ಮಂಗಳವಾರ, ಮೇ 24, 2022
29 °C

ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬಿಎಸ್‌ವೈ, ಡಿಕೆಶಿ ಜೈಲಿಗೆ: ರವಿಕೃಷ್ಣಾ ರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಂಡವಪುರ: ‘ರಾಜ್ಯದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಅಧಿಕಾರಕ್ಕೆ ಬಂದರೆ ಬಿ.ಎಸ್.ಯಡಿಯೂರಪ್ಪ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಹಾಗೂ ಆರಗ ಜ್ಞಾನೇಂದ್ರ ಸೇರಿದಂತೆ ಎಲ್ಲ ಭ್ರಷ್ಟ ರಾಜಕಾರಣಿಗಳನ್ನು ಜೈಲಿಗೆ ಕಳುಹಿಸುತ್ತೇವೆ’ ಎಂದು ಕೆಆರ್‌ಎಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಪ್ರತಿಪಾದಿಸಿದರು.

‘ರಾಜ್ಯದ ಎಲ್ಲಾ ಸಂಪತ್ತು ರಾಜಕಾರಣಿಗಳ ಬಳಿ ಇದೆ. ಅವರು ತೊಲಗದ ಹೊರತು ರಾಜ್ಯಕ್ಕೆ ಮೋಕ್ಷವಿಲ್ಲ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಬಹುತೇಕ ಕೆಎಎಸ್ ಅಧಿಕಾರಿಗಳು ತಾಳಿಭಾಗ್ಯ ಸ್ಕೀಂನಲ್ಲಿ ಹರಾಜಾಗಿದ್ದಾರೆ. 1998, 1999 ಹಾಗೂ 2004ರಲ್ಲಿ ಆಯ್ಕೆಯಾದವರು ಅಕ್ರಮದ ಫಲಾನುಭವಿಗಳಾಗಿದ್ದಾರೆ. 2003ರ ಬ್ಯಾಚ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ತಹಶೀಲ್ದಾರ್, ಉಪವಿಭಾಗಾಧಿಕಾರಿ ಹುದ್ದೆಗಳು ಹರಾಜಾಗಿವೆ ಎಂದು ಸಿಐಡಿ ವರದಿಯಲ್ಲಿ ದಾಖಲಿಸಲಾಗಿದೆ’ ಎಂದರು.

‘ಮುಖ್ಯಮಂತ್ರಿ ಸ್ಥಾನಕ್ಕಾಗಿ ₹2,500 ಕೋಟಿ ಕೇಳಿದ್ದರು ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಷ್ಟು ಸಾವಿರ ಕೋಟಿ ನೀಡಿದ್ದಾರೆ? ₹ 45 ಸಾವಿರದಿಂದ ₹50 ಸಾವಿರ ಸಂಬಳದ ಪಿಎಸ್‌ಐ ಹುದ್ದೆ ಒಂದೂವರೆ ಕೋಟಿಗೆ ಹರಾಜಾಗುತ್ತಿದೆ ಎಂದರೆ ಮುಖ್ಯಮಂತ್ರಿ ಸ್ಥಾನ ₹ 2 ಸಾವಿರ ಕೋಟಿಗೆ ಹರಾಜಾಗುವುದರಲ್ಲಿ ಅನುಮಾನವಿಲ್ಲ. ಹೀಗಾಗಿಯೇ ಪಿಎಸ್‌ಐ ಹಗರಣದ ಬಗ್ಗೆ ಮುಖ್ಯಮಂತ್ರಿ ತುಟಿ ಬಿಚ್ಚುತಿಲ್ಲ. ಗೃಹ ಸಚಿವರಿಗೆ ಗೊತ್ತಿಲ್ಲದೆ ಪಿಎಸ್‌ಐ ನೇಮಕಾತಿಯಲ್ಲಿ ಅವ್ಯವಹಾರ ಆಗಲು ಸಾಧ್ಯವೇ? ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

‘ರಾಜ್ಯದಲ್ಲಿ ಸ್ವಚ್ಛ ಆಡಳಿತ ನೀಡಲೆಂದೇ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದೇವೆ. ಹಣ, ಹೆಂಡ ಹಂಚುವುದಿಲ್ಲ’ ಎಂದರು.

ಪಕ್ಷದ ರಾಜ್ಯ ಉಪಾಧ್ಯಕ್ಷ ಲಿಂಗೇಗೌಡ, ಜಂಟಿ ಕಾರ್ಯದರ್ಶಿ ಸೋಮಸುಂದರ್, ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್, ತಾಲ್ಲೂಕು ಘಟಕದ ಅಧ್ಯಕ್ಷ ವಿಶ್ವನಾಥ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು