ಮಂಡ್ಯ: ‘ಪಂಚಮಸಾಲಿಗಳನ್ನು ಯಾವುದೇ ಕಾರಣಕ್ಕೂ ‘2ಎ ಮೀಸಲಾತಿ ಪಟ್ಟಿಗೆ’ ಸೇರಿಸಬಾರದು, ಈಗಿರುವ ಒಳಮೀಸಲಾತಿ ಹೆಚ್ಚಿಸಬೇಕು ಎಂದು ಆಗ್ರಹಿಸಿ ಸೆ.20 ರಂದು ಬೆಂಗಳೂರಿನ ಆನಂದರಾವ್ ಸರ್ಕಲ್‌ನಲ್ಲಿ ಪ್ರತಿಭಟನೆಗೆ ಚಾಲನೆ ನೀಡಲಾಗುವುದು’ ಎಂದು ಕರ್ನಾಟಕ ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ ಗುರುವಾರ ಹೇಳಿದರು.
‘ಪಂಚಮಸಾಲಿ ಸೇರಿದಂತೆ ಲಿಂಗಾಯಿತಗೌಡ, ಮಲೇಗೌಡ ಮತ್ತು ದೀಕ್ಷ ಲಿಂಗಾಯಿತರನ್ನು ಸೇರಿಸಬೇಕೆಂಬ ಶ್ರೀ ಬಸವ ಮೃತ್ಯಂಜಯಸ್ವಾಮಿ ನೇತೃತ್ವದ ಒತ್ತಾಯಕ್ಕೆ ಸರ್ಕಾರ ಮಣಿಯಬಾರದು. ಇದರಿಂದ ಕಾಯಕ ಸಮಾಜಗಳಾದ ವಿಶ್ವಕರ್ಮ, ಕುಂಬಾರ, ಗಾಣಿಗ, ಉಪ್ಪಾರ, ಬಲಿಜಿಗ, ಮಡಿವಾಳ, ಸವಿತಾ ಸಮಾಜ. ಈಡಿಗ, ಹಿಂದೂ ಸಾದರ, ಯಾದವರು, ದೇವಾಂಗ ಶೇಟ್ಟರು ಇತರೆ 104 ಜಾತಿಗಳಿಗೆ ಅನ್ಯಾಯ ಆಗಲಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
‘ಶಿಕ್ಷಣ ಮತ್ತು ಉದ್ಯೋಗದಲ್ಲಿ ಈಗ ನಾವು ಶೇ15 ಮೀಸಲಾತಿಯ ಲಾಭ ಪಡೆಯುತ್ತಿರುವುದನ್ನು ಕಂಡು ಮುಂದುವರಿದ ಜಾತಿಗಳಿಗೆ ಹೊಟ್ಟೆಕಿಚ್ಚು ಬಂದಂತಿದೆ. ನಮ್ಮನ್ನು ಬದುಕಲು ಬಿಡುವುದು ಅವರಿಗೆ ಇಷ್ಟವಿಲ್ಲದಂತೆ ಕಾಣುತ್ತಿದೆ. ಅದಕ್ಕಾಗಿ ಮೀಸಲಾತಿ ದೊರೆಯುವ ನಮ್ಮ ಮಕ್ಕಳ ಶಿಕ್ಷಣ– ಉದ್ಯೋಗ ಕಿತ್ತುಕೊಳ್ಳಲು ಹೊರಟಿದ್ದಾರೆ, ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಮೃತ್ಯುಂಜಯ ಸ್ವಾಮೀಜಿ ವೀರಶೈವರಲ್ಲಿ ಉಪಪಂಗಡದಲ್ಲಿರುವ ಪಂಚಮಸಾಲಿಗಳನ್ನು ಎತ್ತಿಕಟ್ಟುತ್ತಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದರು.
‘2ಎ ನಲ್ಲಿರುವ 104 ಜಾತಿಗಳಲ್ಲಿ ಪ್ರತಿ ವಿಧಾನಸಭೆ ಕ್ಷೇತ್ರದಿಂದಲೂ ಶೇ 60 ರಷ್ಟು ಮತದಾರರಿದ್ದೇವೆ.ಈಗಿರುವ ಶೇ 15 ರಷ್ಟು ಮೀಸಲಾತಿಯನ್ನು ಶೇ 27ಕ್ಕೆ ಹೆಚ್ಚಿಸಿ ಒಳ ಮೀಸಲಾತಿ ಕಲ್ಪಿಸಬೇಕು ಎಂಬ ಬೇಡಿಕೆಯನ್ನಿಟ್ಟುಕೊಂಡು ಸೆ.20 ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದರು.
ಒಕ್ಕೂಟದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬೋರಪ್ಪಶೆಟ್ಟಿ, ವಿಜಯ್‌ಕೊಪ್ಪ, ಲೋಕೇಶ್, ರವಿ, ಕೆ.ಟಿ.ನಾರಾಯಣಶೆಟ್ಟಿ, ಆನಂದ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.