ಕಾವೇರಿ ನದಿಯಲ್ಲಿ ಲಕ್ಷ ಕ್ಯುಸೆಕ್‌ ನೀರು: ಮನೆ, ದೇಗುಲ, ಜಮೀನು ಮುಳುಗಡೆ

7

ಕಾವೇರಿ ನದಿಯಲ್ಲಿ ಲಕ್ಷ ಕ್ಯುಸೆಕ್‌ ನೀರು: ಮನೆ, ದೇಗುಲ, ಜಮೀನು ಮುಳುಗಡೆ

Published:
Updated:
Deccan Herald

ಶ್ರೀರಂಗಪಟ್ಟಣ: ಕೆಆರ್‌ಎಸ್‌ ಜಲಾಶಯದಿಂದ ಕಾವೇರಿ ನದಿಗೆ ಒಂದು ಲಕ್ಷ ಕ್ಯುಸೆಕ್‌ಗೂ ಹೆಚ್ಚು ನೀರು ಹರಿಯಬಿಡಲಾಗಿದ್ದು, ನದಿ ಉಕ್ಕಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶದ ಮನೆ, ದೇವಾಲಯ ಹಾಗೂ ಕೃಷಿ ಜಮೀನುಗಳು ಮುಳುಗಡೆಯಾಗಿವೆ.

ಜಲಾಶಯದ ಪ್ಲಸ್‌ 103 ಮಟ್ಟದ 56 ಗೇಟ್‌ಗಳ ಮೂಲಕ 1 ಲಕ್ಷದ 2 ಸಾವಿರ ಕ್ಯೂಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ. ಜಲಾಶಯದ ತಗ್ಗಿನಲ್ಲಿರುವ ರಂಗನತಿಟ್ಟು ಪಕ್ಷಿಧಾಮದಲ್ಲಿ ನದಿ ನೀರಿನ ಮಟ್ಟ ಹೆಚ್ಚಿದೆ. ಮಂಗಳವಾರ ಬೆಳಿಗ್ಗೆಯಿಂದ ಪ್ರವಾಸಿಗರಿಗೆ ಪಕ್ಷಿಧಾಮ ಪ್ರವೇಶ ನಿಷೇಧಿಸಲಾಗಿದೆ. ಐಬಿಸ್‌, ಕಾರ್ಮೊರೆಂಟ್‌, ಹೆರಾನ್‌, ಇಗ್ರೆಟ್ಸ್‌ ಜಾತಿಯ ಪಕ್ಷಿಗಳು ಎತ್ತರದ ಮರಗಳ ಮೇಲೆ ಆಶ್ರಯ ಪಡೆದಿವೆ. ಪಕ್ಷಿ ಸಂಕುಲಕ್ಕೆ ಯಾವುದೇ ಅಪಾಯ ಉಂಟಾಗಿಲ್ಲ ಎಂದು ಪಕ್ಷಿಧಾಮದ ಡಿಆರ್‌ಎಫ್‌ಒ ಪುಟ್ಟಮಾದೇಗೌಡ ತಿಳಿಸಿದ್ದಾರೆ.

ಪಟ್ಟಣದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಮೇಲೆ ಜನ ಹಾಗೂ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಸಮೀಪದ ಗೌತಮ ಕ್ಷೇತ್ರ ಜಲಾವೃತವಾಗಿದ್ದು, ಗಜಾನನ ಸ್ವಾಮೀಜಿ ಸೇರಿ ಐವರು ಅಲ್ಲೇ ಉಳಿದಿದ್ದಾರೆ. ಗೌತಮ ಕ್ಷೇತ್ರದ ದ್ವೀಪ ಎತ್ತರದಲ್ಲಿದ್ದು ಅಪಾಯವಿಲ್ಲದೆ ಸುರಕ್ಷಿತವಾಗಿದ್ದೇವೆ ಎಂದು ಗಜಾನನ ಸ್ವಾಮೀಜಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಪಶ್ಚಿಮ ವಾಹಿನಿಯಲ್ಲಿರುವ ಈಶ್ವರ, ಹನುಮಂತ ಹಾಗೂ ವೇಣುಗೋಪಾಲಸ್ವಾಮಿ ದೇವಾಲಯಗಳು ಭಾಗಶಃ ಮುಳುಗಿವೆ. ವೆಲ್ಲೆಸ್ಲಿ ಬಡಾವಣೆಯ ಆಂಜನೇಯಸ್ವಾಮಿ ದೇವಾಲಯ ಅರ್ಧದಷ್ಟು ಮಳುಗಿದೆ. ಜೀಬಿ ಗೇಟ್‌ ಬಳಿಯ ಚಂದ್ರಮೌಳೇಶ್ವರ ಹಾಗೂ ಬಿದ್ದುಕೋಟೆ ಗಣಪತಿ ದೇವಾಲಯಗಳಿಗೂ ನೀರು ಹರಿದಿದೆ. ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿರುವ ಸತ್ಯ ಸಾಯಿಬಾಬಾ ಮಂದಿರ ಜಲಾವೃತವಾಗಿದೆ. ಬ್ರಹ್ಮಪುರ ಬಳಿಯ ಕಾವೇರಿ ಕನ್ಯಾ ಗುರುಕುಲಕ್ಕೂ ನೀರು ನುಗ್ಗಿದೆ.

15 ದಿನಗಳ ಹಿಂದಷ್ಟೇ ಉಕ್ಕಿ ಹರಿದಿದ್ದ ಕಾವೇರಿ ನದಿ ಇದೀಗ ಮತ್ತಷ್ಟು ಮೈದುಂಬಿ ಹರಿಯುತ್ತಿದ್ದು, ತಾಲ್ಲೂಕಿನ ಕಾರೇಕುರ, ಬೆಳಗೊಳ, ಮರಳಾಗಾಲ, ನಗುವನಹಳ್ಳಿ, ಚಂದಗಾಲು, ಮೇಳಾಪುರ, ಗಂಜಾಂ, ಮಹದೇವಪುರ ಗ್ರಾಮಗಳ ಬಳಿ ನದಿ ಅಂಚಿನ ಕೃಷಿ ಜಮೀನುಗಳು ಮುಳುಗಡೆಯಾಗಿವೆ. ಭತ್ತ, ಕಬ್ಬು ಬೆಳೆಗಳು ಜಲಾವೃತವಾಗಿವೆ. 1992ರ ನಂತರ ಕಾವೇರಿ ನದಿ ಈ ಪ್ರಮಾಣದಲ್ಲಿ ತುಂಬಿ ಹರಿಯುತ್ತಿದೆ ಎಂದು ಪಟ್ಟಣದ ಹಿರಿಯ ನಾಗರಿಕ ಜಯರಾಂ ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !