ಬುಧವಾರ, ನವೆಂಬರ್ 20, 2019
26 °C
ಫೌಂಟೇನ್‌ ಬಳಿ 3 ಸುತ್ತು ರಥ ಎಳೆದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು

ಕೆಆರ್‌ಎಸ್‌: ಕಾವೇರಿ ಮಾತೆ ರಥೋತ್ಸವ

Published:
Updated:
Prajavani

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್‌ಎಸ್‌ನಲ್ಲಿ ಶುಕ್ರವಾರ ಕಾವೇರಿ ಮಾತೆಯ ರಥೋತ್ಸವ ನಡೆಯಿತು.

ಜಲಾಶಯದ ಕಾವೇರಿ ಪ್ರತಿಮೆ ಎದುರು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿ ರಥವನ್ನು ಎಳೆದರು. ರಶಿಯನ್‌ ಫೌಂಟೇನ್‌ ಬಳಿ ಮೂರು ಸುತ್ತು ರಥವನ್ನು ಎಳೆಯಲಾಯಿತು. ಪುಟ್ಟ ರಥದಲ್ಲಿ ಕಾವೇರಿ ಮಾತೆಯ ಪ್ರತಿಮೆಯನ್ನು ಇರಿಸಲಾಗಿತ್ತು. ಸರ್ವಾಲಂಕೃತ ರಥವನ್ನು ಪ್ರವಾಸಿಗರೂ ಎಳೆದು ಖುಷಿಪಟ್ಟರು. ರಥ ಎಳೆಯುವಾಗ ಕಾವೇರಿ ಮಾತೆ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ಸರ್‌ ಎಂ.ವಿಶ್ವೇಶ್ವರಯ್ಯ ಅವರ ಪರ ಘೋಷಣೆಗಳು ಮೊಳಗಿದವು. ಪ್ರಸನ್ನಕುಮಾರ್‌ ನೇತೃತ್ವದ ವೈದಿಕರ ತಂಡ ಕಾವೇರಿ ಮಾತೆಗೆ ಅಭಿಷೇಕ, ನವಗ್ರಹ ಹೋಮ ಇತರ ಧಾರ್ಮಿಕ ವಿಧಿ, ವಿಧಾನಗಳನ್ನು ನೆರವೇರಿಸಿತು. ಪ್ರಸಾದ ವಿನಿಯೋಗ ನಡೆಯಿತು.

ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ಎಂ.ಬಿ. ರಾಜು, ‘ತಲಕಾವೇರಿಯ ಬ್ರಹ್ಮ ಕುಂಡಿಕೆಯಲ್ಲಿ ಕಾವೇರಿ ತೀರ್ಥ ರೂಪಿಣಿಯಾಗಿ ಉದ್ಭವವಾಗುವ ಸಂದರ್ಭದಲ್ಲಿ ಕೆಆರ್‌ಎಸ್‌ನಲ್ಲಿ ರಥೋತ್ಸವ ನಡೆಸಲಾಗುತ್ತದೆ. ನಾಡಿನ ಸಮೃದ್ಧಿಗೆ ಪ್ರಾರ್ಥಿಸಲಾಗಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಾದ ವಾಸುದೇವ್‌, ತಮ್ಮೇಗೌಡ, ಜಗದೀಶ್‌, ಕೈಗಾರಿಕಾ ಭದ್ರತಾ ಪಡೆಯ ಇನ್ಸ್‌ಪೆಕ್ಟರ್‌ಗಳಾದ ಸಂತೋಷ್‌ ಕುಮಾರ್‌, ಜಗದೀಶ್‌, ರಾಘವೇಂದ್ರ, ಪ್ರದೀಪ್‌ ಇದ್ದರು.

ಪ್ರತಿಕ್ರಿಯಿಸಿ (+)