ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಪರಿಹಾರ: ₹100 ಕೋಟಿ ಅವ್ಯವಹಾರ

ಜನರ ಜೀವ ತೆಗೆಯುತ್ತಿರುವ ದಿಲೀಪ್‌ ಬಿಲ್ಡ್‌ ಕಾನ್‌ ಕಂಪನಿ, ಶಾಸಕರು, ಸಂಸದರ ಆಕ್ರೋಶ
Last Updated 29 ಜೂನ್ 2022, 13:21 IST
ಅಕ್ಷರ ಗಾತ್ರ

ಮಂಡ್ಯ: ಬೆಂಗಳೂರು–ಮೈಸೂರು ದಶಪಥ ಕಾಮಗಾರಿ ಪರಿಹಾರ ವಿತರಣೆಯಲ್ಲಿ ಅಧಿಕಾರಿಗಳು ₹100 ಕೋಟಿ ಅವ್ಯವಹಾರ ನಡೆಸಿದ್ದಾರೆ, ಯೋಜನೆ ಜಾರಿಗೊಳಿಸುತ್ತಿರುವ ದಿಲೀಪ್‌ ಬಿಲ್ಡ್‌ಕಾನ್‌ (ಡಿಬಿಎಲ್‌) ಕಂಪನಿ ಜಿಲ್ಲೆಯ ರಸ್ತೆಗಳನ್ನು ಹಾಳುಗೆಡವಿದೆ. ಈ ಎರಡು ವಿಚಾರ ಬುಧವಾರ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತಿಧ್ವನಿಸಿದವು.

ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನೆರವೇರಿತು. ವಿಷಯ ಪ್ರಸ್ತಾಪಿಸಿದ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ‘ಬೆಂಗಳೂರು–ಮೈಸೂರು ದಶಪಥ ಕಾಮಗಾರಿ ಮುಗಿಯುತ್ತಾ ಬಂದಿದೆ. ಆದರೆ ಪರಿಹಾರ ಹಂಚಿಕೆ ವಿಚಾರದಲ್ಲಿ ಅಧಿಕಾರಿಗಳು ನಡೆಸಿರುವ ಅವ್ಯವಹಾರದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ. ಈ ಕುರಿತು ಜಿಲ್ಲಾಧಿಕಾರಿಗೆ 6 ಪತ್ರ ಬರೆದರೂ ಯವುದೇ ಪ್ರಯೋಜನವಾಗಿಲ್ಲ’ ಎಂದು ಆರೋಪಿಸಿದರು.

‘ಈ ಹಿಂದೆ ಇದ್ದ ಜಿಲ್ಲಾಧಿಕಾರಿ ಕೂಡ ಹಗರಣದಲ್ಲಿ ಭಾಗಿಯಾಗಿದ್ದಾರೆ. ರೆವಿನ್ಯೂ ಭೂಮಿಯನ್ನು ಅಕ್ರಮವಾಗಿ ಖಾತೆ ಬದಲಾವಣೆ ಮಾಡಿ ಹೆಚ್ಚುವರಿ ಪರಿಹಾರ ಪಡೆಯಲಾಗಿದೆ. ಅದರಲ್ಲಿ ಅಧಿಕಾರಿಗಳು ಕಮೀಷನ್‌ ಪಡೆದಿದ್ದಾರೆ. ದಲ್ಲಾಳಿಗಳನ್ನ ಇಟ್ಟುಕೊಂಡು ಕೆಲಸ ಮಾಡಿದ್ದಾರೆ. ರಸ್ತೆಯುದ್ದಕ್ಕೂ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದೆ. ₹ 100 ಕೋಟಿ ಹಣ ನುಂಗಿ ಹಾಕಿದ್ದಾರೆ’ ಎಂದು ಆರೋಪಿಸಿದರು. ಆರೋಪಕ್ಕೆ ಶಾಸಕರಾದ ಡಿ.ಸಿ.ತಮ್ಮಣ್ಣ, ಕೆ.ಅನ್ನದಾನಿ, ಶಾಸಕ ಶ್ರೀನಿವಾಸ್‌ ಧ್ವನಿಗೂಡಿಸಿದರು.

ಸಚಿವ ಗೋಪಾಲಯ್ಯ ಪ್ರತಿಕ್ರಿಯಿಸಿ ‘ಪರಿಹಾರ ವಿತರಣೆಯಲ್ಲಿ ಅವ್ಯವಹಾರ ನಡೆದಿದ್ದರೆ ದಾಖಲೆಗಳನ್ನು ಕೊಡಿ. ಮುಖ್ಯಮಂತ್ರಿ, ಕೇಂದ್ರ ಹೆದ್ದಾರಿ ಸಚಿವರಿಗೆ ಪತ್ರ ಬರೆದು ತನಿಖೆ ನಡೆಸಲಾಗುವುದು’ ಎಂದರು.

ಡಿಬಿಎಲ್‌ನಿಂದ ರಸ್ತೆ ಹಾಳು: ಶಾಸಕ ಸಿ.ಎಸ್‌.ಪುಟ್ಟರಾಜು ಮಾತನಾಡಿ ‘ಹೆದ್ದಾರಿ ಕಾಮಗಾರಿಗಾಗಿ ಕಚ್ಚಾ ಸಾಮಗ್ರಿ ತರುವ ಸಂದರ್ಭದಲ್ಲಿ ದಿಲೀಪ್‌ ಬಿಲ್ಡ್‌ ಕಾನ್‌ ಕಂಪನಿ ವಿವಿಧೆಡೆ ರಸ್ತೆಗಳನ್ನು ಹಾಳುಗೆಡವಿದೆ. ಅಗತ್ಯಕ್ಕಿಂತ ಹೆಚ್ಚು ಸಾಮಗ್ರಿ ಸಾಗಿಸಿರುವ ಕಾರಣ ರಸ್ತೆಗಳು ರಸ್ತೆಗಳು ಹಾಳಾಗಿವೆ. ಜೊತೆಗೆ ಅಪಘಾತ ನಡೆಸಿ ಜನರನ್ನು ಕೊಂದು ಹಾಕಿದೆ’ ಎಂದು ಆರೋಪಿಸಿದರು. ಇದಕ್ಕೆ ಶಾಸಕರೆಲ್ಲರೂ ಧ್ವನಿಗೂಡಿಸಿದರು.

‘ಡಿಬಿಎಲ್‌ ಕಂಪನಿ ಲಾರಿಗಳು ನಿಯಮಾನುಸಾರ ಎಷ್ಟು ಸಾಮಗ್ರಿ ತುಂಬಿಕೊಂಡು ಸಾಗಬೇಕು, ಸದ್ಯ ಎಷ್ಟು ಸಾಮಾಗ್ರಿ ತುಂಬಿಕೊಂಡು ಸಾಗುತ್ತಿವೆ. ಕಂಪನಿ ವಿರುದ್ದ ಯಾವ ಕ್ರಮ ಜರುಗಿಸಲಾಗಿದೆ’ ಎಂದು ಸಚಿವ ಕೆ.ಸಿ.ನಾರಾಯಣಗೌಡ ಪ್ರಶ್ನಿಸಿದರು.

ಉತ್ತರ ನೀಡಿದ ಆರ್‌ಟಿಒ ವಿವೇಕಾನಂದ ‘14 ಚಕ್ರ, ಮಲ್ಟಿ ಆ್ಯಕ್ಸೆಲ್‌ ಲಾರಿಗಳು ₹ 20 ಟನ್‌ ವರೆಗೆ ಕಲ್ಲು ಸಾಗಿಸಬಹುದು. ಆದರೆ ₹ 48 ಟನ್‌ವರೆಗೂ ಕಲ್ಲು ತುಂಬಿಕೊಂಡು ತೆರಳುತ್ತಿವೆ. ಈಗಾಗಲೇ 2324 ಪ್ರಕರಣ ದಾಖಲು ಮಾಡಿದ್ದೇವೆ, 74 ಲಾರಿ ವಶಕ್ಕೆ ಪಡೆದಿದ್ದೇವೆ, ₹ 55 ಲಕ್ಷ ದಂಡ ವಸೂಲಿ ಮಾಡಿದ್ದೇವೆ’ ಎಂದರು.

ಇದಕ್ಕೆ ಕೆಂಡಾಮಂಡಲರಾದ ಸಚಿವ ನಾರಾಯಣಗೌಡ ‘ನೀವು ವಸೂಲಿ ಮಾಡಿರುವ ₹ 55 ಲಕ್ಷದಲ್ಲಿ ಅರ್ಧ ಕಿ.ಮೀ ರಸ್ತೆ ದುರಸ್ತಿ ಮಾಡಲು ಸಾಧ್ಯವಿಲ್ಲ. ಕೂಡಲೇ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು. ಡಿಬಿಎಲ್‌ ಕಂಪನಿ ಅಧಿಕಾರಿಗಳು ರಸ್ತೆ ದುರಸ್ತಿ ಮಾಡಬೇಕು’ ಎಂದು ಸೂಚಿಸಿದರು.

ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಮಾತನಾಡಿ ‘ದಶಪಥ ಕಾಮಗಾರಿಯುದ್ದಕ್ಕೂ ಹಲವು ಸಮಸ್ಯೆಗಳಿದ್ದು ಅವುಗಳ ಪರಿಹಾರಕ್ಕಾಗಿ ಉಸ್ತುವಾರಿ ಸಚಿವರು ಒಂದು ದಿನ ಮೀಸಲಿಡಬೇಕು. ಅಧಿಕಾರಿಗಳ ಜೊತೆ ಜಿಲ್ಲಾ ವ್ಯಾಪ್ತಿಯ ಹೆದ್ದಾರಿ ಪರಿಶೀಲನೆ ಮಾಡಬೇಕು. ಹೆದ್ದಾರಿ ಉದ್ಘಾಟನೆಯಾದರೆ ಸಮಸ್ಯೆಗಳು ಬಗೆಹರಿಯುವುದಿಲ್ಲ’ ಎಂದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರಾಮಪ್ರಸಾತ್‌ ಮನೋಹರ್‌, ಜಿಲ್ಲಾಧಿಕಾರಿ ಎಸ್‌.ಅಶ್ವತಿ, ಜಿ.ಪಂ ಸಿಇಒ ದಿವ್ಯಾಪ್ರಭು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ರುದ್ರನ್‌ ಇದ್ದರು.

ಅಧೀಕ್ಷಕ ಎಂಜನಿಯರ್‌ ಅಮಾನತಿಗೆ ಸೂಚನೆ

ಕೆಆರ್‌ಎಸ್‌ ಜಲಾಶಯದಿಂದ ನಾಲೆಗಳಿಗೆ ನೀರು ನಿಲ್ಲಿಸಿರುವುದನ್ನು ಶಾಸಕರು, ಸಂಸದೆ ಪ್ರಶ್ನಿಸಿದರು. ‘ಲೈನಿಂಗ್‌ ಕಾಮಗಾರಿ ನಡೆಯುತ್ತಿರುವ ಕಾರಣ ನೀರು ನಿಲ್ಲಿಸಲಾಗಿದೆ’ ಎಂದು ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜನಿಯರ್‌ ಎಚ್‌.ಆನಂದ್‌ ಉತ್ತರಿಸಿದರು. ಅಧಿಕಾರಿಯ ಉತ್ತರ ಜನಪ್ರತಿನಿಧಿಗಳ ಆಕ್ರೋಶಕ್ಕೆ ಕಾರಣವಾಯಿತು.

ಸಚಿವ ನಾರಾಯಣಗೌಡ ‘ಯಾರನ್ನು ಕೇಳಿ ಕಾಮಗಾರಿ ಮಾಡುತ್ತಿದ್ದೀರಿ, ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದೀರಾ? ಕೂಡಲೇ ಈ ಅಧಿಕಾರಿಯನ್ನು ಅಮಾನತು ಮಾಡಿ’ ಜಿಲ್ಲಾಧಿಕಾರಿಗೆ ಸೂಚಿಸಿದರು. ಕೂಡಲೇ ನಾಲೆಗಳಿಗೆ ನೀರು ಹರಿಸುವಂತೆ ಉಸ್ತುವಾರಿ ಸಚಿವ ಗೋಪಾಲಯ್ಯ ಸೂಚಿಸಿದರು.

‘ಝಳಪಿಸುತ್ತಿವೆ ಮಚ್ಚು’

‘ಜಿಲ್ಲೆಯಾದ್ಯಂತ ಅಪರಾಧಿಕ ಪ್ರಕರಣಗಳು ಹೆಚ್ಚಳವಾಗುತ್ತಿದ್ದು ಮಚ್ಚು, ಕತ್ತಿಗಳು ಝಳಪಿಸುತ್ತಿವೆ. ಪಾಂಡವಪುರ, ಮಳವಳ್ಳಿ ಸೇರಿ ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಕೊಲೆ ಪ್ರಕರಣಗಳು ಜನರಲ್ಲಿ ಭೀತಿ ಸೃಷ್ಟಿ ಮಾಡಿವೆ. ಕಿಡಿಗೇಡಿಗಳು ವಿಡಿಯೊ ಮಾಡಿ ಕೊಲೆ ಮಾಡುತ್ತಿದ್ದಾರೆ, ಅಪರಿಚಿತ ಮೃತದೇಹಗಳು ಪತ್ತೆಯಾಗುತ್ತಿವೆ. ಪ್ರಕರಣ ಪತ್ತೆ ಮಾಡುವಲ್ಲಿ ಪೊಲೀಸ್‌ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ’ ಎಂದು ಶಾಸಕ ಸಿ.ಎಸ್‌.‍ಪುಟ್ಟರಾಜು ಆರೋಪಿಸಿದರು.

ಕೇರಳಕ್ಕೆ ರಸಗೊಬ್ಬರ ಸರಬರಾಜು

‘ಜಿಲ್ಲೆಯಲ್ಲಿ ರಸಗೊಬ್ಬರ ಅವ್ಯವಹಾರ ತೀವ್ರಗೊಂಡಿದೆ. ಕೇರಳ ಸೇರಿದಂತೆ ಹೊರರಾಜ್ಯಗಳಿಗೆ ರಸಗೊಬ್ಬರ ರವಾನೆಯಾಗುತ್ತಿದೆ. ಸೊಸೈಟಿಗಳಿಗೆ ಗೊಬ್ಬರ ಸಿಗುತ್ತಿಲ್ಲ, ಆದರೆ ಖಾಸಗಿ ವ್ಯಾಪಾರಿಗಳಿಗೆ ಹೆಚ್ಚಿನ ಗೊಬ್ಬರ ಸಿಗುತ್ತಿದೆ. ಈ ಕುರಿತು ಮುಖ್ಯಮಂತ್ರಿಗಳು ತನಿಖೆಗೆ ಸೂಚಿಸಿದ್ದಾರೆ. ಆದರೆ ತನಿಖೆ ಯಾವ ಹಂತದಲ್ಲಿದೆ ಎಂಬುದೇ ತಿಳಿಯದಾಗಿದೆ’ ಎಂದು ಶಾಸಕ ಡಿ.ಸಿ.ತಮ್ಮಣ್ಣ ಅಸಮಾಧಾನ ವ್ಯಕ್ತಪಡಿಸಿದರು. ‘ಈ ಬಗ್ಗೆ ಶೀಘ್ರ ಮಾಹಿತಿ ಪಡೆಯಲಾಗುವುದು’ ಎಂದು ಉಸ್ತುವಾರಿ ಸಚಿವರು ತಿಳಿಸಿದರು.

ಶಾಸಕರಿಗೆ ಧ್ವನಿಗೂಡಿಸಿದ ಸುಮಲತಾ

ದಶಪಥ ಕಾಮಗಾರಿ ಕುರಿತಂತೆ ಶಾಸಕರ ಆರೋಪಗಳಿಗೆ ಸಂಸದೆ ಸುಮಲತಾ ಕೂಡ ಧ್ವನಿಗೂಡಿಸಿದರು. ‘ಕೇವಲ ಬೆಂಗಳೂರು ಹಾಗೂ ಮೈಸೂರು ಸಂಪರ್ಕದ ಬಗ್ಗೆ ಹೆಚ್ಚು ಗಮನ ಹರಿಸಲಾಗಿದೆ. ಮಧ್ಯ ಬರುವ ಜನರ ಸಮಸ್ಯೆಗಳ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಅವೈಜ್ಞಾನಿಕ ಕಾಮಗಾರಿಯಿಂದಾಗಿ ಹಳ್ಳಿ ಜನರಿಗೆ, ಶಾಲಾ ಮಕ್ಕಳಿಗೆ ತೊಂದರೆ ಉಂಟಾಗಿದೆ’ ಎಂದು ಸುಮಲತಾ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT