ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಬದಹಳ್ಳಿ: ಚತುರ್ಮುಖ ಜಿನಬಿಂಬ ಬಸದಿಯ ಪಂಚಕಲ್ಯಾಣ ಪ್ರತಿಷ್ಠಾನ

ಭಾನುಕೀರ್ತಿ ಭಟ್ಟಾಚಾರ್ಯ ಸ್ವಾಮೀಜಿ ಪಟ್ಟಾಭಿಷೇಕದ ರಜತ ಮಹೋತ್ಸವ
Last Updated 24 ಮೇ 2022, 16:20 IST
ಅಕ್ಷರ ಗಾತ್ರ

ನಾಗಮಂಗಲ: ತಾಲ್ಲೂಕಿನ ಕಂಬದ ಹಳ್ಳಿಯಲ್ಲಿ ಚತುರ್ಮುಖ ಜಿನಬಿಂಬ ಬಸದಿಯ ಪಂಚಕಲ್ಯಾಣ ಪ್ರತಿಷ್ಠಾನ ಮಹೋತ್ಸವ ಮತ್ತು ಭಾನುಕೀರ್ತಿ ಭಟ್ಟಾ ಚಾರ್ಯ ಸ್ವಾಮೀಜಿ ಪಟ್ಟಾಭಿಷೇಕದ ರಜತ ಮಹೋತ್ಸವ, ಗುರುವಂದನಾ ಕಾರ್ಯಕ್ರಮ ಮಂಗಳವಾರ ನಡೆಯಿತು.

ಕನಕಗಿರಿ ಜೈನ ಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ‘ಕಂಬದಹಳ್ಳಿ ಸ್ವಾಮೀಜಿ ತಮ್ಮ ವ್ರತ ನಿಯಮ, ಧರ್ಮಪಾಲನೆ ಸೇರಿದಂತೆ ಎಲ್ಲಾ ಧಾರ್ಮಿಕ ಸಂಪ್ರದಾಯ ಅನುಕರಣೆಯಲ್ಲಿ ಭಟ್ಟಾರಕ ಸ್ವಾಮೀಜಿಯ ಪ್ರತಿರೂಪ ವಾಗಿದ್ದಾರೆ. ಕಂಬದಹಳ್ಳಿಗೆ ಬಂದಾಗ ಸ್ವಾಮೀಜಿಗೆ ಉಳಿದುಕೊಳ್ಳಲು ವ್ಯವಸ್ಥೆಯಿಲ್ಲದೆ ಶಾಂತಿನಾಥ ಬಸದಿ ಬಳಿ ಮಲಗುತ್ತಿದ್ದರು. ನಂತರ ಮಠವನ್ನು ಕಟ್ಟಿ ಕ್ಷೇತ್ರದ ಬೆಳವಣಿಗೆಗಾಗಿ ಶ್ರಮಿಸಿದ್ದಾರೆ. ನಮ್ಮ ಸಮಾಜದ ಹೇಳಿಗೆಗಾಗಿ ದೇಶಾದ್ಯಂತ ಸಂಚರಿಸಿದ್ದಾರೆ. ಅಲ್ಲದೇ ನಮ್ಮ ಸಮುದಾಯದ ಮಠಗಳಲ್ಲಿ 80ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಜೈನ ಭಕ್ತರನ್ನು ಕಂಬದಹಳ್ಳಿಗೆ ಸೆಳೆಯುವ ಶ್ರೇಷ್ಠ ಹೃದಯಿಯಾಗಿದ್ದಾರೆ. ಚಂದ್ರಗಿರಿ ಬೆಟ್ಟದಲ್ಲಿದ್ದ ಸಣ್ಣ ಕುರುಹನ್ನು ಆಧರಿಸಿ ಅಮೋಘ ಬಸದಿಯನ್ನು ಕಟ್ಟಲು ಕ್ರಮವಹಿಸಿದ್ದಾರೆ’ ಎಂದರು.

ಹೊಂಬುಜದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ‘ಬಂಡೆಯಲ್ಲೂ ಬಂಗಾರ ಮಾಡ ಬಹುದು ಎಂಬುದನ್ನು ಕಂಬದಹಳ್ಳಿ ಸ್ವಾಮೀಜಿ ತೋರಿಸಿದ್ದಾರೆ. ಚಿಕ್ಕ ಗುಡಿಸಲಿ ನಿಂದ ಪ್ರಾರಂಭವಾದ ಮಠ ಇಂದು ದೊಡ್ಡ ಕ್ಷೇತ್ರವಾಗಿ ಅಭಿವೃದ್ಧಿಯಾಗಿದೆ. ಪ್ರಗತಿ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಶಿಕ್ಷಣ ನೀಡುತ್ತಿದ್ದಾರೆ’ ಎಂದು ಹೇಳಿದರು.

‘ಉತ್ತರ ಭಾರತದಲ್ಲಿ ಸಮುದಾಯಕ್ಕೆ ಸರಿಯಾದ ಮಾರ್ಗದರ್ಶನವಿಲ್ಲದೇ ಪರದಾಡುತ್ತಿದೆ. ಮೂರ್ತಿಗಳನ್ನು ಗುಂಡಿಗೆ ಹಾಕಿದರೂ ಕೇಳುವ ಧೈರ್ಯ ಮಾಡುತ್ತಿಲ್ಲ. ಆದರೆ, ಕರ್ನಾಟಕದಲ್ಲಿ ಭಟ್ಟಾರಕರು ಇರುವ ಧೈರ್ಯದಿಂದ ನೆಮ್ಮದಿಯಾಗಿದ್ದೇವೆ. ಭಕ್ತರು ಕೊಟ್ಟ ಒಂದೊಂದು ರೂಪಾಯಿಯನ್ನು ಜೈನ ಮಠಗಳು ಸದುಪಯೋಗ ಪಡಿಸಿ ಸಮಾಜ ಸೇವೆ ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ’ ಎಂದರು.

ಅಮೋಘ ಕೀರ್ತಿ, ವೀರಸಾಗರ ಮತ್ತು ಅಮರಕೀರ್ತಿ ಮುನಿ ಮಹಾ ರಾಜರು ಆಶೀರ್ವಚನ ನೀಡಿದರು.

ಗುರುವಂದನ ಕಾರ್ಯಕ್ರಮದ ಅಂಗವಾಗಿ ಮಂಡ್ಯ, ಮೈಸೂರು, ಹಾಸನ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಜೈನ ಮಹಿಳಾ ಸಂಘಗಳಿಂದ ಜಲ, ಗಂಧ, ಅಕ್ಷತೆ, ಚರು, ದೀಪ, ಧೂಪ, ಫಲ, ಅರ್ಘ್ಯ, ಶಾಂತಿಧಾರಗಳ ಅಷ್ಟಸಿದ್ಧಿಗಳನ್ನು ಅರ್ಪಿಸಿ ಪಾದ ಪೂಜೆ ನೆರವೇರಿಸಲಾಯಿತು.

ಹೊರನಾಡಿನ ಗಾನವಿಶಾರದೆ ಸಂಗೀತ ತಂಡದಿಂದ ಜೈನ ಭಕ್ತಿ ಗೀತೆಗಳನ್ನು ಪ್ರಸ್ತುತಿ ಪಡಿಸಲಾಯಿತು.

ಕರ್ನಾಟಕ ಜೈನ ಅಸೋಸಿಯೇಷನ್ ಅಧ್ಯಕ್ಷ ಬಿ‌‌.ಪ್ರಸನ್ನಯ್ಯ, ನಿರ್ದೇಶಕ ರಾಜ್ ಕೀರ್ತಿ, ಧವಲಕೀರ್ತಿ ಭಟ್ಟಾರಕ ಸ್ವಾಮೀಜಿ, ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ, ಮೂಡಬಿದಿರೆಯ ಪಂಡಿತ್ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಪಂಚಕಲ್ಯಾಣ ಸಮಿತಿ ಅಧ್ಯಕ್ಷ ಬ್ರಹ್ಮದೇವಯ್ಯ, ಮುಖಂಡರಾದ ಬೆಳ್ಳೂರು ಪಾಪಣ್ಣ, ಶಾಂತಿ ಪ್ರಸಾದ್ ಜೈನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT