ಕೊಡಗು ಜಿಲ್ಲೆಗೆ 100 ಗೃಹರಕ್ಷಕ ಸಿಬ್ಬಂದಿ

7
ಪ್ರವಾಹಪೀಡಿತರಿಗೆ ನೆರವಿನ ಮಹಾಪೂರ;‌ ವಿವಿಧ ಸಂಘಟನೆಗಳಿಂದ ಸಹಾಯಾಸ್ತ

ಕೊಡಗು ಜಿಲ್ಲೆಗೆ 100 ಗೃಹರಕ್ಷಕ ಸಿಬ್ಬಂದಿ

Published:
Updated:
Deccan Herald

ಮಂಡ್ಯ: ಭೀಕರ ಪ್ರವಾಹದಿಂದ ಸಂತ್ರಸ್ತರಾಗಿರುವ ಕೊಡಗು ಜಿಲ್ಲೆಯ ಜನರ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಳ್ಳಲು ಜಿಲ್ಲಾ ಗೃಹರಕ್ಷಕ ದಳದ 100 ಸಿಬ್ಬಂದಿ ಶನಿವಾರ ಪ್ರವಾಹ ಪೀಡಿತ ಸ್ಥಳಕ್ಕೆ ತೆರಳಿದರು.

ಶನಿವಾರ ಮಧ್ಯಾಹ್ನ ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ತೆರಳಿದರು. ಮೇಲಾಧಿಕಾರಿಗಳಿಂದ ಶುಕ್ರವಾರ ರಾತ್ರಿ ಕೆರೆ ಬಂದ ಹಿನ್ನೆಲೆಯಲ್ಲಿ ಸಿಬ್ಬಂದಿಯನ್ನು ಕಳುಹಿಸಲಾಯಿತು. ಅಗತ್ಯ ಮಾರ್ಗದರ್ಶನದೊಂದಿಗೆ ಜಿಲ್ಲಾ ಗೃಹ ರಕ್ಷಕ ದಳದ ಕಮಾಂಡೆಂಟ್‌ ಕೆ.ಎಂ.ಮಹೇಶ್ ಸಿಬ್ಬಂದಿಯನ್ನು ಕಳುಹಿಸಿಕೊಟ್ಟರು.

‘ಕೊಡಗು ಜಿಲ್ಲೆಯ ಜನರಿಗೆ ಸಹಾಯದ ಅವಶ್ಯಕತೆ ಇದೆ. ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡು ಜನರಲ್ಲಿ ಆತ್ಮವಿಶ್ವಾಸ ಮೂಡಿಸುವಂತೆ ನಮ್ಮ ಸಿಬ್ಬಂದಿಗೆ ತಿಳಿಸಲಾಗಿದೆ. ಅಗತ್ಯ ಎಚ್ಚರಿಕಾ ಕ್ರಮಗಳನ್ನು ಕೈಗೊಂಡು ಜನರನ್ನು ರಕ್ಷಣೆ ಮಾಡುತ್ತಾರೆ. ಅದಕ್ಕೆ ಅಗತ್ಯವಿರುವ ಎಲ್ಲಾ ಪರಿಕರಗಳನ್ನು ಕಳುಹಿಸಲಾಗಿದೆ’ ಎಂದು ಕೆ.ಎಂ.ಮಹೇಶ್‌ ತಿಳಿಸಿದರು.

ನೆರವಿನ ಮಹಾಪೂರ: ಪ್ರವಾಹದಿಂದ ಸಂತ್ರಸ್ತರಾಗಿರುವ ಕೊಡಗು ಜಿಲ್ಲೆಯ ಜನರಿಗೆ ಜಿಲ್ಲೆಯ ವಿವಿಧ ಸಂಘಟನೆಗಳು ಸಹಾಯಸ್ತ ಚಾಚಿವೆ. ಶನಿವಾರ ವಿವಿಧ ವಾಹನಗಳಲ್ಲಿ ಮೂಲ ಅವಶ್ಯಕ ವಸ್ತುಗಳನ್ನು ಪ್ರವಾಹಪೀಡಿತ ಸ್ಥಳಕ್ಕೆ ರವಾನಿಸಲಾಗಿದೆ ‘ರೋಟರಿ ಕ್ಲಬ್‌ ಆಫ್‌ ಸಕ್ಕರೆ ನಾಡು ಮಂಡ್ಯ’ ಸಂಘಟನೆಯ ಸದಸ್ಯರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಅಲ್ಲಿಯ ಜನರಿಗೆ ತಿನಿಸುಗಳನ್ನು ರವಾನಿಸಿದರು. ಬ್ರೆಡ್‌, ಬಿಸ್ಕತ್‌, ನೀರಿನ ಬಾಟಲ್‌, ರಸ್ಕ್‌, ಗ್ಲೂಕೋಸ್‌, ಸಂರಕ್ಷಣೆ ಮಾಡಿ ಇಡಬಹುದಾದ ಹಾಲು, ಚಪಾತಿ ಮುಂತಾದ ತಿನಿಸುಗಳನ್ನು ಕಳುಹಿಸಿದರು.

ಚಾಮಲಾಪುರ ಗ್ರಾಮಸ್ಥರ ನೆರವು: ಜಿಲ್ಲಾಧಿಕಾರಿ ಕಚೇರಿಯಲ್ಲಿ ತೆರೆದಿರುವ ಸಂತ್ರಸ್ತರ ಪರಿಹಾರ ಕೇಂದ್ರಕ್ಕೆ ತಾಲ್ಲೂಕಿನ ಚಾಮಲಾಪುರ ಗ್ರಾಮಸ್ಥರು ಆಹಾರ ಸಾಮಾಗ್ರಿ ಹಾಗೂ ಧನ ಸಹಾಯ ಮಾಡಿದರು. 12 ಕ್ವಿಂಟಲ್ ಅಕ್ಕಿ, 15 ಕೆ.ಜಿ. ಬೇಳೆ, ಒಂದು ಕ್ವಿಂಟಲ್ ಬೆಲ್ಲ ಹಾಗೂ ₹ 5 ಸಾವಿರ ಹಣ ಸಹಾಯ ಮಾಡಿದ್ದಾರೆ. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ.ವಿಜಯ್ ಅಗತ್ಯ ವಸ್ತುಗಳನ್ನು ಸ್ವೀಕರಿಸಿದರು.

‘ಅಕ್ಕಿ, ಬೇಳೆ, ನಗದು ನೀಡುವ ಮೂಲಕ ನಮ್ಮ ಗ್ರಾಮದ ಜನರು ಮಾನವೀಯತೆ ತೋರಿದ್ದಾರೆ. ಗ್ರಾಮದಲ್ಲಿ ಇನ್ನೂ ಹೆಚ್ಚಿನ ನೆರವು ಸಿಕ್ಕಲ್ಲಿ ಸಂತ್ರಸ್ತರ ಕೇಂದ್ರಕ್ಕೆ ನೀಡಲಾಗುವುದು’ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ್‌ ಚಾಮಲಾಪುರ ಹೇಳಿದರು.

ವಕೀಲರ ಸಹಾಯ: ವಕೀಲರ ಸಂಘದ ವತಿಯಿಂದ ಸದಸ್ಯರು ₹ 45 ಸಾವಿರ ಸಂಗ್ರಹಿಸಿ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಿದರು. ಜೊತೆಗೆ ಅಕ್ಕಿ ಬೇಳೆ, ಬೆಡ್‌ ಶೀಟ್‌, ಚಾಪೆ ಮುಂತಾದ ವಸ್ತುಗಳನ್ನು ಕಳುಹಿಸಿಕೊಟ್ಟರು.

ಸಂತ್ರಸ್ತರ ಪರಿಹಾರ ಕೇಂದ್ರ ಸ್ಥಾಪನೆ

ಕೊಡಗು ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ನೆರವಾಗಲು ಜಿಲ್ಲಾಡಳಿತ ಮುಂದಾಗಿದ್ದು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರವಾಹ ಸಂತ್ರಸ್ತರ ಪರಿಹಾರ ಕೇಂದ್ರ ಸ್ಥಾಪಿಸಿದೆ.

ಜನರು ನೀಡುವ ದೇಣಿಗೆ, ಆಹಾರ ಸಾಮಾಗ್ರಿ ಹಾಗೂ ಇತರ ಅವಶ್ಯಕ ವಸ್ತುಗಳನ್ನು ಸ್ವೀಕರಿಸಲು ಜಿಲ್ಲಾಧಿಕಾರಿ ಕಚೇರಿಯ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕುಬೇರಪ್ಪ ಅವರನ್ನು ನೇಮಕ ಮಾಡಲಾಗಿದೆ.

ಧನ ಸಹಾಯ ಮಾಡಬಯಸುವ ಸಾರ್ವಜನಿಕರು ‘ಕೊಡಗು ಫ್ಲಡ್‌ ರಿಲೀಫ್ ಫಂಡ್- ಮಂಡ್ಯ’ ಹೆಸರಿನಲ್ಲಿ ವಿಜಯ ಬ್ಯಾಂಕ್‍ ಖಾತೆಗೆ (ಖಾತೆ ಸಂಖ್ಯೆ: 114101101000054) ಹಣ ಜಮೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ದೂ: 08232-231111, ಮೊ: 8073995839 ಸಂಪರ್ಕಿಸಬಹುದು.

ಕೊಡಗು ಜಿಲ್ಲೆಯ ಜನರು ಧೃತಿಗೆಡಬಾರದು, ವಿಶ್ವಾಸ ಕಳೆದುಕೊಳ್ಳಬಾರದು. ಮಂಡ್ಯ ಜಿಲ್ಲೆಯಿಂದ ಸಕಲ ನೆರವು ನೀಡಲಾಗುವುದು
–ಸಿ.ಎಸ್‌.ಪುಟ್ಟರಾಜು, ಜಿಲ್ಲಾ ಉಸ್ತುವಾರಿ ಸಚಿವ

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !