ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಸ್ರ ಕೆರೆಗಳ ಸರದಾರ ಮಾಗಡಿ ಕೆಂಪೇಗೌಡ

ಜಿಲ್ಲಾಡಳಿತದಿಂದ ಜಯಂತಿ, ಭಾವಚಿತ್ರ ಮೆರವಣಿಗೆ; ಚಿಂತಕ ವರ್ಷ ಅಭಿಮತ
Last Updated 27 ಜೂನ್ 2019, 15:32 IST
ಅಕ್ಷರ ಗಾತ್ರ

ಮಂಡ್ಯ: ‘ಜೀವಜಲದ ಮಹತ್ವ ಅರಿತಿದ್ದ ಮಾಗಡಿ ಕೆಂಪೇಗೌಡರು ಸಾವಿರಾರು ಕೆರೆ ನಿರ್ಮಾಣ ಮಾಡಿದ್ದರು. ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು ಯುವಜನರು ಅವುಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಚಿಂತಕ ಡಾ.ಎಂ.ಪಿ.ವರ್ಷ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ನಗರದ ಕಲಾಮಂದಿರದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ನಮ್ಮ ನಾಡಿನ ಸಾವಿರ ಕೆರೆಗಳ ಸರದಾರ ನಾಡಪ್ರಭು ಕೆಂಪೇಗೌಡ ಅವರು ಕ್ರಿಯಾಶೀಲ, ಮೇಧಾವಿ, ಉದಾರಿ, ಮಾನವೀಯತೆ ಹಾಗೂ ದೈವೀಭಕ್ತಿ ಹೊಂದಿದ್ದರು. ಸದ್ಗುಣಗಳ ಸರದಾರ ಆಗಿದ್ದರು. ಕೆಂಪೇಗೌಡರ ತಾತ ರಣಭೈರೇಗೌಡ ಅವರು ತಮಿಳುನಾಡಿನಿಂದ ಕರ್ನಾಟಕಕ್ಕೆ ವಲಸೆ ಬಂದಿದ್ದರು. ಒಕ್ಕಲುತನ ಮಾಡುತ್ತಾ ಕೃಷಿಗೆ ಬೇಕಾದ ನೀರಾವರಿ ವ್ಯವಸ್ಥೆ ಕಲ್ಪಿಸುವ ಮೂಲಕ ಪ್ರಸಿದ್ಧಿ ಪಡೆದರು. ವಿಜಯನಗರ ಅರಸ ಶ್ರೀಕೃಷ್ಣದೇವರಾಯನಿಗೆ ಯಲಹಂಕದ ಪಾಳೇಗಾರರಾದ ಕೆಂಪೇಗೌಡ ಹೆಚ್ಚು ಆತ್ಮೀಯರಾಗಿದ್ದರು’ ಎಂದರು.

‘ರಾಜ್ಯದಾದ್ಯಂತ ಮಳೆ ಕೊರತೆಯಾಗಿದೆ. ಬೆಳೆಗಳಿಗೆ ನೀರು ಸಿಗದ ಕಾರಣ ರೈತರು ಚಿಂತೆಯಲ್ಲಿದ್ದಾರೆ. ಹೀಗಾಗಿ ಕೆಂಪೇಗೌಡರ ಜಯಂತಿಯ ವೈಭವ ಕಡಿಮೆಯಾಗಿದೆ. ನಾವು ಎದುರಿಸುತ್ತಿರುವ ನೀರಿನ ಸಮಸ್ಯೆಯನ್ನು 500 ವರ್ಷಗಳ ಹಿಂದೆಯೇ ಕೆಂಪೇಗೌಡರು ಅರಿತಿದ್ದರು. ಬೆಂಗಳೂರು ಸುತ್ತಲೂ ಸಾವಿರಾರು ಕೆರೆ ನಿರ್ಮಿಸಿ ರೈತರಿಗೆ ಆಸರೆಯಾದರು. ಹೀಗಾಗಿ ಅವರನ್ನು ಸಾವಿರ ಕೆರೆಗಳ ಸರದಾರ ಎಂದು ಕರೆಯಲಾಗುತ್ತದೆ. ಬೆಂಗಳೂರಿನ ಕೆಂಪಾಂಬುದಿ ಕೆರೆ, ಧರ್ಮಾಂಬುದಿ ಕೆರೆ, ಸಂಪಂಗಿ ಕೆರೆ, ಕಾರಂಜಿ ಕೆರೆ, ಅಗ್ರಹಾರ ಕೆರೆ, ಸಿದ್ಧಿ ಕೆರೆ, ಹಲಸೂರು ಕೆರೆ ಹೀಗೆ ಹಲವು ಕೆರೆ ನಿರ್ಮಿಸಿ ಜೀವಜಲ ಸಂಗ್ರಹಕ್ಕೆ ನೆರವಾದರು’ ಎಂದು ಹೇಳಿದರು.

‘ಈಗ ಬೆಂಗಳೂರಿನಲ್ಲಿ ಅನೇಕ ಕೆರೆಗಳನ್ನು ಮುಚ್ಚಿ ನಗರ ನಿರ್ಮಾಣ ಮಾಡಲಾಗುತ್ತಿದೆ. ಈ ಕಾರಣದಿಂದಾಗಿಯೇ ಅತೀವೃಷ್ಟಿ, ಅನಾವೃಷ್ಟಿ ಸಂಭವಿಸುತ್ತಿದೆ. ಬೆಂಗಳೂರಿನಲ್ಲಿ ಮಳೆ ಜಾಸ್ತಿಯಾದರೆ ಭೂಕುಸಿತಗಳು ಸಂವಿಸುತ್ತಿವೆ. ಇದನ್ನು ತಡೆಯಲು ಕೆಂಪೇಗೌಡರು ನಿರ್ಮಿಸಿಕೊಟ್ಟ ಕೆರೆಗಳನ್ನು ಶುದ್ಧ ರೂಪದಲ್ಲಿ ಉಳಿಕೊಂಡು ಹೋಗುವುದು ಅನಿವಾರ್ಯವಾಗಿದೆ’ ಎಂದರು.

ಆದಿಚುಂಚನಗಿರಿ ಕ್ಷೇತ್ರದ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ ಮಾತನಾಡಿ ‘ಎಲ್ಲಾ ವರ್ಗದ ಜನರ ನೆಮ್ಮದಿ ಜೀವನಕ್ಕಾಗಿ ಬೆಂಗಳೂರು ವಿಶ್ವದಲ್ಲಿಯೇ ಅತ್ಯಂತ ಸುಸಜ್ಜಿತ ನಗರಗಳ ಸಾಲಿನಲ್ಲಿ ನಿಲ್ಲುತ್ತದೆ. ಕೆಂಪೇಗೌಡರು 500 ವರ್ಷದ ಹಿಂದೆಯೇ ಅಂತಹ ವಾತಾವರಣ ನಿರ್ಮಿಸಿದ್ದಾರೆ. ನಗರದ ನಾಲ್ಕು ದಿಕ್ಕಿಗೂ ಗಡಿ, ಮಧ್ಯದಲ್ಲಿ ಕೋಟೆ ಹಾಗೂ ಅಲ್ಲಲ್ಲಿ ವಾಣಿಜ್ಯ ಕೇಂದ್ರಗಳನ್ನು ತೆರೆದು ಅನುಕೂಲ ಮಾಡಿಕೊಟ್ಟಿದ್ದಾರೆ. ರಾಜಕೀಯ ನಾಯಕರು ಕೇವಲ ಮಾತಿನ ಭರವಸೆ ನೀಡದೆ ಕೆಂಪೇಗೌಡರಂತೆ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಕೆಂಪೇಗೌಡರ ಭಾವಚಿತ್ರವನ್ನು ನಗರದ ಸಿಲ್ವರ್ ಜ್ಯೂಬಿಲಿ ಉದ್ಯಾನದಿಂದ ಜಿಲ್ಲಾಧಿಕಾರಿ ಕಚೇರಿ ಹಾಗೂ ಕಲಾಮಂದಿರದವರೆಗೆ ವಿವಿಧ ವಾದ್ಯ ಗೋಷ್ಠಿಗಳು ಮತ್ತು ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆಯಲ್ಲಿ ಮಾಡಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎ.ಆರ್.ಬಲರಾಮೇಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೀಶ್, ಮಂಡ್ಯ ಉಪವಿಭಾಗಾಧಿಕಾರಿ ಎಂ.ಆರ್.ರಾಜೇಶ್, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಗಣಪತಿ ನಾಯಕ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶೈಲಜಾ, ತಹಶೀಲ್ದಾರ್‌ ನಾಗೇಶ್, ಒಕ್ಕಲಿಗರ ಸೇವಾ ಟ್ರಸ್ಟ್ ಅಧ್ಯಕ್ಷ ನಾಗಣ್ಣ ಬಾಣಸವಾಡಿ, ಮುಖಂಡರಾದ ಕೆ.ಟಿ.ಚಂದ್ರು, ಅಶೋಕ್‌ ಕುಮಾರ್ ಇದ್ದರು.

ಕೆಂಪೇಗೌಡ ಪ್ರಶಸ್ತಿ ಪ್ರದಾನ
ಸರ್ಕಾರಿ ನೌಕರಿಯಲ್ಲಿ ಉತ್ತಮ ಸೇವೆಗಾಗಿ ಎಸ್.ರಾಜಮೂರ್ತಿ, ಸುಚೇತಾ, ಜೆ.ನಂಜುಂಡೇಗೌಡ ಹಾಗೂ ಎಚ್.ಆರ್.ಸತೀಶ್ ಅವರಿಗೆ ಕೆಂಪೇಗೌಡ ಸರ್ಕಾರಿ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಂಗಭೂಮಿ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದ ಕಾರಸವಾಡಿ ಶಿವಲಿಂಗೇಗೌಡ, ರೈತ ಹೋರಾಟ ಕ್ಷೇತ್ರದಲ್ಲಿ ಶಂಭೂನಹಳ್ಳಿ ಸುರೇಶ್, ಮಹಿಳಾ ಕಲ್ಯಾಣಕ್ಕಾಗಿ ಕೆ.ಪಿ.ಅರುಣಕುಮಾರಿ, ಅಂತರಾಷ್ಟ್ರೀಯ ಕ್ರೀಡಾಪಟು ಬೋರೇಗೌಡ, ಸಂಘಟನೆ ಕ್ಷೇತ್ರ ಎಂ.ಕೃಷ್ಣ ಅವರಿಗೆ ಕೆಂಪೇಗೌಡ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT