ಮಂಗಳವಾರ, ಆಗಸ್ಟ್ 20, 2019
27 °C

ಮಂಡ್ಯ | ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು: ಹೆದ್ದಾರಿ ತಡೆ

Published:
Updated:
Prajavani

ಮಂಡ್ಯ/ಮೈಸೂರು: ಭರ್ತಿಯಾಗುವ ಮೊದಲೇ ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯದ ಇಂಡುವಾಳು ಬಳಿ ಶನಿವಾರ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ ರಾಜ್ಯ ರೈತಸಂಘದ (ಮೂಲ ಸಂಘಟನೆ) ಸದಸ್ಯರು, ಹೆದ್ದಾರಿಯಲ್ಲಿ 15 ನಿಮಿಷ ಎತ್ತಿನ ಗಾಡಿ ನಿಲ್ಲಿಸಿ ಪ್ರತಿಭಟಿಸಿದರು.

ನಾಲೆಗಳಿಗೆ ಕಡಿಮೆ ನೀರು ಹರಿಸಿ, ತಮಿಳುನಾಡಿಗೆ ಹೆಚ್ಚು ನೀರು ಬಿಡಲಾಗುತ್ತಿದೆ. ಇಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇರುವಾಗ ಅಲ್ಲಿಗೆ ನೀರು ಬಿಡಲಾಗುತ್ತಿದೆ. ಕೂಡಲೇ ನೀರು ನಿಲ್ಲಿಸದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಕಬಿನಿ ಜಲಾಶಯದಿಂದ ಶುಕ್ರವಾರದಿಂದಲೇ 3000 ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದಕ್ಕೆ ರೈತ ಸಂಘಟನೆಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

‘ಹಿಂದಿನ ವರ್ಷ ಈ ವೇಳೆಗೆ ನಾಲೆಗಳಿಗೆ ನೀರು ಹರಿಸಲಾಗಿತ್ತು. ಈ ಬಾರಿ ನಾಲೆಗೆ ನೀರು ಹರಿಸದೆ, ತಮಿಳುನಾಡಿಗೆ ಹರಿಸುತ್ತಿರುವುದಕ್ಕೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದು, ಮೊದಲು ನಮಗೆ ನೀರು ಹರಿಸಿ’ ಎಂಬ ಹಕ್ಕೊತ್ತಾಯ ಮಂಡಿಸಿದ್ದಾರೆ.

‘ಕರ್ನಾಟಕ ತಮಿಳುನಾಡಿನ ನೀರಗಂಟಿಯಾಗಿದೆ. ಈಗಷ್ಟೇ ಜಲಾಶಯಕ್ಕೆ ಒಳ ಹರಿವು ಆರಂಭಗೊಂಡಿದೆ. ಜಲಾಶಯ ತುಂಬುವುದಕ್ಕೂ ಮೊದಲೇ ನೀರು ಹರಿಸುತ್ತಿರುವುದು ಒಳ್ಳೆಯದಲ್ಲ’ ಎಂದು ಕಬಿನಿ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಕಿಡಿಕಾರಿದ್ದಾರೆ.

ಪ್ರಾಧಿಕಾರದ ಸೂಚನೆ ಮೇರೆಗೆ ನದಿಗೆ ನೀರು: ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸೂಚನೆಯಂತೆ, ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದ್ದು, ಶುಕ್ರವಾರ ದಿಂದಲೇ ಜಲಾಶಯಗಳ ಹೊರಹರಿವು ಹೆಚ್ಚಳಗೊಂಡಿದೆ.

ಬೆಳೆದು ನಿಂತಿರುವ ಬೆಳೆಗಳ ಉಳಿವಿಗಾಗಿ  ಕೆಆರ್‌ಎಸ್‌ನಿಂದ ಜುಲೈ 16ರಿಂದ ನಾಲೆಗಳಿಗೆ ನೀರು ಹರಿಸಲಾಗುತ್ತಿತ್ತು. ಶುಕ್ರವಾರ 5,064 ಕ್ಯುಸೆಕ್‌ ನೀರನ್ನು ಹೊರಬಿಡಲಾಗಿದ್ದು, ಅದರಲ್ಲಿ ನಾಲೆಗಳಿಗೆ 2,611 ಕ್ಯುಸೆಕ್‌, ನದಿಗೆ 2,453 ಕ್ಯುಸೆಕ್‌ ನೀರು ಹರಿಸಲಾಗಿದೆ. ನದಿಗೆ ಬಿಟ್ಟ ಬಹುತೇಕ ನೀರು ತಮಿಳುನಾಡಿಗೆ ಹರಿಯುತ್ತಿದೆ.

ಶನಿವಾರ ಹೊರಹರಿವಿನ ಪ್ರಮಾಣವನ್ನು ಮತ್ತೆ 7,713 ಕ್ಯುಸೆಕ್‌ಗೆ ಹೆಚ್ಚಿಸಲಾಗಿದ್ದು, ಅದರಲ್ಲಿ 2,911 ಕ್ಯುಸೆಕ್‌ ನಾಲೆಗೆ, 4,802 ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ. ಕಬಿನಿಯಿಂದ ಶುಕ್ರವಾರ 3000 ಕ್ಯುಸೆಕ್‌ ನೀರು ಹರಿಬಿಡಲಾಗಿದ್ದು, ಶನಿವಾರ ಹೊರಹರಿವಿನ ಪ್ರಮಾಣ 3500 ಕ್ಯುಸೆಕ್‌ ಇತ್ತು.

‘ನೀರು ನಿರ್ವಹಣಾ ಪ್ರಾಧಿಕಾರದ ಸೂಚನೆಯಂತೆ ನದಿಗೆ ನೀರು ಹರಿಸಲಾಗುತ್ತಿದೆ. ಅದರಲ್ಲಿ ನದಿ ಪಾತ್ರದ ನಾಲೆಗಳು ಹಾಗೂ ತಮಿಳುನಾಡಿಗೆ ನೀರು ಹರಿದು ಹೋಗುತ್ತಿದೆ. ಒಳಹರಿವಿನ ಪ್ರಮಾಣ ನೋಡಿಕೊಂಡು ಮುಂದೆ ನೀರು ಹರಿಸಲಾಗುವುದು’ ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ರಾಮಕೃಷ್ಣ ಹಾಗೂ ಕಬಿನಿ ಜಲಾಶಯದ ಕಾರ್ಯಪಾಲಕ ಎಂಜಿನಿಯರ್‌ ಸುಜಾತಾ ‘ಪ್ರಜಾವಾಣಿ’ಗೆ ತಿಳಿಸಿದರು.

Post Comments (+)