ಗುರುವಾರ , ಅಕ್ಟೋಬರ್ 17, 2019
24 °C
ಕಾರ್ಯಕ್ರಮದಲ್ಲಿ ಖಾಲಿ ಕುರ್ಚಿಗಳ ದರ್ಶನ, ಅವ್ಯವಸ್ಥೆಗೆ ಕವಿಗಳ ಅಸಮಾಧಾನ

ಕವಿಗೋಷ್ಠಿಯಲ್ಲಿ ಕವಿಗಳೇ ಕಿವಿಗಳು!

Published:
Updated:
Prajavani

ಶ್ರೀರಂಗಪಟ್ಟಣ: ದಸರಾ ನಿಮಿತ್ತ ಪಟ್ಟಣದ ಶ್ರೀರಂಗ ವೇದಿಕೆಯಲ್ಲಿ ಶನಿವಾರ ನಡೆದ ಕವಿಗೋಷ್ಠಿಯ ಅವ್ಯವಸ್ಥೆಗೆ ಕವಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಬೆರಳೆಣಿಕೆ ಮಂದಿ ಪಾಲ್ಗೊಂಡಿದ್ದರು.

ಕವಿ ಸತೀಶ್‌ ಜವರೇಗೌಡ ಕಪ್ಪುಪಟ್ಟಿ ಕಟ್ಟಿಕೊಂಡು ಕವಿತೆ ವಾಚಿಸಿದರು. ‘ಇಂತಹ ಮಹತ್ವದ ಕವಿಗೋಷ್ಠಿಯ ಆಹ್ವಾನ ಪತ್ರಿಕೆಯಲ್ಲಿ ಒಬ್ಬ ಕವಿಯ ಹೆಸರೂ ಇಲ್ಲ. ಕಸಾಪ ಪದಾಧಿಕಾರಿಗಳ ಸಭೆಯ ಆಹ್ವಾನ ಪತ್ರಿಕೆಯಂತಿದೆ. ದಸರಾ ಆಚರಣಾ ಸಮಿತಿಯ ಈ ನಿರ್ಲಕ್ಷ್ಯವನ್ನು ಬಹಿರಂಗವಾಗಿ ಖಂಡಿಸುತ್ತೇನೆ’ ಎಂದು ಹೇಳಿದರು. ತಮ್ಮ ಕವಿತೆಯಲ್ಲಿ ರಾಜ್ಯ, ಕೇಂದ್ರ ಸರ್ಕಾರಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು.

ಮತ್ತೊಬ್ಬ ಕವಿ ಅನಾರ್ಕಲಿ ಸಲೀಂ, ‘ಕವಿಗೋಷ್ಠಿಯ ಅವ್ಯವಸ್ಥೆಗೆ ನನ್ನದೂ ಪ್ರತಿಭಟನೆ ಇದೆ. ಇಂತಹ ತಪ್ಪು ಮರುಕಳಿಸಬಾರದು. ಇಲ್ಲಿ ನೋವಿಗೆ ಕಣ್ಣೀರು ಹಾಕುವಂತಿಲ್ಲ. ಆಳುವವರನ್ನು ಪ್ರಶ್ನೆ ಕೇಳುವಂತಿಲ್ಲ. ಆದರೂ ಅವರಿಗೆ ಗೊತ್ತಿಲ್ಲ, ಹರಿದ ಕಣ್ಣೀರಿಗೆ ತೆರಿಗೆ ಕಟ್ಟಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ್‌ ಚಾಮಲಾಪುರ ಕವಿಗೋಷ್ಠಿ ಉದ್ಘಾಟನೆಯಾದ 5 ನಿಮಿಷಗಳಲ್ಲಿ ವೇದಿಕೆಯಿಂದ ಹೊರ ನಡೆದರು. ಇದಕ್ಕೆ ಕವಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಕವಿ ಮಜ್ಜಿಗೆಪುರ ಶಿವರಾಂ, ಡಾ.ಸುಧಾಕರ್‌ ಹೊಸಹಳ್ಳಿ, ಭವಾನಿ ಲೋಕೇಶ್‌, ರವಿಕುಮಾರ್‌, ವಿಶ್ವೇಶ್ವರಯ್ಯ, ಹರವು ಲೋಕೇಶ್‌, ಸಂದೇಶ್‌ ಕಲಾವಿದ, ಕೊತ್ತತ್ತಿ ರಾಜು, ದೊ.ಚಿ. ಗೌಡ, ಕೆ.ಎನ್‌. ಪುರುಷೋತ್ತಮ, ನಾ.ರೈತ ಇತರರು ಕವಿತೆ ವಾಚಿಸಿದರು.

ಕವಿ ಜಯಪ್ಪ ಹೊನ್ನಾಳಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಘುನಂದನ್‌ ‘ಆಶಾವಾದಿ’ ಎಂಬ ಕವಿತೆ ಓದಿ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಎನ್‌.ಕೆ. ನಂಜಪ್ಪಗೌಡ, ಬಿಜೆಪಿ ಮುಖಂಡ ಕೆ.ಬಲರಾಂ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ. ಸುರೇಂದ್ರ, ಮಾಜಿ ಅಧ್ಯಕ್ಷ ಪುರುಷೋತ್ತಮ, ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಚಂದಗಾಲು ಶಂಕರ್‌, ಎಚ್‌.ಟಿ. ರಾಜಶೇಖರ್‌, ಕೆ.ಬಿ. ಬಸವರಾಜು, ರಮೇಶ್‌, ದರಸಗುಪ್ಪೆ ಧನಂಜಯ, ಬಿಇಒ ರುಕ್ಸಾನ ನಾಜನೀನ್‌ ಹಾಗೂ ಬಿಆರ್‌ಸಿ ಭಾನುಕುಮಾರ್‌ ಉಪಸ್ಥಿತದ್ದರು.

ಹೊಲ ಉಳುವುದೂ ಕಾವ್ಯ

ಅಕ್ಷರ ಬರೆಯುವುದಷ್ಟೇ ಕವಿತೆಯಲ್ಲ, ಹೊಲ ಉಳುವುದು, ಹುಲ್ಲಿನ ಬಣವೆ ಹಾಕುವುದು ಕೂಡ ಕಾವ್ಯ ಸೃಷ್ಟಿ ಎಂದು ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶಗೌಡ ಹೇಳಿದರು.

ದಸರಾ ಕವಿಗೋಷ್ಠಿ ಉದ್ಘಾಟಿಸಿದ ಅವರು, ‘ಕವಿಗೆ ಶಬ್ದಗಳ ದಾರಿದ್ರ್ಯಇರಬಾರದು. ಪಂಪ, ಕುಮಾರವ್ಯಾಸ, ಕುವೆಂಪು ಅವರ ಕಾವ್ಯಗಳನ್ನು ಓದಬೇಕು. ತಲಸ್ಪರ್ಶಿಯಾದ ಅಧ್ಯಯನ ಮಾಡುವ ಜತೆಗೆ ಆ ಕ್ಷಣದ ವಿದ್ಯಮಾನಗಳಿಗೆ ಪ್ರತಿಕ್ರಿಯಿಸುವ ಜಾಣ್ಮೆಯನ್ನು ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು. ಎರಡು ಚುಟುಕುಗಳನ್ನು ಅವರು ವಾಚಿಸಿದರು.

Post Comments (+)