ಶನಿವಾರ, ಆಗಸ್ಟ್ 24, 2019
28 °C

ಕೆಆರ್‌ಎಸ್‌ ಭರ್ತಿಗೆ ಅರ್ಧ ಅಡಿ ಬಾಕಿ

Published:
Updated:

ಮಂಡ್ಯ: ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೆಆರ್‌ಎಸ್‌ ಜಲಾಶಯ ಭರ್ತಿಯಾಗಲು ಕೇವಲ ಅರ್ಧ ಅಡಿ ಬಾಕಿ ಉಳಿದಿದೆ. ಜಲಾಶಯ 124.80 ಅಡಿ ಗರಿಷ್ಠ ಮಟ್ಟ ಹೊಂದಿದ್ದು ಮಂಗಳವಾರ ಸಂಜೆಯ ವೇಳೆಗೆ ಜಲಾಶಯದ ನೀರಿನ ಮಟ್ಟ 124.30 ಅಡಿ ನೀರು ದಾಖಲಾಗಿತ್ತು.

ಕೊಡಗಿನ ಪ್ರವಾಹದ ಹಿನ್ನೆಲೆಯಲ್ಲಿ ಆ.5ರಿಂದೀಚೆಗೆ ಜಲಾಶಯಕ್ಕೆ 41 ಅಡಿ ನೀರು ಹರಿದು ಬಂದಿದೆ. ಆ.5ರಂದು ಜಲಾಶಯದ ನೀರಿನ ಮಟ್ಟ 83.50 ಅಡಿ ಇತ್ತು. ಹೇಮಾವತಿ ಜಲಾಶಯದಿಂದಲೂ ನೀರು ಹರಿದು ಬರುತ್ತಿದ್ದ ಕಾರಣ ಬಂದಷ್ಟು ನೀರನ್ನು ನದಿಗೆ ಹರಿಸಲಾಗುತ್ತಿತ್ತು. ಸೋಮವಾರದಿಂದ ಒಳಹರಿವು ತಗ್ಗಿದ್ದು ಹೊರಹರಿವನ್ನೂ ಕಡಿಮೆ ಮಾಡಲಾಗಿದೆ. ಮಂಗಳವಾರ ಸಂಜೆ 54,496 ಕ್ಯುಸೆಕ್‌ ಒಳಹರಿವು, 43,093 ಕ್ಯುಸೆಕ್‌ ಹೊರಹರಿವು ಇತ್ತು.

ಕಳೆದ ವರ್ಷ ಅಕ್ಟೋಬರ್‌ 7ರಂದು ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿತ್ತು. ಕನ್ನಂಬಾಡಿ ಕಟ್ಟೆ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಸಂಭ್ರಮ ಮನೆ ಮಾಡಿದೆ. ಜಿಲ್ಲೆಯ ನಾಲೆಗಳಿಗೂ 2,761 ಕ್ಯಸೆಕ್‌ ನೀರು ಹರಿಸಲಾಗುತ್ತಿದೆ. ರೈತರು ಭತ್ತದ ಪಾತಿ ಮಾಡಿಕೊಂಡಿದ್ದು ನಾಟಿಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ದಿನಾಂಕ ಪಡೆದು ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಲಾಗುವುದು’ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದರು.

Post Comments (+)