ಗುರುವಾರ , ಮಾರ್ಚ್ 23, 2023
30 °C
ಹಳೇ ಮೈಸೂರು ಭಾಗದ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿಗೆ ಅನುಕೂಲ, ಸಕಾರಾತ್ಮಕ ಸ್ಪಂದನೆ

ಮದ್ದೂರಿನಿಂದ ಸ್ಪರ್ಧಿಸಲು ಡಿಕೆಶಿಗೆ ಮನವಿ: 2-3 ದಿನದಲ್ಲಿ ತಿಳಿಸುವುದಾಗಿ ಭರವಸೆ

‌ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸಬೇಕು ಒಂದು ಒತ್ತಾಯಿಸಿ ಕಾಂಗ್ರೆಸ್‌ ಮುಖಂಡರ ನಿಯೋಗ ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಒತ್ತಾಯಿಸಿತು.

ಬೆಂಗಳೂರಿನಲ್ಲಿ ಡಿಕೆಶಿ ಅವರನ್ನು ಭೇಟಿಯಾದ ಮುಖಂಡರು ಮದ್ದೂರು ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಕೋರಿದರು. ಆ ಮೂಲಕ ಹಳೇ ಮೈಸೂರು ಭಾಗದಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಬೇಕು. ಮಂಡ್ಯ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಲು ಸಹಾಯಕವಾಗುತ್ತದೆ ಎಂದು ಮನವಿ ಮಾಡಿದರು.

‘ಮದ್ದೂರು ಕ್ಷೇತ್ರಕ್ಕೂ ಡಿ.ಕೆ.ಶಿವಕುಮಾರ್‌ ಅವರಿಗೂ ಅವಿನಾಭಾವ ಸಂಬಂಧವಿದೆ. ಎಸ್‌.ಎಂ.ಕೃಷ್ಣ ಇಲ್ಲಿಯ ಶಾಸಕರಾಗಿದ್ದ ಕಾಲದಿಂದಲೂ ಮದ್ದೂರು ಕ್ಷೇತ್ರದ ಜನರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆ ಹಿನ್ನೆಲೆಯಲ್ಲಿ ಮದ್ದೂರು ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂದು ಮನವಿ ಮಾಡಲಾಗಿದೆ’ ಎಂದು ಕಾಂಗ್ರೆಸ್‌ ಮುಖಂಡ ಕದಲೂರು ರಾಮಕೃಷ್ಣ ತಿಳಿಸಿದರು.

‘ಡಿಕೆಶಿ ಅವರು ತವರು ಕನಕಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಯಾರೇ ನಿಂತರೂ ಗೆಲ್ಲುತ್ತಾರೆ. ಅಲ್ಲಿಗೆ ಬೇರೆ ಯಾರನ್ನಾದರೂ ನಿಲ್ಲಿಸಬಹುದು. ಮಂಡ್ಯ ಜಿಲ್ಲೆಯ ಮೇಲೆ ಅಪಾರ ಪ್ರೀತಿ ಹೊಂದಿರುವ ಅವರು ಮದ್ದೂರು ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಮನವಿ ಮಾಡಿದ್ದೇವೆ’ ಎಂದು ಕಾಂಗ್ರೆಸ್‌ ಮುಖಂಡ ಕದಲೂರು ರಾಮಕೃಷ್ಣ ತಿಳಿಸಿದರು.

‘ಹಳೇ ಮೈಸೂರು ಭಾಗದಲ್ಲಿ ಡಿ.ಕೆ.ಶಿವಕುಮಾರ್‌ ಅವರು ಸ್ಪರ್ಧಿಸಿದರೆ ಕಾಂಗ್ರೆಸ್‌ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಂತಾಗುತ್ತದೆ. ಅವರು ಬಂದರೆ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಏಳಕ್ಕೆ ಏಳೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ. ಈ ಕುರಿತಂತೆ ಜಿಲ್ಲಾ ಮುಖಂಡರ ಸಭೆಯಲ್ಲೂ ಚರ್ಚೆಯಾಗಿದೆ’ ಎಂದರು.

‘ನಮ್ಮ ಮನವಿಗೆ ಡಿ.ಕೆ.ಶಿವಕುಮಾರ್‌ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. 2–3 ದಿನಗಳಲ್ಲಿ ತಿಳಿಸುವುದಾಗಿ ಹೇಳಿದ್ದಾರೆ. ಅವರು ಖಂಡಿತಾ ಮದ್ದೂರು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದು ತಿಳಿಸಿದರು.

ನಿಯೋಗದಲ್ಲಿ ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ, ಮುಖಂಡರಾದ ಗುರುಚರಣ್‌, ಜೋಗಿಗೌಡ, ನಾಗೇಗೌಡ, ರಾಘವ ಸೇರಿ 50ಕ್ಕೂ ಹೆಚ್ಚು ಮಂದಿ ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು