ಶನಿವಾರ, ನವೆಂಬರ್ 28, 2020
22 °C
ಕೆ.ಆರ್‌.ಪೇಟೆಯಲ್ಲಿ ಅವಿರೋಧ ಆಯ್ಕೆ ಖಚಿತ; ಸುಪ್ರೀಂ ಕೋರ್ಟ್‌ ಆದೇಶದಂತೆ ಫಲಿತಾಂಶಕ್ಕೆ ತಡೆ

ಪುರಸಭೆ ಚುನಾವಣೆ: ಇಬ್ಬರಿಂದ ನಾಮಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆ.ಆರ್.ಪೇಟೆ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದರು. ಇದರಿಂದಾಗಿ ಇವರಿಬ್ಬರ ಅವಿರೋಧ ಆಯ್ಕೆ ಖಚಿತವಾಗಿದೆ. ಆದರೆ ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಫಲಿತಾಂಶ ಪ್ರಕಟಣೆಯನ್ನು ತಡೆಹಿಡಿಯಲಾಗಿದೆ.

ಅಧ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ‘ಎ’ ಮಹಿಳೆಗೆ ಮೀಸಲಾಗಿತ್ತು. ಜೆಡಿಎಸ್‌ನಿಂದ ಆಯ್ಕೆಯಾಗಿ ಸಚಿವ ಕೆ.ಸಿ. ನಾರಾಯಣಗೌಡ ಅವರೊಂದಿಗೆ ಗುರುತಿಸಿಕೊಂಡಿದ್ದ ಮಹಾದೇವಿ ನಂಜುಂಡ ಅಧ್ಯಕ್ಷ ಸ್ಥಾನಕ್ಕೆ, ಹೊಸಹೊಳಲು ಗಾಯತ್ರಿ ಸುಬ್ರಹ್ಮಣ್ಯ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.

ಬೇರೆ ಯಾರೂ ನಾಮಪತ್ರ ಸಲ್ಲಿಸಿಲ್ಲವಾದ್ದರಿಂದ ಇವರಿಬ್ಬರ ಅವಿರೋಧ ಆಯ್ಕೆ ಖಚಿತವಾಗಿದೆ.  ಜೆಡಿಎಸ್ ತನ್ನ 11 ಸದಸ್ಯರಿಗೆ ವಿಪ್ ಜಾರಿಗೊಳಿಸಿ ಮಹಾದೇವಿ ನಂಜುಂಡ ಅಧ್ಯಕ್ಷ ಸ್ಥಾನಕ್ಕೆ,  ಹೊಸಹೊಳಲು ಗಾಯತ್ರಿ ಸುಬ್ರಹ್ಮಣ್ಯ ಅವರಿಗೆ ಉಪಾಧ್ಯಕ್ಷ ಸ್ಥಾನಕ್ಕೆ  ಮತ ಚಲಾಯಿಸುವಂತೆ ಸೂಚಿಸಿತ್ತು.

ಆದರೆ 10 ಸದಸ್ಯರ ಬಲವನ್ನು ಹೊಂದಿದ್ದ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ನಟರಾಜ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗಾಯತ್ರಿ ಅವರನ್ನು ಬೆಂಬಲಿಸುವಂತೆ ವಿಪ್‌ ನೀಡಿತ್ತು. ಆದರೆ ಬಿಜೆಪಿಯಿಂದ ಗೆದ್ದಿದ್ದ ಏಕೈಕ ಅಭ್ಯರ್ಥಿ ನಟರಾಜು ನಾಮಪತ್ರ ಸಲ್ಲಿಸಲಿಲ್ಲವಾದ್ದರಿಂದ ಕಾಂಗ್ರೆಸ್‌ ಮುಖಭಂಗ ಅನುಭವಿಸಿತು. 

ಬಗೆಹರಿದ ಗೊಂದಲ: ಚುನಾವಣೆಯಲ್ಲಿ ಭಾಗವಹಿಸಿದ್ದ ಸಚಿವ ನಾರಾಯಣಗೌಡ ಬೆಳಿಗ್ಗೆ ತಮ್ಮ ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸಿ ಅಧ್ಯಕ್ಷ ಸ್ಥಾನದ ಮೊದಲ 15 ತಿಂಗಳ ಅವಧಿಗೆ ಮಹಾದೇವಿ ನಂಜುಂಡ, ನಂತರದ 15 ತಿಂಗಳ ಅವಧಿಗೆ ನಟರಾಜ್ ಅವರಿಗೆ ಅಧಿಕಾರ ನೀಡಲು ತೀರ್ಮಾನಿಸಿದರು. ಇದರಿಂದ ಬಿಜೆಪಿಯಲ್ಲಿ ಇದ್ದ ಆಂತರಿಕ ಭಿನ್ನಮತ ಬಗೆಹರಿದಂತಾಯಿತು. ನಾಮಪತ್ರ ಸಲ್ಲಿಕೆ ನಂತರ ಸದಸ್ಯರು ಸಚಿವ ನಾರಾಯಣಗೌಡರೊಂದಿಗೆ ವಿಜಯೋತ್ಸವ ಆಚರಿಸಿದರು. ಪೊಲೀಸರು ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದರು.

‘ನಮ್ಮಲ್ಲಿ ಯಾವ ಗೊಂದಲವೂ ಇಲ್ಲ. ಪಟ್ಟಣದ ಅಭಿವೃದ್ಧಿಯೇ ನಮ್ಮ ಗುರಿ. ನಮ್ಮ ಬೆಂಬಲಿಗರೇ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಆಡಳಿತವನ್ನು ಅಂತ್ಯಗೊಳಿಸಿದ್ದೇವೆ. ಇದರಿಂದ ಕೆಲಸ ಮಾಡಲು ಹೊಸ ಹುರುಪು ಬಂದಿದೆ. ₹ 14 ಕೋಟಿ ವೆಚ್ಚದಲ್ಲಿ ಪುರಸಭೆಯ ನೂತನ ಕಾರ್ಯಾಲಯದ ಕಟ್ಟಡ ಹಾಗೂ ಹೈಟೆಕ್ ವಾಣಿಜ್ಯ ಸಮುಚ್ಛಯದ ಕಾಮಗಾರಿಯು ಸದ್ಯದಲ್ಲಿಯೇ ಟೆಂಡರ್ ಆಗಲಿದೆ’ ಎಂದು ಸಚಿವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.