ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಹಳ್ಳಿ ಬಳಿ ಮತ್ತೆ ಕೇರಳ ತ್ಯಾಜ್ಯ

ತ್ಯಾಜ್ಯ ಘಟಕ ಬಂದ್‌ ಮಾಡಿಸಿದ ತಹಶೀಲ್ದಾರ್‌ ಎಂ.ವಿ.ರೂಪಾ
Last Updated 4 ಮಾರ್ಚ್ 2020, 9:28 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಪಾಲಹಳ್ಳಿ ಸಮೀಪ ಕೇರಳ ರಾಜ್ಯದಿಂದ ಮತ್ತೆ ತ್ಯಾಜ್ಯ ತಂದು ಸುರಿಯಲಾಗಿದೆ.

ಕೇರಳ ನೋಂದಣಿ ಸಂಖ್ಯೆಯ (ಕೆಎಲ್‌ 58, ಎಬಿ–1215) ಲಾರಿಯನ್ನು ಕಂದಾಯ ನಿರೀಕ್ಷಕ ಉಮೇಶ್‌ ಹಾಗೂ ಇತರರು ಬೆನ್ನಟ್ಟಿದಾಗ ಎರಡು ತ್ಯಾಜ್ಯ ಸಂಗ್ರಹ ಘಟಕಗಳು ಪತ್ತೆಯಾಗಿವೆ.

ಗ್ರಾಮದ ವೆಂಕಟೇಶ್‌ ಎಂಬುವರ ಜಮೀನನ್ನು ಬಾಡಿಗೆ ಪಡೆದಿದ್ದ, ಮೈಸೂರಿನ ಖದೀರ್‌ ರಿಜ್ವಾನ್‌ ಎಂಬುವರು ಕೇರಳದಿಂದ ತರಿಸಿದ್ದ ಕಸವನ್ನು ಸಂಗ್ರಹಿಸಿ, ವಿಂಗಡಿಸಿ ಮಾರಾಟ ಮಾಡುತ್ತಿದ್ದ ಅಂಶ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್‌ ಎಂ.ವಿ.ರೂಪಾ ತ್ಯಾಜ್ಯ ಘಟಕವನ್ನು ಬಂದ್‌ ಮಾಡಿಸಿದರು. ಕೇರಳದಿಂದ ತ್ಯಾಜ್ಯ ಹೊತ್ತು ತಂದಿದ್ದ ಒಂದು ಲಾರಿಯನ್ನೂ ವಶಕ್ಕೆ ಪಡೆದರು.

ಸೇಂಟ್‌ ಆ್ಯನ್ಸ್‌ ಶಾಲೆ ಹಿಂಭಾಗ ಪಿ.ಎನ್‌.ಲೋಕೇಶ್‌ ಎಂಬುವರ ಆಲೆಮನೆಯನ್ನು ಬಾಡಿಗೆ ಪಡೆದಿದ್ದ ಮೈಸೂರಿನ ಸಲೀಂ ಖಾನ್‌ ಅವರ ಪತ್ನಿ ಶಾಹೀನ್‌ ತಾಜ್‌ ಕೂಡ ಕೇರಳದಿಂದ ತ್ಯಾಜ್ಯ ತರಿಸಿ ಸಂಗ್ರಹಿಸಿದ್ದರು. ಅಲ್ಲಿಗೆ ಪೊಲೀಸರೊಂದಿಗೆ ಭೇಟಿ ನೀಡಿದ ತಹಶೀಲ್ದಾರ್‌, ಘಟಕವನ್ನು ಮುಚ್ಚುವಂತೆ ಸೂಚಿಸಿದರು. ಶಾಹೀನ್‌ ಅವರನ್ನು ವಿಚಾರಣೆಗಾಗಿ ಪಟ್ಟಣ ಪೊಲೀಸ್‌ ಠಾಣೆಗೆ ಕರೆದೊಯ್ದರು. ಲಾರಿಯ ಚಾಲಕ ಮತ್ತು ಕ್ಲೀನರ್‌ ತಲೆಮರೆಸಿಕೊಂಡಿದ್ದಾರೆ. ಐದಾರು ವರ್ಷಗಳಿಂದ ಇಲ್ಲಿಗೆ ಕೇರಳದಿಂದ ತ್ಯಾಜ್ಯ ಬರುತ್ತಿದೆ.

‘ಕೇರಳದಿಂದ ಕಸ ಸಂಗ್ರಹಿಸಿ, ಇಲ್ಲಿಂದ ಬೇರೆಡೆ ಮಾರಾಟ ಮಾಡುವ ದಂಧೆ ನಡೆಯುತ್ತಿದೆ. ಇಂತಹ ಎರಡು ಘಟಕಗಳು ಪಾಲಹಳ್ಳಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಗೊತ್ತಾಗಿದೆ. ಇವುಗಳನ್ನು ಬಂದ್‌ ಮಾಡಲಾಗಿದೆ. ಜಿಲ್ಲಾಧಿಕಾರಿ ಮತ್ತು ಪರಿಸರ ಇಲಾಖೆ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು’ ಎಂದು ರೂಪಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT