ಬುಧವಾರ, ನವೆಂಬರ್ 20, 2019
20 °C

ಮೈಸೂರು–ಬೆಂಗಳೂರು ಹೆದ್ದಾರಿ ಮೇಲೆ ಮುರಿದು ಬಿದ್ದ ದಸರಾ ಸ್ವಾಗತ ಕಮಾನು

Published:
Updated:
Prajavani

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ದಸರಾ ಉತ್ಸವದ ನಿಮಿತ್ತ ತಾಲ್ಲೂಕಿನ ಕಿರಂಗೂರು ವೃತ್ತದ ಬಳಿ, ಬೆಂಗಳೂರು– ಮೈಸೂರು ಹೆದ್ದಾರಿಗೆ ಅಡ್ಡಲಾಗಿ ಹಾಕಿದ್ದ ಸ್ವಾಗತ ಕಮಾನು ಮಂಗಳವಾರ ಸಂಜೆ ಬೀಸಿದ ಬಿರುಗಾಳಿಗೆ ಮುರಿದು ಬಿದ್ದಿದೆ.

ಕಿರಂಗೂರು ವೃತ್ತದ, ದಸರಾ ಬನ್ನಿ ಮಂಟಪದ ಬಳಿ ಚತುಷ್ಪಥ ರಸ್ತೆಯ ಉದ್ದಕ್ಕೂ, ಸುಮಾರು 80 ಅಡಿ ಉದ್ದ ಹಾಕಲಾಗಿದ್ದ ಕಮಾನು ಕುಸಿದಿದೆ. ಬೆಂಗಳೂರು ಕಡೆಯಿಂದ ಬರುತ್ತಿದ್ದ ಗೂಡ್ಸ್‌ ಟೆಂಪೊ ಮೇಲೆ ಕಮಾನು ಮುರಿದು ಬಿದ್ದಿದೆ. ವಾಹನದಲ್ಲಿ ಇದ್ದವರು ಅಪಾಯದಿಂದ ಪಾರಾಗಿದ್ದಾರೆ.

ಸ್ವಾಗತ ಕಮಾನು ಹೆದ್ದಾರಿಗೆ ಅಡ್ಡಲಾಗಿ ಬಿದ್ದಿದ್ದು, ಬೆಂಗಳೂರು– ಮೈಸೂರು ನಡುವೆ 30 ನಿಮಿಷಗಳಿಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತವಾಗಿತ್ತು. ಬಿರುಗಾಳಿಯ ಜತೆಗೆ ಜೋರು ಮಳೆ ಸುರಿದಿದ್ದರಿಂದ ಕಮಾನಿನ ವಸ್ತುಗಳನ್ನು ತೆರವು ಮಾಡಲು ಅಡ್ಡಿಯಾಯಿತು.

ಮಳೆ ನಿಂತ ಮೇಲೆ ಕಮಾನಿಗೆ ಅಳವಡಿಸಿದ್ದ ಸರಳು, ಬಟ್ಟೆ ಇತರ ವಸ್ತುಗಳನ್ನು ಪೊಲೀಸರು ಮತ್ತು ಸ್ಥಳೀಯರು ತೆರವು ಮಾಡಿದರು. ಈಚೆಗೆ ನಡೆದ ದಸರಾ ಉತ್ಸವಕ್ಕೆ ಕಮಾನು ಅಳವಡಿಸಲಾಗಿತ್ತು.

ಪ್ರತಿಕ್ರಿಯಿಸಿ (+)