ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣದಲ್ಲಿ ಜ.15ರಿಂದ ವೈಭವದ ಲಕ್ಷದೀಪೋತ್ಸವ

Last Updated 13 ಜನವರಿ 2019, 11:43 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಆದಿರಂಗ ಎಂದೇ ಪ್ರಸಿದ್ಧಿ ಪಡೆದಿರುವ ಇಲ್ಲಿನ ಆರಾಧ್ಯ ದೈವ ಶ್ರೀರಂಗನಾಥಸ್ವಾಮಿಯ ಸನ್ನಿಧಿಯಲ್ಲಿ ಜ.15ರಂದು ಲಕ್ಷ ದೀಪೋತ್ಸವ ಜರುಗುತ್ತಿದ್ದು, ಈ ಉತ್ಸವಕ್ಕೆ ಸಾವಿರಾರು ಜನರು ಸಾಕ್ಷಿಯಾಗಲಿದ್ದಾರೆ.

ಪಟ್ಟಣದ ಲಕ್ಷ ದೀಪೋತ್ಸವ ಆಚರಣಾ ಸಮಿತಿ 29 ವರ್ಷಗಳಿಂದ ದೀಪೋತ್ಸವ ಆಚರಿಸಿಕೊಂಡು ಬರುತ್ತಿದೆ. ದೇವಾಲಯದ ಮುಂದಿನ 200 ಮೀಟರ್ ಉದ್ದ ಲಂಬವಾಗಿ ದೀಪಗಳನ್ನು ಜೋಡಿಸಿ ಬೆಳಗಲಾಗುತ್ತದೆ. ಪೂರ್ವ- ಪಶ್ಚಿಮವಾಗಿ ದೇವಾಲಯದ ರಾಯ ಗೋಪುರದಿಂದ ಗಂಡಭೇರುಂಡ ವೃತ್ತದ ವರೆಗೆ ದೀಪಗಳನ್ನು ಒಪ್ಪವಾಗಿ ಜೋಡಿಸಿ ಬೆಳಗಲಾಗುತ್ತದೆ.

ಸಾವಿರ ಲೀಟರ್ ಎಣ್ಣೆ: ಸಿಮೆಂಟ್ ರಸ್ತೆಯ ಮೇಲೆ ಮಾತ್ರವಲ್ಲದೆ, ಇಕ್ಕೆಲಗಳಲ್ಲಿ ಅಡಿಕೆ ಮರದ ದಬ್ಬೆಗಳನ್ನು ಇಟ್ಟು 12 ಸಾಲುಗಳಲ್ಲಿ ಮಣ್ಣಿನ ದೀಪಗಳನ್ನು ಜೋಡಿಸಿ ಎಣ್ಣೆ ಎರೆಯಲಾಗುತ್ತದೆ. ಅದಕ್ಕಾಗಿ ಒಂದು ಸಾವಿರ ಲೀಟರ್ ಎಣ್ಣೆ ಬಳಸಲಾಗುತ್ತದೆ. ಗೋಧೂಳಿ ಲಗ್ನದಲ್ಲಿ ದೀಪೋತ್ಸವಕ್ಕೆ ಚಾಲನೆ ಸಿಗುವುದು ವಾಡಿಕೆ. ಸಂಜೆ 6.30ಕ್ಕೆ ಆರಂಭವಾಗುವ ದೀಪೋತ್ಸವವನ್ನು ರಾತ್ರಿ 11.30ರ ವರೆಗೆ ಕಣ್ತುಂಬಿಕೊಳ್ಳಬಹುದು.

ಶ್ರೀರಂಗನಾಥಸ್ವಾಮಿ ದೇಗುಲ ಮಾತ್ರವಲ್ಲದೆ ಐತಿಹಾಸಿಕ ಗಂಗಾಧರ, ಲಕ್ಷ್ಮಿನರಸಿಂಹ ಹಾಗೂ ಪೇಟೆ ನಾರಾಯಣಸ್ವಾಮಿ ದೇವಾಲಯಗಳ ಆವರಣದಲ್ಲಿ ಕೂಡ ದೀಪಗಳನ್ನು ಜೋಡಿಸಿ ಬೆಳಗಿಸಲಾಗುತ್ತದೆ. ದೀಪದಿಂದ ದೀಪ ಬೆಳಗಿಸಲು ವಿವಿಧೆಡೆಗಳಿಂದ ಭಕ್ತರು ಇಲ್ಲಿಗೆ ಬರುತ್ತಾರೆ. ಸ್ಥಳೀಯರು ಮಾತ್ರವಲ್ಲದೆ ಮಂಡ್ಯ, ಮೈಸೂರು ನಗರಗಳಿಂದ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಜನರು ತಂಡೋಪತಂಡವಾಗಿ ದೀಪೋತ್ಸವಕ್ಕೆ ಬರಲಿದ್ದು, ಪಟ್ಟಣದಲ್ಲಿ ಜನ ಜಾತ್ರೆಯೇ ಸೇರುತ್ತದೆ.

ಬೆಣ್ಣೆ ಅಲಂಕಾರ: ಲಕ್ಷ ದೀಪೋತ್ಸವದಂದು ಶ್ರೀರಂಗನಾಥಸ್ವಾಮಿಗೆ ಬೆಣ್ಣೆ ಅಲಂಕಾರ ಮಾಡಿ ವಿಶೇಷವಾಗಿ ಪೂಜಿಸಲಾಗುತ್ತದೆ. ಹತ್ತಾರು ಕೆ.ಜಿ. ಬೆಣ್ಣೆಯನ್ನು ಭಕ್ತರು ಉಚಿತವಾಗಿ ನೀಡುತ್ತಾ ಬಂದಿದ್ದಾರೆ. ಮಕರ ಸಂಕ್ರಾಂತಿಯಂದು ಇಲ್ಲಿ ಸ್ವರ್ಗದ ಬಾಗಿಲು ತೆರೆದು ಭಕ್ತರಿಗೆ ವಿಶೇಷ ಸೇವೆ ಒದಗಿಸುವ ಪದ್ಧತಿ ಶತಮಾನಗಳಿಂದ ನಡೆದುಕೊಂಡು ಬಂದಿದೆ.

'ಪ್ರತಿ ವರ್ಷ ಸಂಕ್ರಾಂತಿಯಂದು ಶ್ರೀರಂಗನಾಥಸ್ವಾಮಿ ಸನ್ನಿಧಿಯಲ್ಲಿ ಲಕ್ಷ ದೀಪೋತ್ಸವ ನಡೆಯುತ್ತದೆ. ಲಕ್ಷ ದೀಪೋತ್ಸವ ಆಚರಣಾ ಸಮಿತಿ ಉಸ್ತುವಾರಿಯಲ್ಲಿ ಅಭಿನವ ಭಾರತ ತಂಡ ಇತರ ಸಂಘ, ಸಂಸ್ಥೆಗಳು ಸಹಕಾರದಲ್ಲಿ ದೀಪೋತ್ಸವ ಜರುಗುತ್ತದೆ. ಈ ಬಾರಿ ಲಕ್ಷ ದೀಪೋತ್ಸವದಂದು ಪ್ರತಿ ಮನೆಯ ಮುಂದೆ ದೀಪ ಬೆಳಗುವಂತೆ ನಾಗರಿಕರಿಗೆ ತಿಳಿಸಿದ್ದೇವೆ' ಎಂದು ಅಭಿನವ ಭಾರತ್ ತಂಡದ ಮುಖ್ಯಸ್ಥ ಕೆ.ಎಸ್. ಲಕ್ಷ್ಮೀಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT