ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ನೆಲೆಯಲ್ಲಿ ಕನ್ನಡ ಗುರುತಿಸಿಕೊಳ್ಳಲಿ

ಕವಿ ಪುತಿನ ಸಂಸ್ಕರಣೆ ಕಾರ್ಯಕ್ರಮದಲ್ಲಿ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಮತ
Last Updated 3 ಮೇ 2019, 4:52 IST
ಅಕ್ಷರ ಗಾತ್ರ

ಪಾಂಡವಪುರ: ‘ಜಾಗತಿಕ ನೆಲೆಯಲ್ಲಿ ನಮ್ಮ ಪರಂಪರೆ, ಸಂಸ್ಕೃತಿ ಮತ್ತು ಸಾಹಿತ್ಯವನ್ನು ಗುರುತಿಸಿಕೊಳ್ಳುವ ಅಗತ್ಯವಿದೆ. ಕುವೆಂಪು, ಬೇಂದ್ರೆ, ಕಾರಂತ, ಪುತಿನ, ಮಾಸ್ತಿಯಂತಹ ಕನ್ನಡದ ಬರಹಗಾರರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ’ ಎಂದು ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.

ತಾಲ್ಲೂಕು ಯುವ ಬರಹಗಾರರ ಬಳಗವು ಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ‘ಕವಿ ಪುತಿನ ಸಂಸ್ಕರಣೆ– ಕಾವ್ಯ ಪ್ರಶಸ್ತಿ ಪ್ರದಾನ, ರಾಜ್ಯಮಟ್ಟದ ಕವಿ–ಕಾವ್ಯ ಸಮ್ಮಿಲನ ಹಾಗೂ ಕನ್ನಡ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ’ವನ್ನು ಉದ್ಫಾಟಿಸಿ ಅವರು ಮಾತನಾಡಿದರು.

ವಚನ ಸಾಹಿತ್ಯಕ್ಕಿಂತ ಸಮಾನವಾದ ಮತ್ತೊಂದು ಸಾಹಿತ್ಯವಿಲ್ಲ. ವಿವಿಧ ದೇಶಗಳ ವಿಶ್ವವಿದ್ಯಾನಿಲಯಗಳಲ್ಲಿ ವಚನ ಸಾಹಿತ್ಯದ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಕನ್ನಡದ ಹಲವು ಶ್ರೇಷ್ಠ ಬರಹಗಾರರು ಜಾಗತಿಕ ಮಟ್ಟದಲ್ಲಿ ನಿಲ್ಲಬಲ್ಲವರಾಗಿದ್ದರೂ ಅವರ ಸಾಹಿತ್ಯ ಇಂಗ್ಲಿಷ್ ಭಾಷೆಗೆ ಅನುವಾದಗೊಂಡಿಲ್ಲ. ಈ ಹಿಂದೆಯೇ ಅನುವಾದ ಕಾರ್ಯ ನಡೆದಿದ್ದರೆ ಕನ್ನಡ ಸಾಹಿತ್ಯ ಜಾಗತಿಕ ನೆಲೆಯಲ್ಲಿ ಗುರುತಿಸಿಕೊಳ್ಳುತ್ತಿತ್ತು ಎಂದರು.

‘ಮಂಡ್ಯ ಸೇರಿದಂತೆ ನಾಡಿನ ಸಂಸ್ಕೃತಿ ಜಗತ್ತಿನ ಇತರೆ ಸಂಸ್ಕೃತಿಯಷ್ಟೇ ಶ್ರೇಷ್ಠವಾದದ್ದು. ನಾವು ಸುಮ್ಮನೆ ಕಾಲಹರಣ ಮಾಡುವುದರ ಬದಲು ನಮ್ಮ ಸಾಹಿತ್ಯ ಮತ್ತು ಸಂಸ್ಕೃತಿಯ ವಾರಸುದಾರರಾಗಬೇಕಿದೆ. ನಿರಂತರ ಅಧ್ಯಯನ, ಬರವಣಿಗೆಯಲ್ಲಿ ತೊಡಗಿಸಿಕೊಂಡು ಕನ್ನಡ ಸಾಹಿತ್ಯವನ್ನು ವಿಸ್ತರಿಸಬೇಕಿದೆ. ಪತ್ರಕರ್ತ ವೈಎನ್‌ಕೆ ಹೇಳುವಂತೆ, ಕೇಳಿಸಿಕೊಳ್ಳುವ ತಾಳ್ಮೆ ನಮ್ಮೆಲ್ಲರಲ್ಲಿ ಬರಬೇಕಿದೆ. ಯಾವ ವಿಷಯವನ್ನಾದರೂ ಸರಿಯಾಗಿ ಕೇಳಿಸಿಕೊಂಡರಷ್ಟೇ ಗ್ರಹಿಸಲು ಸಾಧ್ಯ. ಈ ಮೂಲಕ ನಾವು ಸಮಾಜವನ್ನು ಗ್ರಹಿಸಲು ಸಾಧ್ಯ’ ಎಂದು ಹೇಳಿದರು.

ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಚರಂಡಿ ಸೇರಿದಂತೆ ಇನ್ನಿತರ ಭೌತಿಕ ನಿರ್ಮಾಣವಲ್ಲ. ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ಕಟ್ಟುವುದೂ ಅಭಿವೃದ್ಧಿಯೇ. ಇದೇ ನಿಜವಾದ ಸಂಪತ್ತು. ಇದನ್ನು ಜನಪ್ರತಿನಿಧಿಗಳಿಂದ ನಿರೀಕ್ಷಿಸುವಂತಿಲ್ಲ. ಇವತ್ತಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಇದಕ್ಕೆ ಅಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಶೈಕ್ಷಣಿಕ ಕ್ಷೇತ್ರಕ್ಕೆ ತೋರಿದ ಆಸಕ್ತಿಯೇ ಕಾರಣ ಎಂದು ಹೇಳಿದರು.

ಪುತಿನ ಕಾವ್ಯ ಪ್ರಶಸ್ತಿ ಪ್ರದಾನ: ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಅವರಿಗೆ ‘ಪುತಿನ ಕಾವ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಕೆ.ಬಿ.ಮಹೇಶ್ ಸೂರಮ್ಮನಹಳ್ಳಿ ಅವರ ‘ಬಿಸಿಲ ಮಲ್ಲಿಗೆ’ ಪುಸ್ತಕ ಬಿಡುಗಡೆಗೊಳಿಸಲಾಯಿತು.

ವಿದ್ಯಾ ಪ್ರಚಾರ ಸಂಘದ ಗೌರವ ಕಾರ್ಯದರ್ಶಿ ಕೆ.ವಿ.ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಆಶಯ ನುಡಿಗಳನ್ನಾಡಿದರು.

ಬೆಂಗಳೂರಿನ ಕನ್ನಡ ಶಕ್ತಿ ಕೇಂದ್ರ ಅಧ್ಯಕ್ಷ ಸಿ.ಕೆ.ರಾಮೇಗೌಡ, ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್ ಇದ್ದರು.

ಲಜ್ಜೆ ಮತ್ತು ಪ್ರೀತಿಸುವ ಶಕ್ತಿ ಇರಬೇಕು

ಲಜ್ಜೆತನ ಇರಬೇಕೇ ಹೊರತು ಲಜ್ಜೆಗೇಡಿತನ ಇರಬಾರದು. ಜೈಲಿಗೆ ಹೋಗಿ ಬಂದವರಿಗೆ ಹೂವಿನ ಹಾರ ಹಾಕಿ ಜೈಕಾರ ಕೂಗುವ ಕೆಲಸವಾಗುತ್ತಿದೆ. ಲಜ್ಜೆಗೆಟ್ಟ ರಾಜಕಾರಣಿಗಳು ಇದನ್ನೇ ತಮ್ಮ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿರುವುದು ಬೇಸರದ ಸಂಗತಿ. ದ್ವೇಷ, ಅಸಹನೆ, ನಿಂದನೆ ತುಂಬಿರುವ ಈ ಸಮಾಜದಲ್ಲಿ ಒಬ್ಬರನ್ನೊಬ್ಬರು ಪ್ರೀತಿಸುವ ಶಕ್ತಿ ಬೆಳೆಸಿಕೊಳ್ಳಬೇಕು. ಹಣದ ಬೆನ್ನತ್ತಿರುವ ನಾವು ಸಂತೋಷಪಡುವ ಮನಸ್ಸನ್ನು ಕಳೆದುಕೊಳ್ಳುತ್ತಿದ್ದೇವೆ. ಮನುಷ್ಯ ಅಂತಿಮವಾಗಿ ಚಿಂತನಶೀಲನಾಗಬೇಕು ಎಂದು ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT