ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಂಗಣ, ನಾಥ ಕೇಂದ್ರಕ್ಕೆ ತಲಾ ₹ 10 ಕೋಟಿ

ಮಿಮ್ಸ್‌ ಪಿಜಿ ಕೋರ್ಸ್‌ಗೆ ಹೆಚ್ಚುವರಿ 100 ಸೀಟು, ಹುಸಿಯಾದ ಬೃಹತ್‌ ಯೋಜನೆಗಳ ನಿರೀಕ್ಷೆ
Last Updated 8 ಮಾರ್ಚ್ 2021, 15:00 IST
ಅಕ್ಷರ ಗಾತ್ರ

ಮಂಡ್ಯ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೋಮವಾರ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಗೆ ಪ್ರಮುಖ ಯೋಜನೆಗಳನ್ನೇನೂ ಘೋಷಣೆ ಮಾಡಿಲ್ಲ. ತವರು ಜಿಲ್ಲೆಯ ಅಭಿವೃದ್ಧಿಗೆ ಬೃಹತ್‌ ಕಾರ್ಯಕ್ರಮ ರೂಪಿಸಬಹುದು ಎಂಬ ಜನರ ನಿರೀಕ್ಷೆ ಹುಸಿಯಾಗಿದೆ.

ಕಳೆದ ವಿಧಾನಸಭಾ ಉಪ ಚುನಾವಣೆ ಸಂದರ್ಭದಲ್ಲಿ ತವರು ಕ್ಷೇತ್ರ ಕೆ.ಆರ್‌.ಪೇಟೆ ತಾಲ್ಲೂಕನ್ನು‘ಶಿಕಾರಿಪುರ ಮಾದರಿ’ಯಲ್ಲಿ ಅಭಿವೃದ್ಧಿಗೊಳಿಸಲಾಗುವುದು ಎಂದು ಭರವಸೆ ನೀಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಕೂಡ ಇದೇ ಮಾತು ಹೇಳುತ್ತಿದ್ದರು. ಆದರೆ, ಚುನಾವಣೆಯಲ್ಲಿ ಗೆದ್ದ ನಂತರ ಮುಖ್ಯಮಂತ್ರಿ ಎರಡು ಬಜೆಟ್‌ ಮಂಡಿಸಿದ್ದರೂ ತವರು ಕ್ಷೇತ್ರಕ್ಕೆ ಯಾವುದೇ ಬೃಹತ್‌ ಯೋಜನೆ ಘೋಷಣೆ ಮಾಡಿಲ್ಲ.

‘ಚುನಾವಣೆ ಸಂದರ್ಭದಲ್ಲಿ ಮಂಡ್ಯಕ್ಕೆ ಬಂದಿದ್ದ ಯಡಿಯೂರಪ್ಪ, ತವರು ಜಿಲ್ಲೆಯ ಅಬಿವೃದ್ಧಿಗೆ ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿದ್ದರು. ಈಗ ಸಾಕಷ್ಟು ಅವಕಾಶಗಳು ಇದ್ದರೂ ಜಿಲ್ಲೆಯ ಕೃಷಿ, ಕೈಗಾರಿಕೆ, ಪ್ರವಾಸೋದ್ಯಮ ಕ್ಷೇತ್ರಗಳಿಗೆ ಹಣ ಮೀಸಲಿಟ್ಟಿಲ್ಲ’ ರೈತ ಮುಖಂಡರು ಆರೋಪಿಸುತ್ತಾರೆ.

ಮಂಡ್ಯಕ್ಕೆ ಸಿಕ್ಕಿದ್ದೇನು:

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್‌) ಸ್ನಾತಕೋತ್ತರ ಪದವಿಗೆ ಹೆಚ್ಚುವರಿ 100 ಸೀಟು ದಾಖಲು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆ ಮೂಲಕ ವೈದ್ಯಕೀಯ ಕಾಲೇಜಿನ ಸಾಮರ್ಥ್ಯ ಮತ್ತಷ್ಟು ಹೆಚ್ಚಳವಾಗಲಿದೆ. ಹೆಚ್ಚಿನ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಅಧ್ಯಯನ ಮಾಡಲು ಅವಕಾಶ ಸಿಗಲಿದೆ. ಸದ್ಯ ದಾಖಲಾತಿ ಸಂಖ್ಯೆ 59 ಇದೆ, ಈ ಶೈಕ್ಷಣಿಕ ವರ್ಷದಿಂದ ಸ್ನಾತಕೋತ್ತರ ಪದವಿ ದಾಖಲಾತಿ ಸಾಮರ್ಥ್ಯ 159ಕ್ಕೆ ಏರಿಕೆಯಾಗಲಿದೆ.

‘100 ಹೆಚ್ಚುವರಿ ಸೀಟುಗಳ ದಾಖಲಾತಿಗೆ ಮೂಲಸೌಲಭ್ಯಗಳ ಕೊರತೆ ಇಲ್ಲ. ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಮಾನವ ಸಂಪನ್ಮೂಲವನ್ನು ಹೆಚ್ಚಳ ಮಾಡಬೇಕಾಗುತ್ತದೆ. ಮುಂದೆ ವೈದ್ಯಕೀಯ ಕಾಲೇಜಿನ ಬೋಧನಾ ಸಾಮರ್ಥ್ಯ ಹೆಚ್ಚಳವಾಗಲಿದೆ’ ಎಂದು ಮಿಮ್ಸ್‌ ನಿರ್ದೇಶಕ ಎಂ.ಆರ್‌.ಹರೀಶ್‌ ಹೇಳಿದರು.

ಕ್ರೀಡಾಂಗಣ ಉನ್ನತೀಕರಣಕ್ಕೆ ₹ 10 ಕೋಟಿ: ನಗರದ ಹೃದಯ ಭಾಗದಲ್ಲಿರುವ ಸರ್‌.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದ ಉನ್ನತೀಕರಣಕ್ಕೆ ಮುಖ್ಯಮಂತ್ರಿಗಳು ₹ 10 ಕೋಟಿ ಘೋಷಣೆ ಮಾಡಿದ್ದಾರೆ. ಕೊರತೆಗಳ ನಡುವೆ ನರಳುತ್ತಿದ್ದ ಜಿಲ್ಲಾ ಕ್ರೀಡಾಂಗಣಕ್ಕೆ ಕಾಯಕಲ್ಪ ದೊರೆಯಲಿದೆ. ಕ್ರೀಡಾಂಗಣದ ಆವರಣದಲ್ಲಿದ್ದ ಹಲವು ಕಟ್ಟಡಗಳಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿರಲಿಲ್ಲ. ಈಗ ಉನ್ನತೀಕರಣಕ್ಕೆ ಹಣ ದೊರೆಯುತ್ತಿರುವ ಕಾರಣ ಹೆಚ್ಚುವರಿ ಸೌಲಭ್ಯ ದೊರೆಯಲಿದೆ.

‘ಬಜೆಟ್‌ ಘೋಷಣೆಯಿಂದ ಒಂದು ಕ್ರೀಡಾ ಸಂಕೀರ್ಣ ರೂಪಿಸಲು ಅವಕಾಶವಿದೆ. ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದು ಮಾಡಿ ಸಂಪೂರ್ಣ ಕ್ರೀಡಾ ಚಟುವಟಿಕೆಗೆ ಕ್ರೀಡಾಂಗಣವನ್ನು ಮೀಸಲಿಡಬಹುದು. ಸದ್ಯಕ್ಕೆ 5–10ನೇ ತರಗತಿ ಮಕ್ಕಳ ಕ್ರೀಡಾಕೂಟ ನಡೆಸಲಾಗುತ್ತಿದೆ. ಮುಂದೆ ಪಿಯು, ಪದವಿ ವಿದ್ಯಾರ್ಥಿಗಳನ್ನೂ ಸೇರಿಸಿಕೊಳ್ಳಬಹುದು, ಫುಟ್‌ಬಾಲ್‌, ಹಾಕಿ ಟರ್ಫ್‌ ರೂಪಿಸಬಹುದು. ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ರೀಡಾಂಗಣವನ್ನು ಉನ್ನತೀಕರಣಗೊಳಿಸಲಾಗುವುದು’ ಎಂದು ಯುವಜನಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಅನಿತಾ ತಿಳಿಸಿದರು.

ನಾಥ ಪರಂಪರಾ ಕೇಂದ್ರಕ್ಕೆ ₹ 10 ಕೋಟಿ:

ಆದಿಚುಂಚನಗಿರಿ ಮಠದ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ‘ನಾಥ ಪರಂಪರಾ ಕೇಂದ್ರ’ಕ್ಕೆ ಮುಖ್ಯಮಂತ್ರಿಗಳು ₹ 10 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ. ನಾಥ ಪರಂಪರೆಯ ಪ್ರಮುಖ ತಾಣವಾಗಿರುವ ಆದಿಚುಂಚನಗಿರಿಯಲ್ಲಿ ನಾಥ ಪರಂಪರೆಯ ಚಟುವಟಿಕೆಗಳು ಇನ್ನುಮುಂದೆ ಆರಂಭಗೊಳ್ಳಲಿವೆ.

‘ನಾಥ ಪರಂಪರೆಯಲ್ಲೇ ಆದಿಚುಂಚನಗಿರಿ ಮಠ ಮುನ್ನಡೆಯುತ್ತಿದೆ. ಮಠದಲ್ಲಿ ಈಗಾಗಲೇ ನವನಾಥ ಮಂಟಪವಿದೆ. ಧಾರ್ಮಿಕ ಚಟುವಟಿಕೆ ಮುನ್ನಡೆಸಲು ಪರಂಪರಾ ಕೇಂದ್ರ ಸ್ಥಾಪನೆಯಾಗಲಿದೆ’ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ ತಿಳಿಸಿದರು.

ಮೈಷುಗರ್‌; ಸೊಲ್ಲೆತ್ತದ ಸಿ.ಎಂ

ಮೈಷುಗರ್‌ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ನಡೆಸಬೇಕು ಎಂದು ರೈತ ಮುಖಂಡರು ಒತ್ತಾಯ ಮಾಡಿದ್ದರು, ಆದರೆ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಮೈಷುಗರ್‌ ಕಾರ್ಖಾನೆಯ ಸೊಲ್ಲು ಎತ್ತಲಿಲ್ಲ. ಸ್ಥಗಿತಗೊಂಡಿರುವ ಅಂಬೇಡ್ಕರ್‌ ಭವನಗಳ ಕಾಮಗಾರಿ ಪೂರ್ಣಗೊಳಿಸಲು ಹಣ ಬಿಡುಗಡೆ ಕೋರಲಾಗಿತ್ತು, ಆದಕ್ಕೆ ಯಾವುದೇ ಹಣ ಘೋಷಣೆ ಮಾಡಿಲ್ಲ.

ಜಿಲ್ಲೆಯ ಶಾಲಾ ಕಟ್ಟಡಗಳ ದುರಸ್ತಿಗೆ ಹಣ ನಿರೀಕ್ಷಿಸಲಾಗಿತ್ತು. ನೀರಾವರಿ ಯೋಜನೆ, ಕುಡಿಯುವ ನೀರಿನ ಯೋಜನೆ, ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹಣ ನಿರೀಕ್ಷಿಸಲಾಗಿತ್ತು. ಆದರೆ ಮುಖ್ಯಮಂತ್ರಿಗಳು ಈ ಬಗ್ಗೆ ಸೊಲ್ಲೆತ್ತಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT