ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಸಂಘದ ಚುನಾವಣೆ ನ.20ಕ್ಕೆ

ಅಧ್ಯಕ್ಷ, 14 ನಿರ್ದೇಶಕ ಸ್ಥಾನಗಳಿಗೆ ಸ್ಪರ್ಧೆ, ನ.9ರಿಂದ ನಾಮಪತ್ರ ಸಲ್ಲಿಕೆ
Last Updated 30 ಅಕ್ಟೋಬರ್ 2021, 12:02 IST
ಅಕ್ಷರ ಗಾತ್ರ

ಮಂಡ್ಯ: ‘ಕರ್ನಾಟಕ ಸಂಘದ ಚುನಾವಣೆ ನ.20 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಂಘದ ಕಚೇರಿ ಆವರಣದಲ್ಲಿ ನಡೆಯಲಿದೆ’ ಎಂದು ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಹೇಳಿದರು.

‘2020-21ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಚುನಾವಣೆ ಮುಗಿದ ನಂತರ ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳಲಿದೆ. ಒಂದು ಅಧ್ಯಕ್ಷ ಸ್ಥಾನ ಹಾಗೂ 14 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

‘14 ನಿರ್ದೇಶಕರ ಸ್ಥಾನಗಳಲ್ಲಿ ಕಾರ್ಮಿಕ, ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟಜಾತಿ– ವರ್ಗಕ್ಕೆ ಮೀಸಲು, ಮಹಿಳೆಯರಿಗೆ ಮೀಸಲಾಗಿರುವ ಮೂರು ಸ್ಥಾನಗಳಲ್ಲಿ ತಲಾ ಒಂದೊಂದು ಸಾಮಾನ್ಯ, ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿ ಮೀಸಲು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಉಳಿದ 9 ಸ್ಥಾನಗಳಿಗೆ ಸಾಮಾನ್ಯ ಅಭ್ಯರ್ಥಿಗಳು ಸ್ಪರ್ಧಿಸಬಹುದು’ ಎಂದರು.

‘ಚುನಾವಣೆಗೆ ಅರ್ಹರಾದ ಮತದಾರರ ಪಟ್ಟಿ ಪ್ರಕಟದೊಂದಿಗೆ ನ.5ರಂದು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ನ.9ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಉಮೇದುವಾರಿಕೆ ಸಲ್ಲಿಸಲು ನ.12 ಕಡೆಯ ದಿನವಾಗಿದ್ದು, ನಾಮಪತ್ರಗಳ ಪರಿಶೀಲನೆಯು ನ.13 ರಂದು ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ನ.14 ಕಡೆ ದಿನವಾಗಿದೆ. ಜೊತೆಗೆ ಅದೇ ದಿನ ಸಂಜೆ ಅಂತಿಮವಾಗಿ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು’ ಎಂದು ವಿವರಿಸಿದರು.

‘ನ.15 ರಂದು ಅಭ್ಯರ್ಥಿಗಳಿಗೆ ಚಿಹ್ನೆ ನೀಡಿ, ಮಾದರಿ ಮತಪತ್ರ ಪ್ರಕಟಿಸಲಾಗುತ್ತದೆ. ನ.20 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ ಕರ್ನಾಟಕ ಸಂಘದ ಕಚೇರಿ ಆವರಣದಲ್ಲಿ ಚುನಾವಣೆ ನಡೆಯಲಿದೆ. ಮತದಾನ ಮುಗಿದ ಬಳಿಕ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ನಂತರ ಕರ್ನಾಟಕ ಸಂಘದ ಕಚೇರಿ ಆವರಣದಲ್ಲಿ ಸಂಜೆ 4.30 ಗಂಟೆಗೆ ವಾರ್ಷಿಕ ಮಹಾಸಭೆ ನಡೆಸಲಾಗುವುದು’ ಎಂದರು.

‘1936ರಲ್ಲೇ ಕರ್ನಾಟಕ ಸಂಘದ ಚಟುವಟಿಕೆ ಆರಂಭವಾಗಿದೆ. 1946ರಲ್ಲಿ ನೋಂದಣಿಯಾಗಿದ್ದು, 75 ವಸಂತಗಳನ್ನು ಕಂಡಿದೆ. ಸಂಘ ಹಲವು ಏಳು–ಬೀಳುಗಳೊಂದಿಗೆ ನಡೆದುಕೊಂಡು ಬಂದಿದೆ. ಕುವೆಂಪು, ಶಿವರಾಮಕಾರಂತ, ದ.ರಾ.ಬೇಂದ್ರೆ ಮುಂತಾದ ದಿಗ್ಗಜರು ಸಂಘದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ಧಾರೆ. ಜಿ.ಮಾದೇಗೌಡರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹಳೆಯ ಕಟ್ಟಡ ನಿರ್ಮಾಣಗೊಂಡಿದೆ’ ಎಂದು ಹೇಳಿದರು.

‘ಕರ್ನಾಟಕ ಸಂಘಕ್ಕೆ 75 ವರ್ಷ ತುಂಬುತ್ತಿದ್ದು, ಅಮೃತ ಮಹೋತ್ಸವದ ಅಂಗವಾಗಿ ವರ್ಷಪೂರ್ತಿ ವೈವಿಧ್ಯಮಯ ಕಾರ್ಯಕ್ರಮ ಆಯೋಜಿ ಸಲಾಗುತ್ತಿದೆ. ಆಡಳಿತ ಮಂಡಳಿ ಬದಲಾದರೂ ಅಮೃತ ಮಹೋತ್ಸವ ಚಟುವಟಿಕೆಗಳು ಮುಂದುವರಿಯಲಿವೆ. ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿದ್ದಾಗ ಬಜೆಟ್‌ನಲ್ಲಿ ಕರ್ನಾಟಕ ಸಂಘಕ್ಕೆ ₹ 1 ಕೋಟಿ ಘೋಷಣೆ ಮಾಡಿದ್ದರು. ನಂತರ ಬಂದ ಬಿಜೆಪಿ ಸರ್ಕಾರ ಇಲ್ಲಿಯವರೆಗೂ ಹಣ
ಬಿಡುಗಡೆ ಮಾಡಿಲ್ಲ. ಹಣ ಬಿಡುಗಡೆಯಾದರೆ ಸಂಘದ ಆವರಣದಲ್ಲಿ ರಂಗಮಂದಿರ ನಿರ್ಮಾಣದ ಅವಶ್ಯಕತೆ ಇದೆ’ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಕೆ.ಹರೀಶ್‌ಕುಮಾರ್, ಉಪಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಖಜಾಂಚಿ ಎಂ.ಎಸ್.ಮಂಜುಳಾ ಉದಯಶಂಕರ್, ಕಾರ್ಯದರ್ಶಿ ಲೋಕೇಶ್ ಚಂದಗಾಲು, ಸದಸ್ಯರಾದ ಎಚ್.ಕೆ.ಚಂದ್ರಹಾಸ, ವಿಜಯಲಕ್ಷ್ಮಿ ರಘುನಂದನ್ ಇದ್ದರು.

*****

4,380 ಮತದಾರರು

‘2006ರಲ್ಲಿ ಕೇವಲ 125 ಸದಸ್ಯರನ್ನು ಹೊಂದಿದ್ದ ಕರ್ನಾಟಕ ಸಂಘವು ಪ್ರಸ್ತುತ 4,380 ಸದಸ್ಯರಿದ್ದಾರೆ, ನ.5 ರೊಳಗೆ ಎಲ್ಲರಿಗೂ ವಿಶೇಷ ಗುರುತಿನ ಕಾರ್ಡ್ ನೀಡಲಾಗುತ್ತದೆ. ಕರ್ನಾಟಕ ಸಂಘದಿಂದ ಸುಸಜ್ಜಿತ ರಂಗಮಂದಿರ, ಜನಪದ ವಾದ್ಯ ಸಂಗ್ರಹಾಲಯ ಮತ್ತು ಕೆ.ವಿ.ಶಂಕರಗೌಡ ಆರ್ಟ್ ಗ್ಯಾಲರಿ ನಿರ್ಮಿಸುವ ಕನಸಿದೆ. ₹ 1.5 ಕೊಟಿ ರೂಪಾಯಿ ವೆಚ್ಚದ ಯೋಜನೆ ರೂಪಿಸಲಾಗಿದೆ’ ಎಂದು ಜಯಪ್ರಕಾಶ್‌ಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT