ಭಾನುವಾರ, ಫೆಬ್ರವರಿ 23, 2020
19 °C
ನಕಲಿ ‘ಗೌಡಾ’ ನೀಡುತ್ತಿರುವ ವಿಶ್ವವಿದ್ಯಾಲಯಗಳ ವಿರುದ್ಧ ಕ್ರಮ ಅಗತ್ಯ: ಎನ್.ಜಗದೀಶ್ ಕೊಪ್ಪ

ನಕಲಿ ‘ಗೌಡಾ’: ತಲೆತಗ್ಗಿಸುವ ಸಂಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾಂಡವಪುರ (ಮೇಲುಕೋಟೆ, ಪು.ತಿ.ನ ವೇದಿಕೆ): ಜಿಲ್ಲೆಯಲ್ಲಿ ಕೆಲವರು ಹಣ ನೀಡಿ ನಕಲಿ ಗೌರವ ಡಾಕ್ಟರೇಟ್‌ ಪಡೆಯುತ್ತಿರುವುದು  ತಲೆತಗ್ಗಿಸುವ ಸಂಗತಿ. ನಡುಬೀದಿಯಲ್ಲಿ ಇಂತಹವರ ಕುತ್ತಿಗೆಪಟ್ಟಿ ಹಿಡಿದು ಕೇಳಬೇಕಿದೆ ಎಂದು ಲೇಖಕ ಡಾ.ಎನ್.ಜಗದೀಶ್ ಕೊಪ್ಪ ಹೇಳಿದರು.

ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರಗೋಷ್ಠಿಯನ್ನು ಉದ್ಫಾಟಿಸಿ ಅವರು ಮಾತನಾಡಿದರು.

ಜಿಲ್ಲೆಯ ಕೆಲವರು ಹೊರ ರಾಜ್ಯಗಳ ವಿಶ್ವವಿದ್ಯಾಲಯಗಳಿಗೆ ₹5 ಸಾವಿರದಿಂದ ₹10 ಸಾವಿರ ಕೊಟ್ಟು ಗೌರವ ಡಾಕ್ಟರೇಟ್‌ ಪಡೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಹಣ ಪಡೆದು ಗೌರವ ಡಾಕ್ಟರೇಟ್‌ ನೀಡುತ್ತಿರುವ ವಿಶ್ವವಿದ್ಯಾಲಯಗಳ ಮೇಲೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ 30ರಿಂದ 40 ವರ್ಷದವರ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಆಹಾರ ಮತ್ತು ಜೀವನಶೈಲಿ ಕಾರಣ. ಅತಿಯಾದ ಮಾಂಸಾಹಾರ ಸೇವನೆ, ಮದ್ಯ ಸೇವನೆಯಿಂದ ಸಾವು ಸಂಭವಿಸುತ್ತಿದೆ. ಯುವ ಸಮೂಹಕ್ಕೆ ಸಂಸ್ಕಾರವನ್ನು ಕಲಿಸಬೇಕಿದೆ. ಈ ಬಗ್ಗೆ ಗಂಭೀರ ಚಿಂತನೆ ನಡೆಯಬೇಕಿದೆ ಎಂದು ಹೇಳಿದರು.

ಮಂಡ್ಯ ಜಿಲ್ಲೆ ನೀರಾವರಿ ಪ್ರದೇಶವಾಗಿದೆ. ಆದರೆ, ನೀರನ್ನು ಹೇಗೆ ಬಳಸಬೇಕು ಎಂಬುದು ಬಹುತೇಕರಿಗೆ ತಿಳಿಯದು. ಅಗತ್ಯಕ್ಕಿಂತಲೂ ಹೆಚ್ಚಿನ ನೀರನ್ನು ಬಳಸಲಾಗುತ್ತಿದೆ. ಜಮೀನಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹರಿಯಬಿಡಲಾಗುತ್ತಿದೆ. ಹಾಗಾಗಿ ನೀರಿನ ಬಳಕೆ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಜಿಲ್ಲೆಗೆ ಒಂದು ಪರಂಪರೆಯಿದೆ. ಇಲ್ಲಿ ಯಾವುದೇ ಧರ್ಮ, ಜಾತಿಗಳ ನಡುವೆ ಸಂಘರ್ಷ ಏರ್ಪಟ್ಟಿಲ್ಲ. ಇಲ್ಲಿ ಸಾಮರಸ್ಯವಿದೆ ಎಂದು ಅಭಿಪ್ರಾಯಪಟ್ಟರು.

‘ಜಲಕ್ಷಾಮ ನಿವಾರಣೆಗಾಗಿ ಜನಾಂದೋಲನ’ ಕುರಿತು ಪ್ರಾಧ್ಯಾಪಕ ಡಾ.ಎಲ್.ಪ್ರಸನ್ನಕುಮಾರ್, ‘ಆರೋಗ್ಯ ಸಂವರ್ಧನೆಯಲ್ಲಿ ಸಾಮಾನ್ಯ ತಿಳಿವಳಿಕೆ’ ಕುರಿತು ಡಾ.ಕೆ.ಎಂ.ಶಿವಕುಮಾರ್, ‘ಸದೃಢ ಸಮಾಜ ನಿರ್ಮಿಸುವಲ್ಲಿ ಯುವ ಜನರ ಪಾತ್ರ’ದ ಕುರಿತು ವಿದ್ಯಾರ್ಥಿನಿ ಎಂ.ಮೇಘನಾ ಮಾತನಾಡಿದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ.ಬೋರೇಗೌಡ ಚಿಕ್ಕಮರಳಿ ಮಾತನಾಡಿ, ‘ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯಕ್ಕೆ ಸಂಬಂಧಪಟ್ಟ ಗೋಷ್ಠಿಗಳಿಗಿಂತ ಇನ್ನಿತರೆ ವಿಷಯಗಳ ಗೋಷ್ಠಿಗಳೇ ಹೆಚ್ಚಾಗಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದು ನನ್ನ ಅಭಿಪ್ರಾಯವೂ ಆಗಿದೆ’ ಎಂದು ಹೇಳಿದರು.

‘ಕೆರೆಗಳ ಉಳಿವಿಗೆ ಕ್ರಮಕೈಗೊಳ್ಳಲಿ’

ಜಿಲ್ಲೆಯಲ್ಲಿ ಕೆರೆಕಟ್ಟೆಗಳು ಒತ್ತುವರಿಯಾಗಿ ಅಂತರ್ಜಲ ಕುಸಿದಿದೆ. ಗಣಿಗಾರಿಕೆಯಿಂದಾಗಿ ಕೆಆರ್‌ಎಸ್ ಅಣೆಕಟ್ಟೆಗೆ ಕುತ್ತು ಬಂದಿದೆ. ಈ
ಸಂಬಂಧ ರೈತರು ಮಾತ್ರ ಚಳವಳಿ ನಡೆಸಿದ್ದರು. ಆದರೆ, ಸಾರ್ವಜನಿಕರು ಪ್ರತಿಭಟನೆಗೆ ಮುಂದಾಗಲಿಲ್ಲ. ಈಗಲಾದರೂ ಸರ್ಕಾರವು ಕೆರೆಕಟ್ಟೆಗಳ ಒತ್ತುವರಿ ತೆರವುಗೊಳಿಸಬೇಕು. ಕೆಆರ್‌ಎಸ್ ಉಳಿವಿಗಾಗಿ ಕ್ರಮವಹಿಸಬೇಕು ಎಂದು ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಸಿ.ಮಹದೇವು ಒತ್ತಾಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು