದಲ್ಲಿ ಯಾವುದೇ ವ್ಯತ್ಯಯ ಉಂಟಾಗಬಾರದು’ ಎಂದರು.

ಸಭೆಯಲ್ಲಿ ಶಾಸಕರಾದ ಎಂ.ಶ್ರೀನಿವಾಸ್, ಸಿ.ಎಸ್‌.ಪುಟ್ಟರಾಜು, ಸುರೇಶ್‌ಗೌಡ, ವಿಧಾನಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಎನ್‌.ಅಪ್ಪಾಜಿಗೌಡ, ಜಿಲ್ಲಾಧಿಕಾರಿ ಎಸ್‌.ಅಶ್ವತಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ವಿ.ರಾಮ್‌ಪ್ರಸಾತ್‌ ಮನೋಹರ್‌, ಜಿ.ಪಂ ಸಿಇಒ ದಿವ್ಯಾ ಪ್ರಭು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅಶ್ವಿನಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಧನಂಜಯ ಇದ್ದರು.

ಬೆಂಬಲಿಗರ ಸ್ವಾಗತ; ಮೆರವಣಿಗೆ

ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ನಂತರ ಮೊದಲ ಬಾರಿಗೆ ಜಿಲ್ಲೆಗೆ ಬಂದ ಕೆ.ಸಿ.ನಾರಾಯಣಗೌಡ ಅವರನ್ನು ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ಅದ್ಧೂರಿ ಸ್ವಾಗತ ಕೋರಿದರು. ಫ್ಯಾಕ್ಟರಿ ಸರ್ಕಲ್‌ಗೆ ಬಂದೊಡನೆ ಸಚಿವರ ಅಭಿಮಾನಿಗಳು ಜೈಕಾರ ಹಾಕಿದರು. ಹೂವಿನ ಮಳೆಸುರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಫ್ಯಾಕ್ಟರಿ ಸರ್ಕಲ್‌ನಿಂದ ಮಹಾವೀರ ಸರ್ಕಲ್‌ವರೆಗೆ ಸಚಿವರನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ಅಲ್ಲಿ ನಗರಸಭಾ ಸದಸ್ಯರು ಮಾಲಾರ್ಪಣೆ ಮಾಡಿ ಸ್ವಾಗತ ಕೋರಿದರು. ಜೆಸಿ ವೃತ್ತದಲ್ಲೂ ಅವರ ಬೆಂಬಲಿಗರು, ಬಿಜೆಪಿ ಕಾರ್ಯಕರ್ತರು ಸ್ವಾಗತ ಕೋರಿದರು.

ಪಟ್ಟಿ

ಆಮ್ಲಜನಕ ಘಟಕಗಳ ಸಾಮರ್ಥ್ಯ (ಎಲ್‌ಪಿಎಂನಲ್ಲಿ)

ಆಸ್ಪತ್ರೆ ಸಾಮರ್ಥ್ಯ

ಮಿಮ್ಸ್‌ ಆಸ್ಪತ್ರೆ 1,000
ಮಿಮ್ಸ್‌ ಆಸ್ಪತ್ರೆ 390
ಕೆ.ಆರ್.ಪೇಟೆ 400
ಪಾಂಡವಪುರ 400
ಮಳವಳ್ಳಿ 390
ಮದ್ದೂರು 400
ಶ್ರೀರಂಗಪಟ್ಟಣ 500
ನಾಗಮಂಗಲ 500
ಒಟ್ಟು 3,980

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.