ಮಂಡ್ಯ: ₹ 2 ಲಾಭಕ್ಕೆ ₹5 ಸಾವಿರ ದಂಡ ಪಾವತಿಸಿದ ಕೆಎಸ್‌ಆರ್‌ಟಿಸಿ

ಮಂಡ್ಯ: ಇಲ್ಲಿನ ಕೆಎಸ್‌ಆರ್‌ಟಿಸಿ ಉಪ ವಿಭಾಗವು ₹ 2 ಲಾಭಕ್ಕಾಗಿ ₹5,000 ದಂಡ ಪಾವತಿಸಿದೆ.
ವಕೀಲ ಎನ್.ಚನ್ನಬಸಪ್ಪ ಅವರು 2022ರ ಜೂನ್ 21ರಂದು ಕಾರ್ಯನಿಮಿತ್ತ ಮಂಡ್ಯದಿಂದ ಮದ್ದೂರಿಗೆ ಮಂಡ್ಯ ಉಪ ವಿಭಾಗದ ಕೆಎಸ್‌ಆರ್‌ಟಿಸಿ ಸಿಟಿ ಬಸ್‌ನಲ್ಲಿ ಪ್ರಯಾಣಿಸಿದ್ದರು. ಈ ಸಂದರ್ಭದಲ್ಲಿ ನಿರ್ವಾಹಕ ಅವರಿಗೆ ₹ 25ರ ಟಿಕೆಟ್ ನೀಡಿದ್ದರು.
ಮದ್ದೂರಿನಿಂದ ಮಂಡ್ಯಕ್ಕೆ ವಾಪಾಸಾಗುವಾಗ ಅದೇ ಸಾರಿಗೆ ಸಂಸ್ಥೆಯ ಬಸ್‌ನವರು ₹ 23ರ ಟಿಕೆಟ್ ನೀಡಿದ್ದರು. ಇದನ್ನು ಪ್ರಶ್ನೆ ಮಾಡಿದಾಗ, ಹೆಚ್ಚುವರಿ ₹ 2 ತೆಗೆದುಕೊಂಡಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಅವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.
ಪ್ರಕರಣದಲ್ಲಿ ರಾಜ್ಯ ಸರ್ಕಾರ, ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ, ಡಿಪೋ ಮ್ಯಾನೇಜರ್ ಮತ್ತು ನಿರ್ವಾಹಕರನ್ನು ಪ್ರತಿವಾದಿಯಾಗಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷೆ ಸಿ.ಎಂ.ಚಂಚಲಾ, ಸದಸ್ಯರಾದ ಎಸ್.ವಸಂತ್‌ಕುಮಾರ್, ಎಂ.ಎಸ್.ಲತಾ ಅವರು ಸಾರಿಗೆ ಸಂಸ್ಥೆಯ ‘ಅನುಚಿತ ವ್ಯಾಪಾರ ಪದ್ಧತಿ ಮತ್ತು ಸೇವಾ ನ್ಯೂನತೆ’ ಗುರುತಿಸಿ ₹5,000 ದಂಡ ವಿಧಿಸಿದ್ದಾರೆ.
ಪರಿಹಾರದ ಹಣವನ್ನು ಎದುರುದಾರರಿಂದ ಪಡೆಯುವಂತೆ ಆಯೋಗವು ತೀರ್ಪು ನೀಡಿದ್ದು, ಆದೇಶವಾದ 45 ದಿನದೊಳಗೆ ಪಾವತಿ ಮಾಡುವಂತೆ ಸೂಚಿಸಿದೆ. ತಪ್ಪಿದರೆ ವಾರ್ಷಿಕ ಶೇ 10ರ ಬಡ್ಡಿ ದರ ವಸೂಲು ಮಾಡುವಂತೆ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.