ಶನಿವಾರ, ಡಿಸೆಂಬರ್ 14, 2019
21 °C
ಮೂಕ ಪ್ರೇಕ್ಷಕರಾದ ಪೊಲೀಸರು, ಚೆಕ್‌ಪೋಸ್ಟ್‌ಗಳಿಗಷ್ಟೇ ಸೀಮಿತವಾದ ಸಿಬ್ಬಂದಿ

ಕೆ.ಆರ್‌.ಪೇಟೆ| ಹರಿಯುತ್ತಿದೆ ಹಣ: ವಲಸೆ ಹೋಗಿದ್ದವರೆಲ್ಲಾ ವಾಪಸ್‌

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

ಮಂಡ್ಯ: ಕೆ.ಆರ್‌.ಪೇಟೆ ಉಪ ಚುನಾವಣಾ ಕಣದಲ್ಲಿ ಹಿಂದೆಂದೂ ಕಂಡು ಕೇಳರಿಯದಷ್ಟು ಹಣ ಹರಿದಾಡುತ್ತಿದೆ. ವಿವಿಧ ಪಕ್ಷಗಳ ಅಭ್ಯರ್ಥಿಗಳು ತಲೆಗಿಷ್ಟು ಎಂಬಂತೆ ಹಣ ನಿಗದಿ ಮಾಡಿದ್ದು ಮುಂಬೈ, ಬೆಂಗಳೂರು ಮುಂತಾದೆಡೆ ವಲಸೆ ಹೋಗಿದ್ದ ಮತದಾರರೂ ಕ್ಷೇತ್ರಕ್ಕೆ ವಾಪಸ್‌ ಬರುತ್ತಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಕೆ.ಆರ್‌.ಪೇಟೆ ಹಾಗೂ ನಾಗಮಂಗಲ ತಾಲ್ಲೂಕುಗಳ ಹೆಚ್ಚು ಜನರು ಮುಂಬೈನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಬದುಕಿಗಾಗಿ ಬೇರೆ ಊರುಗಳಿಗೆ ವಲಸೆ ಹೋಗಿದ್ದರೂ ಹಬ್ಬ, ಹರಿದಿನಗಳಲ್ಲಿ ಊರಿಗೆ ಬರುತ್ತಾರೆ. ಬಹುತೇಕ ಮಂದಿ ತಮ್ಮ ಮತದಾನದ ಹಕ್ಕನ್ನು ಹುಟ್ಟೂರಿನಲ್ಲೇ ಉಳಿಸಿಕೊಂಡಿದ್ದಾರೆ. ಚುನಾವಣೆ ಬಂದಾಗ ಅವರನ್ನು ಊರಿಗೆ ಕರೆಸುವ ಜವಾಬ್ದಾರಿಯನ್ನು ಅಭ್ಯರ್ಥಿಗಳೇ ಹೊರುತ್ತಾರೆ. ಬಸ್‌ಗಳನ್ನುಕಳುಹಿಸಿ ಎಲ್ಲರನ್ನು ಕರೆತರುತ್ತಾರೆ.

ಸಾಮಾನ್ಯವಾಗಿ ಪ್ರತಿ ಚುನಾವಣೆಯಲ್ಲಿ ಮತದಾನದ ದಿನ ವಲಸಿಗರು ಬಂದು ಮತ ಚಲಾವಣೆ ಮಾಡುವುದು ವಾಡಿಕೆ. ಆದರೆ ಈ ಉಪ ಚುನಾವಣೆಯಲ್ಲಿ ಮತದಾನಕ್ಕೆ ನಾಲ್ಕು ದಿನ ಮೊದಲೇ ಹುಟ್ಟೂರು ಸೇರುತ್ತಿರುವುದು ಆಶ್ಚರ್ಯ ಸೃಷ್ಟಿಸಿದೆ. ಕ್ಷೇತ್ರದಲ್ಲಿ ವಿವಿಧ ಪಕ್ಷಗಳ ಮುಖಂಡರು ಅತೀ ಹೆಚ್ಚು ಹಣ ಹಂಚಿಕೆ ಮಾಡುತ್ತಿದ್ದು ಈಗ ಬಿಟ್ಟರೆ ಮತ್ತೊಮ್ಮೆ ಸಿಗುವುದಿಲ್ಲ ಎಂದ ಕಾರಣಕ್ಕೆ ಮೊದಲೇ ಬರುತ್ತಿದ್ದಾರೆ ಎನ್ನಲಾಗಿದೆ.

‘ನಾವು 200ಕ್ಕೂ ಹೆಚ್ಚು ಜನರು ಬಸ್‌ ಮಾಡಿಕೊಂಡು ಬಂದಿದ್ದೇವೆ. ಬಸ್‌ ಬಾಡಿಗೆ ಹಣವನ್ನು ನಾರಾಯಣಗೌಡರು ನೀಡಿದ್ದಾರೆ. ಮತದಾರರ ಪಟ್ಟಿ ಹಿಡಿದುಕೊಂಡು ಊರಿನಲ್ಲಿ ಇದ್ದವರಿಗೆ ಮಾತ್ರ ಹಣ ಕೊಡುತ್ತಿದ್ದಾರೆ. ಮೊದಲೇ ಬಂದರೆ ಹಣವೂ ಸಿಗುತ್ತದೆ, ಊರಿಗೂ ಭೇಟಿ ಕೊಟ್ಟಂತಾಗುತ್ತದೆ. ಹೀಗಾಗಿ ನಾಲ್ಕು ದಿನ ಮೊದಲೇ ಬಂದಿದ್ದೇವೆ’ ಎಂದು ಸಂತೇಬಾಚಹಳ್ಳಿ ಹೋಬಳಿಯ ಹಳ್ಳಿಯೊಂದರ ವಲಸಿಗರೊಬ್ಬರು ತಿಳಿಸಿದರು.

ಕೆ.ಆರ್‌.ಪೇಟೆ ತಾಲ್ಲೂಕಿನಲ್ಲಿ 2 ಸಾವಿರಕ್ಕೂ ಹೆಚ್ಚು ಮತದಾರರು ಮುಂಬೈನಲ್ಲಿ ನೆಲೆಸಿದ್ದಾರೆ. ಅವರನ್ನು ಕರೆಸಲು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಅಭ್ಯರ್ಥಿಗಳು ನಾಮುಂದು, ತಾಮುಂದು ಎಂಬಂತೆ ಬಸ್‌ ವ್ಯವಸ್ಥೆ ಮಾಡಿಸುತ್ತಿದ್ದಾರೆ. ಈ ವಿಚಾರದಲ್ಲಿ ಒಂದು ಕೈ ಮುಂದಕ್ಕೆ ಹೋಗಿರುವ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಮುಂಬೈ ವಲಸಿಗರಿಗೆ ರಾಜಾತಿಥ್ಯ ನೀಡುತ್ತಿದ್ದಾರೆ. ಅವರೂ ಮುಂಬೈನಲ್ಲಿ ನೆಲೆಸಿದವರೇ ಆಗಿದ್ದು ವಲಸಿಗರನ್ನು ಕರೆತರುವಲ್ಲಿ ಎಲ್ಲರಿಗಿಂತಲೂ ಮುಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂಬೈ ಕನ್ನಡಿಗರ ಪ್ರಚಾರ: ಜೆಡಿಎಸ್‌ ಶಾಸಕ ಡಿ.ಸಿ.ತಮ್ಮಣ್ಣ ‘ಕಾಮಾಟಿಪುರ’ ಹೇಳಿಕೆ ಕೊಟ್ಟ ನಂತರ ಮುಂಬೈ ಕನ್ನಡಿಗರ ಸಂಘದ ಸದಸ್ಯರು ಷೇತ್ರಕ್ಕೆ ಬಂದಿದ್ದಾರೆ.  ತಮ್ಮಣ್ಣ ಹೇಳಿಕೆ ವಿರೋಧಿಸಿ ಕ್ಷೇತ್ರದಾದ್ಯಂತ ನಾರಾಯಣಗೌಡರ ಪರ ಪ್ರಚಾರ ಮಾಡುತ್ತಿದ್ದಾರೆ. 

‘ಕ್ಷೇತ್ರದಲ್ಲಿ ಹಣದ ಹರಿವು ವಿಪರೀತವಾಗಿದ್ದರೂ ಚುನಾವಣಾಧಿಕಾರಿಗಳು, ಪೊಲೀಸರು ಮೂಕಪ್ರೇಕ್ಷಕರಾಗಿದ್ದಾರೆ. ಚುನಾವಣಾ ಸಿಬ್ಬಂದಿ ಚೆಕ್‌ಪೋಸ್ಟ್‌ಗಳಲ್ಲಿ ನಿಂತು ಕಾರುಗಳನ್ನು ತಪಾಸಣೆ ಮಾಡಲಷ್ಟೇ ಸೀಮಿತರಾಗಿದ್ದಾರೆ. ಹಳ್ಳಿಗಳಲ್ಲಿ ಏನಾಗುತ್ತಿದೆ ಎಂಬುದನ್ನು ಅರಿಯಲು ವಿಫಲರಾಗಿದ್ದಾರೆ’ ಎಂದು ರೈತ ಮುಖಂಡ ಸಂತೋಷ್‌ ಕುಮಾರ್‌ ತಿಳಿಸಿದರು.

ಸಂಘ ಸಂಸ್ಥೆ, ದೇವಾಲಯಗಳಿಗೆ ದುಡ್ಡು
ಮೂರು ಪಕ್ಷಗಳ ಮುಖಂಡರು ಹಳ್ಳಿಗಳಲ್ಲಿರುವ ಯುವಕ ಸಂಘಗಳು, ಮಹಿಳಾ ಸಂಘಗಳನ್ನು ಗುರುತಿಸಿ ಅವುಗಳ ಮುಖಂಡರಿಗೆ ತಲಾ ₹ 1 ಲಕ್ಷದವರೆಗೆ ಹಣ ಹಂಚುತ್ತಿರುವ ವಿಷಯ ಹಳ್ಳಿಗಳಲ್ಲಿ ಕುತೂಹಲ ಮೂಡಿಸಿದೆ.

ಅಭ್ಯರ್ಥಿಗಳು ಪ್ರಚಾರಕ್ಕೆ ಹಳ್ಳಿಗೆ ಬಂದಾಗ ಸಂಘಗಳ ಪದಾಧಿಕಾರಿಗಳು, ವೈಯಕ್ತಿಕವಾಗಿ ಹಣ ಕೊಡುವುದರ ಬದಲು ಸಂಘದ ಅಭಿವೃದ್ಧಿಗೆ ಹಣ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ.

‘ನಮ್ಮ ಊರಿನ ದೇವಾಲಯದ ಗೋಡೆ ಕುಸಿದು ಬೀಳುತ್ತಿದೆ. ಚುನಾವಣೆಯಲ್ಲಿ ಗೆದ್ದು ಹೋದ ನಂತರ ಯಾರೂ ಒಂದು ರೂಪಾಯಿ ಹಣವನ್ನೂ ಕೊಡುವುದಿಲ್ಲ. ಹೀಗಾಗಿ, ಈಗಲೇ ಹಣ ಇಟ್ಟು ವೋಟು ಕೇಳಿ ಎಂದು ಹೇಳಿದ್ದೇವೆ.ಹೀಗಾಗಿ ₹ 1 ಲಕ್ಷ ಕೊಟ್ಟಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ತಿಳಿಸಿದರು.

ಸಮಾವೇಶಗಳಿಗೆ ಹಾಸನ ಜಿಲ್ಲೆ ಜನ
ಕೆ.ಆರ್‌.ಪೇಟೆ ಕ್ಷೇತ್ರದ ಒಂದಲ್ಲಾ ಒಂದು ಪಕ್ಷದ ಪ್ರಚಾರ ಸಮಾವೇಶ, ಸಮುದಾಯಗಳ ಕಾರ್ಯಕ್ರಮ ನಡೆಯುತ್ತಿವೆ. ಎಲ್ಲಾ ಪಕ್ಷಗಳು ಕೂಡ ಈ ಸಮಾವೇಶ ನಡೆಸುತ್ತಿವೆ. ಸಮಾವೇಶಗಳಿಗೆ ಪಕ್ಕದ ಹಾಸನ ಜಿಲ್ಲೆಗಳಿಂದಲೂ ಹಣ ಕೊಟ್ಟು ಜನರನ್ನು ಕರೆದುಕೊಂಡು ಬಂದು ಶಕ್ತಿ ಪ್ರದರ್ಶನ ಮಾಡಲಾಗುತ್ತಿದೆ.

ಸಂತೇಬಾಚಹಳ್ಳಿ, ಕಿಕ್ಕೇರಿ, ಅಘಲಯ ಭಾಗಕ್ಕೆ ಹಾಸನ ಜಿಲ್ಲೆಯ ಹಳ್ಳಿಗಳು ಸಮೀಪದಲ್ಲೇ ಇದ್ದು ಅಲ್ಲಿಯ ಜನರನ್ನು ವಾಹನಗಳಲ್ಲಿ ಕರೆದುಕೊಂಡು ಬರಲಾಗುತ್ತಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು