ಭಾನುವಾರ, ಡಿಸೆಂಬರ್ 8, 2019
20 °C
16ನೇ ಶತಮಾನದಲ್ಲಿ ಭೇಟಿ ನೀಡಿದ್ದ ಕನಕದಾಸರು, ಬಂಡೆಯೇ ಸಾಕ್ಷಿ

ಶ್ರೀರಂಗಪಟ್ಟಣ | ಕಾವೇರಿ ತಟದಲ್ಲಿ ಅರಳಿರುವ ಕನಕ ಕ್ಷೇತ್ರ

ಗಣಂಗೂರು ನಂಜೇಗೌಡ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ತಾಲ್ಲೂಕಿನ ಮಹದೇವಪುರ ಬಳಿ, ಕಾವೇರಿ ನದಿಯಲ್ಲಿರುವ ಕನಕನ ಬಂಡೆ ರಾಜ್ಯ, ಹೊರ ರಾಜ್ಯಗಳಲ್ಲೂ ಹೆಸರುವಾಸಿಯಾಗಿದೆ.

16ನೇ ಶತಮಾನದಲ್ಲಿ ಕನಕದಾಸರು ಇತ್ತ ಬಂದಿದ್ದರು. ಶ್ರೀರಂಗನ ದರ್ಶನ ಪಡೆದ ಕನಕದಾಸರು ’ಇನ್ನೆಷ್ಟು ಕಾಲ ನೀನಿಲ್ಲಿ ಮಲಗಿದ್ದರೂ ನಿನ್ನನೆಬ್ಬಿಸುವವರೊಬ್ಬರನೂ ಕಾಣೆ ಶ್ರೀರಂಗಪಟ್ಟಣದ ರಂಗನಾಥ...’ ಎಂದು ಹಾಡಿರುವುದು ದಾಖಲಾಗಿದೆ.

ಶಿವನಸಮುದ್ರ ಬಳಿಯ ಮಧ್ಯರಂಗನ ದರ್ಶನಕ್ಕಾಗಿ ಪೂರ್ವಾಭಿಮುಖವಾಗಿ ತೆರಳುವ ಮಾರ್ಗದಲ್ಲಿ ಮಹದೇವಪುರ ಗ್ರಾಮಕ್ಕೆ ಕನಕದಾಸರು ಭೇಟಿ ನೀಡಿದ್ದರು. ಈ ಊರಿನ ಕಾಶಿ ವಿಶ್ವನಾಥನ ದರ್ಶನಕ್ಕೂ ಮುನ್ನ ಕಾವೇರಿ ನದಿಯಲ್ಲಿ ಸ್ನಾನ ಮಾಡಿ, ನದಿಯ ಮಧ್ಯೆ ಬಂಡೆಯ ಮೇಲೆ ಬಾಳೆ ಎಲೆಯನ್ನು ಹಾಸಿ ಧ್ಯಾನ ಮಾಡಿದರು. ಅವರು ಧ್ಯಾನ ಮಾಡಿದ ಬಂಡೆ ’ಕನಕನ ಬಂಡೆ’ ಎಂದೇ ಹೆಸರಾಗಿದೆ.

ಈ ಬಂಡೆಯ ಮೇಲೆ ಬಾಳೆ ಎಲೆಯ ಗುರುತು ಅಚ್ಚೊತ್ತಿದಂತೆ ಕಾಣುತ್ತದೆ. ನದಿಯಲ್ಲಿ ನೀರಿನ ಮಟ್ಟ ಮಡಿಮೆ ಇದ್ದಾಗ ಮಾತ್ರ ಕನಕನ ಬಂಡೆ ಗೋಚರಿಸುತ್ತದೆ. ಹಾಗಾಗಿ ಅವರು ಬೇಸಿಗೆಯ ದಿನಗಳಲ್ಲಿ ಮಹದೇವಪುರಕ್ಕೆ ಬಂದಿದ್ದರು ಎಂದು ನಂಬಲಾಗಿದೆ.

ಬೇಸಿಗೆಯಲ್ಲಿ ದರ್ಶನ: ಕನಕನ ಬಂಡೆ ಬೇಸಿಗೆಯ ಕಾಲದಲ್ಲಿ ಮಾತ್ರ ಗೋಚರಿಸುತ್ತದೆ. ನದಿಯಲ್ಲಿ ನೀರಿನ ಮಟ್ಟ ಕಡಿಮೆ ಇದ್ದಾಗ ಇದನ್ನು ಸ್ಟಷ್ಟವಾಗಿ ನೋಡಬಹುದು. ನದಿಯ ದಡದಿಂದ ಸುಮಾರು 200 ಅಡಿಗಳಷ್ಟು ದೂರದಲ್ಲಿ ಕನಕನ ಬಂಡೆಯನ್ನು ಮುಟ್ಟಲು ಹರಿಗೋಲಿನಲ್ಲಿ ಹೋಗಬೇಕು.

ಕನಕನ ಗುಡಿ: ಕನಕದಾಸರು ಮಹದೇವಪುರಕ್ಕೆ ಭೇಟಿ ನೀಡಿದ ಜ್ಞಾಪಕಾರ್ಥವಾಗಿ ಮೀನುಗಾರರು (ಅಂಬಿಗರು) ನದಿಯ ದಡದಲ್ಲಿ ಕನಕನ ಗುಡಿಯೊಂದನ್ನು ಕಟ್ಟಿಸಿದ್ದಾರೆ. ಇಲ್ಲಿ ಪ್ರತಿ ಶನಿವಾರ ಕನಕನ ಮೂರ್ತಿಗೆ ಪೂಜೆ ನಡೆಯುತ್ತದೆ. ಕಾಶಿ ವಿಶ್ವನಾಥನ ತೆಪ್ಪೋತ್ಸವದ ಸಂದರ್ಭದಲ್ಲಿ ಕನಕನ ಬಂಡೆಗೆ ಪೂಜೆ ಸಲ್ಲಿಸುವ ವಾಡಿಕೆ ಅನೂಚಾನವಾಗಿ ನಡೆಯುತ್ತಿದೆ. ಗಂಗಾಮತಸ್ಥ ಕುಟುಂಬಗಳು ವರ್ಷಕ್ಕೊಮ್ಮೆ ಕನಕನ ಹಬ್ಬ ಆಚರಿಸುತ್ತಾರೆ.

ದೀಪಾವಳಿ ಹಬ್ಬದ ದಿನ ಚೀರನಹಳ್ಳಿ ಚನ್ನ ಬೀರೇಶ್ವರ, ಮಾಡಲದ ಹುಚ್ಚು ಬೀರೇಶ್ವರ, ಚಿಕ್ಕಮರಳಿಯ ಚನ್ನ ಬೀರೇಶ್ವರ, ಕಾಡುಕೊತ್ತನಹಳ್ಳಿಯ ಮಾರಮ್ಮ, ರಾಮಂದೂರು ಕಾಳಮ್ಮ, ಕುರುಂಪುರದ ಲಕ್ಷ್ಮೀದೇವಿ, ನೇರಲಕೆರೆ ಶಂಭುಲಿಂಗೇಶ್ವರ ಹಾಗೂ ಏಳೂರಮ್ಮ ದೇವರ ಕೂಟಗಳು ಇಲ್ಲಿ ನೆರೆಯುತ್ತವೆ.

ಪವಾಡದ ಕತೆ: 16ನೇ ಶತಮಾನದಲ್ಲಿ ನದಿ ದಾಟುವವರು ಹರಿಗೋಲನ್ನೇ ಆಶ್ರಯಿಸಬೇಕಿತ್ತು. ಕನಕದಾಸರು ಶೂದ್ರ ಕುಲದವರಾಗಿದ್ದರಿಂದ, ಅವರ ಮೈಯೆಲ್ಲಾ ಕಜ್ಜಿಯಾಗಿದ್ದುದರಿಂದ ಅಂಬಿಗ ದೋಣಿ ಹತ್ತಲು ಬಿಡಲಿಲ್ಲವಂತೆ. ಕನಕದಾಸರು ಪಕ್ಕದ ತೋಟದಿಂದ ಬಾಳೆ ಎಲೆ ತಂದು ಅದರ ಮೇಲೆ ಕುಳಿತೇ ನದಿ ದಾಟಿದರಂತೆ. ಈ ಪವಾಡದ ದೃಶ್ಯವನ್ನು ಕಂಡು ಅಂಬಿಗ ಮತ್ತು ದೋಣಿಯಲ್ಲಿದ್ದವರು ಕ್ಷಮೆ ಯಾಚಿಸಿದರಂತೆ ಎಂಬ ಮಾತು ಪ್ರಚಲಿತದಲ್ಲಿದೆ.

ದಾರಿ ಯಾವುದು?: ಕನಕನ ಕಲ್ಲು ಇರುವ ಮಹದೇವಪುರಕ್ಕೆ ಮಂಡ್ಯ– ಅರಕೆರೆ– ಮಂಡ್ಯಕೊಪ್ಪಲು– ಶಾಂತಿಕೊಪ್ಪಲು ಮಾರ್ಗವಾಗಿ ಬರಬಹುದು. ಮೈಸೂರು ಕಡೆಯಿಂದಲೂ ಸಾರಿಗೆ ಸಂಪರ್ಕವಿದೆ. ಶ್ರೀರಂಗಪಟ್ಟಣ– ಬನ್ನೂರು ಮಾರ್ಗದಲ್ಲಿ, ತೋಟದ ಬಳಿ ಬಲಕ್ಕೆ ಒಂದು ಪರ್ಲಾಂಗು ದೂರದಲ್ಲಿ ಮಹದೇವಪುರ ಸಿಗುತ್ತದೆ. ಮಂಡ್ಯದಿಂದ 22 ಕಿ.ಮೀ, ಮೈಸೂರಿನಿಂದ 13 ಕಿ.ಮೀ ಹಾಗೂ ಶ್ರೀರಂಗಪಟ್ಟಣದಿಂದ 10 ಕಿ.ಮೀ ದೂರದಲ್ಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು