ಶುಕ್ರವಾರ, ಆಗಸ್ಟ್ 23, 2019
21 °C
ನದಿ ಪಾತ್ರದ ರೈತರಿಗೆ ಪ್ರಾಣ ಸಂಕಟ, ಸಂಕಷ್ಟ ಕೇಳದ ಅಧಿಕಾರಿಗಳ ವಿರುದ್ಧ ಆಕ್ರೋಶ

ಕೆಆರ್‌ಎಸ್‌ ಪ್ರವಾಹ: ನೂರಾರು ಎಕರೆ ಬೆಳೆ ಹಾನಿ

Published:
Updated:
Prajavani

ಮಂಡ್ಯ: ಕೊಡಗಿನ ಕುಂಭದ್ರೋಣ ಮಳೆಯು ಎರಡು ದಿನಗಳ ಕಾಲ ಮಂಡ್ಯ ಜಿಲ್ಲೆಯಲ್ಲೂ ಪ್ರವಾಹ ಪರಿಸ್ಥಿತಿ ನಿರ್ಮಿಸಿತ್ತು. ನದಿಗೆ 1.5 ಲಕ್ಷ ಕ್ಯುಸೆಕ್‌ ನೀರು ಬಿಟ್ಟ ಕಾರಣ ನೂರಾರು ಎಕರೆ ಭೂಪ್ರದೇಶದ ಬೆಳೆಗಳು ಪ್ರವಾಹಕ್ಕೆ ಕೊಚ್ಚಿ ಹೋಗಿವೆ.

ಪ್ರವಾಹದ ಸಂದರ್ಭದಲ್ಲಿ ಶ್ರೀರಂಗಪಟ್ಟಣ, ಪಾಂಡವಪುರ ಹಾಗೂ ಮಳವಳ್ಳಿ ತಾಲ್ಲೂಕಿನ ನದಿ ಪಾತ್ರದ ಜಮೀನುಗಳು ಜಲಾವೃತಗೊಂಡಿದ್ದವು. ಹೇಮಾವತಿ ಜಲಾಶಯದಿಂದಲೂ ನೀರು ಹರಿಸಿದ ಕಾರಣ ಕೆ.ಆರ್‌.ಪೇಟೆ ತಾಲ್ಲೂಕಿನ ಹಲವು ಹಳ್ಳಿಗಳ ಜಮೀನು ಹಾಳಾಯಿತು. ಫಸಲು ಇನ್ನೇನು ಕೈತಲುಪುವಷ್ಟರಲ್ಲಿ ಪ್ರವಾಹಕ್ಕೆ ಸಿಕ್ಕು ಕೊಚ್ಚಿ ಹೋಗಿದ್ದು, ರೈತರಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ.

ರೈತರು ಬ್ಯಾಂಕ್‌, ಸಹಕಾರ ಸಂಘ, ವೈಯಕ್ತಿಕ ಸಾಲ ಮಾಡಿ ಬೆಳೆ ಬೆಳೆದಿದ್ದು, ಪ್ರವಾಹದಲ್ಲಿ ಬೆಳೆಗಳು ಹಾನಿಯಾಗಿ ದಿಕ್ಕೇ ತೋಚದಂತಾಗಿದೆ. ರೈತರು ಬೆಳೆ ಪರಿಹಾರಕ್ಕಾಗಿ ಆಗ್ರಹಿಸುತ್ತಿದ್ದು, ಅವರ ಗೋಳು ಕೇಳುವವರೇ ಇಲ್ಲದಂತಾಗಿದೆ.

ಅಣೆಕಟ್ಟೆಯಲ್ಲಿ ನೀರಿದ್ದಾಗ ಬೆಳೆ ಬೆಳೆಯುವುದಕ್ಕೆ ನೀರಿಲ್ಲ, ನೀರು ಬಿಡಿ ಎಂದು ಪ್ರತಿಭಟನೆ ನಡೆಸಬೇಕಾಯಿತು. ನಾಲೆಗಳಿಗೆ ನೀಡುತ್ತಿದ್ದ ನೀರು ನಿಲ್ಲಿಸಿ ತಮಿಳುನಾಡಿಗೆ ನೀರು ಬಿಡಲಾಯಿತು.  ಆದರೆ ಈಗ ಕೇಳದಿದ್ದರೂ ನಾಲೆ ಹಾಗೂ ತಮಿಳುನಾಡಿಗೆ ನೀರು ಹರಿದು ಹೋಗುತ್ತಿದೆ. ಪ್ರಕೃತಿಯ ಮುಂದೆ ಮನುಷ್ಯ ಯಾವ ಆಟವೂ ನಡೆಯುವುದಿಲ್ಲ ಎಂಬುದಕ್ಕೆ ಇದೇ ಸಾಕ್ಷಿ.

ಕೆಆರ್‌ಎಸ್‌ ಅಣೆಕಟ್ಟು ಇರುವ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಇಲ್ಲಿಯವರೆಗೆ ವರದಿಯಾಗಿರುವಂತೆ ಅತಿ ಹೆಚ್ಚು ಬೆಳೆ ನಷ್ಟವಾಗಿದೆ. 64 ಹೆಕ್ಟೇರ್‌ ಕಬ್ಬು, 18ಹೆಕ್ಟೇರ್‌ ಭತ್ತದ ಬೆಳೆ ಜಲಾವೃತವಾಗಿ ನಾಶವಾಗಿದೆ. ಮಳವಳ್ಳಿ ತಾಲ್ಲೂಕಿನ ನದಿ ಪಾತ್ರದ ಗ್ರಾಮಗಳಾದ ಬೆಳಕವಾಡಿ, ಪುರಿಗಾಲಿ, ಉಲ್ಲಂಬಳ್ಳಿ ಗ್ರಾಮದ ರೈತರ 20 ಎಕರೆ ಭತ್ತ, ಜೋಳ ಸೇರಿದಂತೆ ವಿವಿಧ ಬೆಳೆಗಳು, 5ಎಕರೆ ತೋಟ ಪ್ರವಾಹಕ್ಕೆ ಸಿಕ್ಕಿ ಕೊಚ್ಚಿ ಹೋಗಿದೆ.

ಪಾಂಡವಪುರ ತಾಲ್ಲೂಕಿನ ಎಣ್ಣೆಹೊಳ ಕೊಪ್ಪಲು, ಚೆಲುವರಸಿನ ಕೊಪ್ಪಲು ಗ್ರಾಮಗಳಲ್ಲಿ 25 ಎಕರೆಗೂ ಹೆಚ್ಚು ಭತ್ತದ ಬೆಳೆ ನಾಶವಾಗಿದೆ. ಕೆ.ಆರ್‌. ಪೇಟೆ ತಾಲ್ಲೂಕಿನ ಹೇಮಾವತಿ ನದಿ ತೀರದಲ್ಲಿ 35ಎಕರೆ ಶುಂಠಿ, ಬಾಳೆ, ತೆಂಗು ಸೇರಿದಂತೆ ವಿವಿಧ ಬೆಳೆಗಳು ಹಾನಿಗೊಳಗಾಗಿದೆ.

‘ಭತ್ತದ ಗದ್ದೆಗಳು ಕೊಚ್ಚಿ ಹೋಗಿವೆ. ನಮ್ಮ ಗದ್ದೆ ಯಾವುದು ಎಂದು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ನಮ್ಮ ಜಮೀನಿಗೆ ಭೇಟಿ ನೀಡಿ ನಮ್ಮ ಕಷ್ಟ ನೋಡಬೇಕು, ಪರಿಹಾರ ಕೊಡಬೇಕು’ ಎಂದು ರೈತ ರಾಜೇಗೌಡ ನೋವು ತೋಡಿಕೊಂಡರು.

Post Comments (+)