ಭಾನುವಾರ, ಆಗಸ್ಟ್ 18, 2019
25 °C

ಮಕ್ಕಳು ಇನ್ನೆರಡು ದಿನ ಆಸ್ಪತ್ರೆಯಲ್ಲಿ

Published:
Updated:

ಮಂಡ್ಯ: ಕ್ರಿಮಿನಾಶಕ ಮಿಶ್ರಿತ ನೀರು ಸೇವಿಸಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎ.ಹುಲ್ಲೆಕೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 11 ವಿದ್ಯಾರ್ಥಿಗಳನ್ನು ಇನ್ನೂ ಎರಡು ದಿನ ಆಸ್ಪತ್ರೆಯಲ್ಲೇ ಇಟ್ಟುಕೊಂಡು ನಿಗಾ ವಹಿಸಲು ವೈದ್ಯರು ನಿರ್ಧರಿಸಿದ್ದಾರೆ.

‘ರಕ್ತ ಪರೀಕ್ಷೆಯಲ್ಲಿ ಯಾವುದೇ ವಿಷಕಾರಕ ಅಂಶ ಕಂಡುಬಂದಿಲ್ಲ. ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಆದರೂ ಹೊಟ್ಟೆಯಲ್ಲಿ ಕ್ರಿಮಿನಾಶಕದ ಅಂಶ ಸಂಗ್ರಹವಾಗಿರುವ ಸಾಧ್ಯತೆ ಇರುತ್ತದೆ. ಹೀಗಾಗಿ ಇನ್ನೆರಡು ದಿನ ನಿಗಾ ವಹಿಸಲು ನಿರ್ಧರಿಸಲಾಗಿದೆ. ಘಟನೆಯ ದಿನ ಮಕ್ಕಳು ವಾಂತಿ ಮಾಡಿಕೊಂಡ ಮಾದರಿಯನ್ನು ರಾಜ್ಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಮಕ್ಕಳನ್ನು ಮನೆಗೆ ಕಳುಹಿಸಲಾಗುವುದು’ ಎಂದು ಮಿಮ್ಸ್‌ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ತಮ್ಮಣ್ಣ ತಿಳಿಸಿದರು.

ಪೋಷಕರ ಆರೋಪ: ‘ಮಕ್ಕಳೆಲ್ಲರೂ ಉಷಾರಾಗಿದ್ದಾರೆ, ಬುಧವಾರ ಮನೆಗೆ ಕಳುಹಿಸಲಾಗುವುದು ಎಂದು ಡಿಎಚ್‌ಒ ಹೇಳಿದ್ದರು. ಆದರೆ ಈಗ ಇನ್ನೂ ಎರಡು ದಿನ ಉಳಿಸಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ಸಮಸ್ಯೆ ಇದ್ದರೆ ಉಳಿಸಿಕೊಳ್ಳಲಿ, ಆದರೆ ಸಂಸದೆ ಸುಮಲತಾ ಅವರು ಬರುತ್ತಾರೆ ಎಂಬ ಕಾರಣಕ್ಕೆ ಮಕ್ಕಳನ್ನು ಆಸ್ಪತ್ರೆಯಲ್ಲೇ ಉಳಿಸಿಕೊಂಡಿದ್ದಾರೆ’ ಎಂದು ಪೋಷಕರೊಬ್ಬರು ತಿಳಿಸಿದರು.

ಶಾಲಾ ಆವರಣದಲ್ಲಿದ್ದ ನೀರಿನ ಪ್ಲಾಸ್ಟಿಕ್‌ ಟ್ಯಾಂಕ್‌ ಹಾಗೂ ಪೈಪ್‌ಲೈನ್‌ಗಳನ್ನು ಬದಲಾವಣೆ ಮಾಡಲಾಗಿದೆ. ಶಾಲೆಯಲ್ಲಿ ಎಂದಿನಂತೆ ತರಗತಿಗಳು ನಡೆಯುತ್ತಿವೆ. ಘಟನೆಗೆ ಕಾರಣ ಯಾರು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಪೊಲೀಸ್‌ ಸಿಬ್ಬಂದಿ ಗ್ರಾಮದಲ್ಲೇ ಇದ್ದು ತನಿಖೆ ನಡೆಸುತ್ತಿದ್ದಾರೆ.

Post Comments (+)