ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀನಾಮೆ ಪರ್ವ ಸೃಷ್ಟಿಸಿದ ಕೃಷ್ಣಮೂರ್ತಿ ಆಯ್ಕೆ

ಬಿಎಸ್‌ಪಿ ತೊರೆದ ಮೈಸೂರು ವಲಯದ ಜಿಲ್ಲಾ ಘಟಕಗಳ ಕಾರ್ಯಕರ್ತರು
Last Updated 4 ಸೆಪ್ಟೆಂಬರ್ 2019, 15:00 IST
ಅಕ್ಷರ ಗಾತ್ರ

ಮಂಡ್ಯ: ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಮಳವಳ್ಳಿಯ ಎಂ.ಕೃಷ್ಣಮೂರ್ತಿ ಆಯ್ಕೆಯಾಗುತ್ತಿದ್ದಂತೆಯೇ ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ರಾಜೀನಾಮೆ ಪರ್ವ ಆರಂಭವಾಗಿದೆ.

ರಾಜ್ಯಘಟಕದ ಅಧ್ಯಕ್ಷರಾಗಿದ್ದ ಪ್ರೊ.ಹರಿರಾಮ್‌ ಸ್ಥಾನದಲ್ಲಿ,‌ ಕೃಷ್ಣಮೂರ್ತಿ ಅವರನ್ನು ನೇಮಿಸಿ ಆ.29ರಂದು ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಆದೇಶ ಹೊರಡಿಸಿದ್ದಾರೆ.

‘ಪಕ್ಷದಿಂದ ಉಚ್ಚಾಟನೆಗೊಂಡಿರುವ ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರ ಬೆಂಬಲಿಗ ಎನ್ನುವ ಕಾರಣಕ್ಕೆ ಹರಿರಾಮ್‌ ಅವರನ್ನು ಬದಲಿಸಲಾಗಿದೆ. ಏಕಪಕ್ಷೀಯವಾಗಿ ಕ್ರಮ ಕೈಗೊಳ್ಳಲಾಗಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಮೈಸೂರು ವಲಯದ ಜಿಲ್ಲೆಗಳ ಕಾರ್ಯಕರ್ತರು ತಮ್ಮ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಎಂ.ಕೃಷ್ಣಮೂರ್ತಿ ಆಯ್ಕೆಯ ಜೊತೆಗೆ ಪಕ್ಷದ ನೂತನ ಮುಖ್ಯ ರಾಜ್ಯ ಸಂಯೋಜಕರಾಗಿ ಎಂ.ಎಲ್‌.ತೋಮರ್‌ ಹಾಗೂ ರಾಜ್ಯ ಸಂಯೋಜಕರಾಗಿ ಮಾರಸಂದ್ರ ಮುನಿಯಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

ರಾಜ್ಯ ಘಟಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಕೃಷ್ಣಮೂರ್ತಿ ಅವರು ಮೈಸೂರು ವಿಭಾಗದ ಜಿಲ್ಲಾ ಘಟಕಗಳನ್ನು ವಿಸರ್ಜನೆ ಮಾಡಿರುವುದು ಸ್ಥಳೀಯ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಶಾಸಕ ಎನ್‌.ಮಹೇಶ್‌ ಅವರ ಬೆಂಬಲಿಗರನ್ನು ಬದಲಾವಣೆ ಮಾಡುವ ಉದ್ದೇಶದಿಂದಲೇ ಜಿಲ್ಲಾ ಘಟಕಗಳ ವಿಸರ್ಜಿಸಲಾಗಿದೆ ಎಂಬುದು ಕಾರ್ಯಕರ್ತರ ಆರೋಪ.

ಹಿಂದಿ ಎಂ.ಎ ಪದವೀಧರ:

ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಂ.ಕೃಷ್ಣಮೂರ್ತಿ, ಮಳವಳ್ಳಿ ತಾಲ್ಲೂಕಿನ ದುಗ್ಗನಹಳ್ಳಿ ಗ್ರಾಮದವರು. ಹಿಂದಿ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಸರ್ಕಾರಿ ಕೆಲಸಕ್ಕೆ 2008ರಲ್ಲಿ ರಾಜೀನಾಮೆ ಸಲ್ಲಿಸಿ ಬಿಎಸ್‌ಪಿ ಸಂಘಟನೆಯಲ್ಲಿ ತೊಡಗಿದ್ದರು. 2009ರಲ್ಲಿ ಮಂಡ್ಯ ಲೋಕಸಭಾ ಚುನಾವಣೆ, 2013ರ ಮಳವಳ್ಳಿ ವಿಧಾನಸಭೆ, 2014ರ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು.

‘ಮಾಯಾವತಿ ಅವರು ರಾಜ್ಯದ ಎಲ್ಲಾ ವಲಯಗಳನ್ನು ವಿಸರ್ಜನೆ ಮಾಡಿದ್ದಾರೆ. ಆ.12ರಂದೇ ಮೈಸೂರು ವಲಯ ವಿಸರ್ಜನೆಗೊಂಡಿದೆ. ಈಗ ಜಿಲ್ಲಾ ಘಟಕದ ಅಧ್ಯಕ್ಷರು ರಾಜೀನಾಮೆ ನೀಡುವ ಪ್ರಸಂಗವೇ ಬರುವುದಿಲ್ಲ. ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೂ ಅಧ್ಯಕ್ಷರ ನೇಮಕವಾಗಿದೆ’ ಎಂದು ನೂತನ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಹೇಳಿದರು.

ಮೈಸೂರಿನಲ್ಲಿ ರಾಜೀನಾಮೆ: ಮೈಸೂರು ಜಿಲ್ಲೆಯ ವಲಯ ಉಸ್ತುವಾರಿ, ಜಿಲ್ಲಾ ಘಟಕ ಮತ್ತು ನಗರ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಮುಖಂಡರನ್ನು ಒಳಗೊಂಡಂತೆ ಸುಮಾರು 40 ಮಂದಿ ಬುಧವಾರ ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ನಿರ್ಧಾರ ಪ್ರಕಟಿಸಿದರು.

ಬಿಎಸ್‌ಪಿ ರಾಜ್ಯ ಪ್ರಧಾನಕಾರ್ಯದರ್ಶಿಯಾಗಿದ್ದ ಮಾದೇಶ್‌ ಉಪ್ಪಾರ್‌ ನೇತೃತ್ವದಲ್ಲಿ ಚಾಮರಾಜನಗರದಲ್ಲಿ 100 ಕ್ಕೂ ಅಧಿಕ ಮಂದಿ, ಕೊಡಗಿನಲ್ಲಿ ಜಿಲ್ಲಾ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ 25ಕ್ಕೂ ಅಧಿಕ ಮಂದಿ ರಾಜೀನಾಮೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT