ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಆರ್‌ಎಸ್‌: 2ನೇ ಬಾರಿಗೆ ಬೊಮ್ಮಾಯಿ ಬಾಗಿನ

ಗರಿಷ್ಠ ಮಟ್ಟ ತಲುಪಲು ಕೇವಲ 1 ಅಡಿಯಷ್ಟೇ ಬಾಕಿ, ಕಾವೇರಿ ನೀರಾವರಿ ನಿಗಮ ಸಕಲ ಸಿದ್ಧತೆ
Last Updated 18 ಜುಲೈ 2022, 13:14 IST
ಅಕ್ಷರ ಗಾತ್ರ

ಮಂಡ್ಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವರ್ಷದೊಳಗೆ 2ನೇ ಬಾರಿ ಕೆಆರ್‌ಎಸ್‌ ಜಲಾಶಯಕ್ಕೆ ಬಾಗಿನ ಅರ್ಪಿಸುವ ಅವಕಾಶ ಪಡೆದಿದ್ದಾರೆ. ಕಳೆದ ವರ್ಷ ನ.2ರಂದು ಪತ್ನಿ ಸಮೇತ ಅವರು ಬಾಗಿ ಅರ್ಪಿಸಿದ್ದರು.

ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ 17 ದಿನಗಳಿಂದ 16 ಅಡಿ ನೀರು ಹರಿದು ಬಂದಿದೆ. ಹೇಮಾವತಿ ಜಲಾಶಯದಿಂದಲೂ ನೀರು ಹರಿದು ಬರುತ್ತಿರುವ ಕಾರಣ ಜಲಾಶಯ ಗರಿಷ್ಠ ಮಟ್ಟ ತಲುಪಲು ಕೇವಲ 1 ಅಡಿ ಬಾಕಿ ಇದೆ. ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಒಳ ಹರಿವಿನಷ್ಟೇ ನೀರನ್ನು ಹೊರಕ್ಕೆ ಹರಿಸಲಾಗುತ್ತಿದೆ.

ಬಾರಿನ ಅರ್ಪಣೆ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಅಥವಾ ಬುಧವಾರ ಬೆಳಿಗ್ಗೆ 6 ಗಂಟೆ ವೇಳೆಗೆ ಗರಿಷ್ಠ ಮಟ್ಟ ತಲುಪಲಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಾರಿ ಜುಲೈ ತಿಂಗಳಲ್ಲೇ ಬಾಗಿನ ಅರ್ಪಿಸುತ್ತಿರುವುದು ವಿಶೇಷವಾಗಿದೆ. ಜುಲೈ 8ರಂದು ಕೆಆರ್‌ಎಸ್‌ಗೆ ಭೇಟಿ ನೀಡಿದ್ದ ಜಲಸಂಪನ್ಮೂಲ ಸಚಿವ ಜುಲೈ ತಿಂಗಳಲ್ಲೇ ಬಾಗಿನ ಅರ್ಪಿಸಲಾಗುವುದು ಎಂದು ತಿಳಿಸಿದ್ದರು. ಅದರಂತೆ ಕಾವೇರಿ ನೀರಾವತಿ ನಿಗಮ ಕಾರ್ಯಕ್ರಮ ಆಯೋಜನೆಗೆ ಸಕಲ ಸಿದ್ಧತೆ ನಡೆಸಿತ್ತು.

2008ರಲ್ಲಿ ಕೂಡ ಜಲಾಶಯ ಜುಲೈ ತಿಂಗಳಲ್ಲೇ ಭರ್ತಿಯಾಗಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರು ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದರು. ನಂತರ ಯಾವ ಬಾರಿಯೂ ಜುಲೈ ತಿಂಗಳಲ್ಲಿ ಜಲಾಶಯ ಭರ್ತಿಯಾಗಿರಲಿಲ್ಲ. 14 ವರ್ಷಗಳ ನಂತರ ಜಲಾಶಯ ಜುಲೈ ತಿಂಗಳಲ್ಲಿ ಭರ್ತಿಯಾಗುತ್ತಿರುವುದು ವಿಶೇಷವಾಗಿದೆ.

ಪ್ರವಾಹದ ಭೀತಿ ಇಲ್ಲ: ಕೊಡಗು ಜಿಲ್ಲೆಯಲ್ಲಿ ಮಳೆ ತಗ್ಗಿದ್ದು ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಕೊಂಚ ತಗ್ಗಿದೆ. ಜಲಾಶಯದಿಂದ ಹರಿಯುತ್ತಿರುವ ನೀರು 80 ಸಾವಿರ ಕ್ಯೂಸೆಕ್‌ಗೂ ಕಡಿಮೆ ಇರುವ ಕಾರಣ ಸದ್ಯ ಕಾವೇರಿ ತೀರದಲ್ಲಿ ಪ್ರವಾಹ ಭೀತಿ ಮಾಯವಾಗಿದೆ. ನೀರಿನ ಹರಿವು 1 ಲಕ್ಷ ಕ್ಯುಸೆಕ್‌ ದಾಟಿದ್ದರೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು.

ಹೆಚ್ಚುತ್ತಿರುವ ಮಳೆ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು 1.50 ಲಕ್ಷ ಕ್ಯೂಸೆಕ್‌ಗೂ ಹೆಚ್ಚು ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ನಿಗಮದ ಅಧಿಕಾರಿಗಳು ಕಳೆದ ವಾರ ಎಚ್ಚರಿಕೆ ನಿಡಿದ್ದರು. ಅದರಂತೆ ಜಿಲ್ಲಾ ವ್ಯಾಪ್ತಿಯ 59 ಗ್ರಾಮಗಳನ್ನು ಅಪಾಯ ಎದುರಿಸುವ ಸಾಧ್ಯತೆ ಇದೆ ಎಂದು ಗುರುತಿಸಲಾಗಿತ್ತು. ಹೊರಹರಿವು 1 ಲಕ್ಷ್ಯ ಕ್ಯುಸೆಕ್‌ ದಾಟದ ಪರಿಣಾಮ ಪ್ರವಾಹದ ಯಾವುದೇ ಭೀತಿ ಇಲ್ಲ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

‘ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಮುಳುಗಿದರೆ ಮಾತ್ರ ಕಾವೇರಿ ನದಿ ತೀರದಲ್ಲಿ ಪ್ರವಾಹ ಪರಿಸ್ಥಿತಿ ತೀವ್ರಗೊಳ್ಳಲಿದೆ. ಇಲ್ಲಿಯವರೆಗೆ ಅಂತಹ ಪರಿಸ್ಥಿತಿ ಬಂದಿಲ್ಲ’ ಎಂದು ಶ್ರೀರಂಗಪಟ್ಟಣದ ಬಸವರಾಜು ತಿಳಿಸಿದರು.

******

ಬಾಗಿನ ಅರ್ಪಣೆ ಸಮಾರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಶೀಘ್ರ ಜಲಾಶಯ ಗರಿಷ್ಠ ಮಟ್ಟ ತಲುಪಲಿದ್ದು ಸರಳ ರೀತಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು

ಎಚ್‌.ಆನಂದ್‌, ಅಧೀಕ್ಷಕ ಎಂಜನಿಯರ್‌, ಕಾವೇರಿ ನೀರಾವರಿ ನಿಗಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT