ಶನಿವಾರ, ಜನವರಿ 29, 2022
19 °C
ಮೇಲುಕೋಟೆ ಯತಿರಾಜದಾಸರ್ ಗುರುಪೀಠದಲ್ಲಿ ನಡೆದ ಮದುವೆ

35 ವರ್ಷಗಳ ಹಿಂದೆ ಬೇರೆಯಾಗಿದ್ದ ಪ್ರೇಮಿಗಳು ಇಳಿವಯಸ್ಸಿನಲ್ಲಿ ಸತಿಪತಿಗಳಾದರು

ಪ್ರಜಾವಾಣಿವಾರ್ತೆ Updated:

ಅಕ್ಷರ ಗಾತ್ರ : | |

ಮೇಲುಕೋಟೆ: ಹದಿಹರೆಯದಲ್ಲಿ ಪ್ರೇಮಿಗಳಾಗಿದ್ದು, ಬಳಿಕ ಬೇರ್ಪಟ್ಟಿದ್ದ ಜೋಡಿಯೊಂದು 35 ವರ್ಷದ ನಂತರ ತಮ್ಮ ಇಳಿವಯಸ್ಸಿನಲ್ಲಿ ಸತಿಪತಿಗಳಾಗಿದ್ದಾರೆ. ಇಂಥ ಅಪರೂಪದ ವಿವಾಹ ಮಹೋತ್ಸವ ಮೇಲುಕೋಟೆಯಲ್ಲಿ ಗುರುವಾರ ನಡೆದಿದೆ.

65 ವರ್ಷ ವಯಸ್ಸಿನ ವರ ಚಿಕ್ಕಣ್ಣ, 55 ವರ್ಷದ ವಧು ಜಯಮ್ಮ ಹಸೆಮಣೆ ಏರಿದ್ದು, ಮರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮೇಲುಕೋಟೆ ಯತಿರಾಜದಾಸರ್ ಗುರುಪೀಠದಲ್ಲಿ ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್ ಗುರೂಜಿ ಸಾರಥ್ಯದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಪರಸ್ಪರ ಹಾರ ವಿನಿಮಯ ಮಾಡಿಕೊಂಡರು.

ಮೂಲತಃ ಹೊಳೆನರಸೀಪುರದ ಚಿಕ್ಕಣ್ಣ ಹಿಂದೆ ಮೈಸೂರಿನಲ್ಲಿ ಕೂಲಿಕೆಲಸ ಮಾಡುತ್ತಿದ್ದ ವೇಳೆ ಅತ್ತೆ ಮಗಳಾದ ಮೈಸೂರಿನ ಜಯಮ್ಮ ಅವರನ್ನು ಪ್ರೇಮಿಸುತ್ತಿದ್ದರು. ಅವರ ವಿವಾಹ ಪ್ರಸ್ತಾಪ ಒಪ್ಪದ ವಧುವಿನ ಕುಟುಂಬ ಜಯಮ್ಮ ಅವರಿಗೆ ಬೇರೆ ವಿವಾಹ ಮಾಡಿದ್ದರು.

ಬಳಿಕ ಜಯಮ್ಮ ಅವರನ್ನು ಅವರ ಪತಿ ತೊರೆದುಹೋಗಿದ್ದರು. ಆದರೆ, 35 ವರ್ಷ ಕಳೆದರೂ ಚಿಕ್ಕಣ್ಣ ಮಾತ್ರ ಮದುವೆ ಆಗಿರಲಿಲ್ಲ. ಈಚೆಗೆ ಇಬ್ಬರೂ ಭೇಟಿಯಾಗಿ ವಿವಾಹವಾಗಲು ನಿಶ್ಚಯಿಸಿದ್ದಾರೆ. ಇಳಿವಯಸ್ಸಿನ ಜೋಡಿ ಚೆಲುವನಾರಾಯಣನ ಕ್ಷೇತ್ರವಾದ ಮೇಲುಕೋಟೆಯಲ್ಲಿ ಮದುವೆಯಾಗಿದ್ದಾರೆ.

‘ಇಳಿವಯಸ್ಸಿನಲ್ಲಿ ಒಂದಾಗಿ ನೆಮ್ಮದಿಯ ಜೀವನ ಮಾಡಬೇಕೆಂಬ ಉದ್ದೇಶದಿಂದ ಮದುವೆಯಾಗಿದ್ದೇವೆ. ಇದಕ್ಕೆ ಅಪಾರ್ಥ ಕಲ್ಪಿಸದೆ ನಮ್ಮನ್ನು ಹರಸಿ ಬದಕಲು ಪ್ರೋತ್ಸಾಹಿಸಿ’ ಎಂದು ದಂಪತಿ ಮನವಿ ಮಾಡಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು